ಅಂಬೇಡ್ಕರ್‌ನಗರ(ಉತ್ತರಪ್ರದೇಶ): ಉತ್ತರ ಪ್ರದೇಶದ ಅಂಬೇಡ್ಕರ್‌ನಗರ ಜಿಲ್ಲೆಯಿಂದ ನಾಚಿಕೆಗೇಡಿನ ಮತ್ತು ನೋವಿನ ಘಟನೆಯೊಂದು ಬೆಳಕಿಗೆ ಬಂದಿದೆ. ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ ವಿದ್ಯಾರ್ಥಿನಿಯೊಬ್ಬಳ ದುಪಟ್ಟಾವನ್ನು ಬೈಕ್ ಸವಾರನೊಬ್ಬ ಎಳೆದ ಪರಿಣಾಮ ಆಕೆ ರಸ್ತೆಗೆ ಬಿದ್ದಿದ್ದಾಳೆ. ಈ ವೇಳೆ ಹಿಂಬದಿಯಿಂದ ಬಂದ ಬೈಕ್ ಆಕೆಯ ತಲೆ ಹರಿದ ಪರಿಣಾಮ ತಲೆ ನುಜ್ಜುಗುಜ್ಜಾಗಿದ್ದು, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಮಾಹಿತಿ ಪ್ರಕಾರ, ಜಿಲ್ಲೆಯ ಹನ್ಸ್ವರ್ ಬಸ್ತಿಯ ಬರ್ಹಿ ಎದಿಲ್‌ಪುರ ಗ್ರಾಮದ ಹೀರಾಪುರ ಇಂಟರ್ ಕಾಲೇಜಿನ 17 ವರ್ಷದ ವಿದ್ಯಾರ್ಥಿನಿ ಮೃತ ದುರ್ದೈವಿ. ಶುಕ್ರವಾರ ವಿದ್ಯಾರ್ಥಿನಿ ಕಾಲೇಜು ಮುಗಿಸಿ ಸೈಕಲ್ ನಲ್ಲಿ ಮನೆಗೆ ಹೋಗುತ್ತಿದ್ದಳು. ಆಕೆ ಹೀರಾಪುರ್ ಮಾರ್ಕೆಟ್ ಬಳಿ ಬರುತ್ತಿದ್ದಾಗ ಹಿಂದಿನಿಂದ ಬಂದ ದುಷ್ಕರ್ಮಿ ಯುವಕರು ಆಕೆಯ ದುಪ್ಪಟ್ಟಾ ಎಳೆದಿದ್ದರಿಂದ ಆಕೆ ರಸ್ತೆಗೆ ಬಿದ್ದಿದ್ದು, ಹಿಂದಿನಿಂದ ವೇಗವಾಗಿ ಬಂದ ಬೈಕ್ ಆಕೆಯ ತಲೆಯ ಮೇಲೆ ಹರಿದಿತ್ತು.
ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗಳಾಗಿದ್ದು, ದವಡೆ ಮುರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ನಡೆದ ಸ್ಥಳದಲ್ಲಿದ್ದ ಆಕೆಯ ಸಹ ವಿದ್ಯಾರ್ಥಿನಿ ಮತ್ತು ಮಾರುಕಟ್ಟೆಯ ನಿವಾಸಿಗಳು ಆಕೆಯನ್ನು ಮುಂಡೇರಾ ಮಾರ್ಕೆಟ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಲ್ಲಿ ವೈದ್ಯರು ಆಕೆ ಸಾವನ್ನಪ್ಪಿರುವುದಾಗಿ ಘೋಷಿಸಿದರು.
ಶನಿವಾರದಂದು ವಿದ್ಯಾರ್ಥಿನಿಯ ಕಿರುಕುಳದ ಸಿಸಿಟಿವಿ ದೃಶ್ಯಾವಳಿಗಳು ಅಂತರ್ಜಾಲ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪೊಲೀಸರು ಕ್ರಮ ಕೈಗೊಂಡು ಆರೋಪಿಗಳಾದ ಶಹವಾಜ್ ಮತ್ತು ಅರ್ಬಾಜ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಠಾಣೆಯ ಮುಖ್ಯಸ್ಥ ರಿತೇಶ್ ಪಾಂಡೆ ತಿಳಿಸಿದ್ದಾರೆ. ಈ ಹಿಂದೆ ಕಿರುಕುಳದ ದೂರು ಇರಲಿಲ್ಲ. ಪ್ರಕರಣದ ತನಿಖೆಯನ್ನು ಪ್ರದೇಶಾಧಿಕಾರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಜಿತ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ. ತನಿಖೆಯಲ್ಲಿ ಯಾರೇ ತಪ್ಪಿತಸ್ಥರಾದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಆರೋಪಿಗಳು ತಮ್ಮ ಮಗಳು ನ್ಯಾನ್ಸಿ ಹಾಗೂ ಇತರ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದಾರೆ ಎಂದು ಮೃತ ವಿದ್ಯಾರ್ಥಿಯ ತಂದೆ ಸಭಾಜೀತ್ ವರ್ಮಾ ಆರೋಪಿಸಿದ್ದಾರೆ. ಮೃತರು ಮತ್ತು ಇತರ ವಿದ್ಯಾರ್ಥಿನಿಯರು ಈ ಬಗ್ಗೆ ತಮ್ಮ ಮನೆಗಳಲ್ಲಿ ಹಲವಾರು ಬಾರಿ ದೂರು ನೀಡಿದ್ದರು. ಈ ಬಗ್ಗೆ ಪೊಲೀಸರಿಗೂ ದೂರು ನೀಡಲಾಗಿತ್ತು. ಆದರೆ ಅವರು ಕ್ರಮ ಕೈಗೊಳ್ಳದೇ ಉಡಾಫೆ ಭರವಸೆ ನೀಡಿದ್ದು ಇಂದು ತಮ್ಮ ಮಗಳ ಪ್ರಾಣ ಹೋಗುವಂತಾಗಿದೆ ಎಂದು ಆರೋಪಿಸಿದ್ದಾರೆ.
Advertisement