ಹೈದರಾಬಾದ್-ಬೆಂಗಳೂರು ನಡುವೆ ಸೇರಿ 9 ವಂದೇ ಭಾರತ್ ರೈಲುಗಳಿಗೆ ಭಾನುವಾರ ಪ್ರಧಾನಿ ಮೋದಿ ಚಾಲನೆ!

11 ರಾಜ್ಯಗಳ ಧಾರ್ಮಿಕ ಮತ್ತು ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ಒಂಬತ್ತು ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಲಿದ್ದಾರೆ. ಈ ಒಂಬತ್ತು ರೈಲುಗಳು ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಬಿಹಾರ, ಪಶ್ಚಿಮ ಬಂಗಾಳ, ಕೇರಳ, ಒಡಿಶಾ, ಜಾರ್ಖಂಡ್ ಮತ್ತು ಗುಜರಾತ್ ರಾಜ್ಯಗಳಲ್ಲಿ ಸಂಚರಿಸಲಿವೆ.
ವಂದೇ ಭಾರತ್ ಎಕ್ಸ್‌ಪ್ರೆಸ್ (ಪ್ರಾತಿನಿಧಿಕ ಚಿತ್ರ)
ವಂದೇ ಭಾರತ್ ಎಕ್ಸ್‌ಪ್ರೆಸ್ (ಪ್ರಾತಿನಿಧಿಕ ಚಿತ್ರ)

ನವದೆಹಲಿ: 11 ರಾಜ್ಯಗಳ ಧಾರ್ಮಿಕ ಮತ್ತು ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ಒಂಬತ್ತು ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಲಿದ್ದಾರೆ. 

ಈ ಒಂಬತ್ತು ರೈಲುಗಳು ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಬಿಹಾರ, ಪಶ್ಚಿಮ ಬಂಗಾಳ, ಕೇರಳ, ಒಡಿಶಾ, ಜಾರ್ಖಂಡ್ ಮತ್ತು ಗುಜರಾತ್ ರಾಜ್ಯಗಳಲ್ಲಿ ವೇಗದ ಸಂಪರ್ಕವನ್ನು ಒದಗಿಸುತ್ತವೆ.
ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ರೈಲುಗಳಿಗೆ ಚಾಲನೆ ನೀಡಲಿದ್ದಾರೆ.

ಈ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಉದಯಪುರ - ಜೈಪುರ; ತಿರುನಲ್ವೇಲಿ-ಮಧುರೈ-ಚೆನ್ನೈ; ಹೈದರಾಬಾದ್-ಬೆಂಗಳೂರು; ವಿಜಯವಾಡ - ಚೆನ್ನೈ (ರೇಣಿಗುಂಟಾ ಮೂಲಕ); ಪಾಟ್ನಾ- ಹೌರಾ; ಕಾಸರಗೋಡು- ತಿರುವನಂತಪುರ; ರೂರ್ಕೆಲಾ - ಭುವನೇಶ್ವರ- ಪುರಿ; ರಾಂಚಿ- ಹೌರಾ ಮತ್ತು ಜಾಮ್‌ನಗರ-ಅಹಮದಾಬಾದ್ ನಡುವೆ ಸಂಚರಿಸಲಿವೆ.
ಈ ರೈಲುಗಳು ದೇಶದಾದ್ಯಂತ ಸಂಪರ್ಕವನ್ನು ಸುಧಾರಿಸುವ ಮತ್ತು ರೈಲು ಪ್ರಯಾಣಿಕರಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸುವ ಪ್ರಧಾನ ಮಂತ್ರಿಯವರ ದೃಷ್ಟಿಯನ್ನು ಸಾಕಾರಗೊಳಿಸುವತ್ತ ಒಂದು ಹೆಜ್ಜೆಯಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
'ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ತಮ್ಮ ಕಾರ್ಯಾಚರಣೆಯ ಮಾರ್ಗಗಳಲ್ಲಿ ಅತ್ಯಂತ ವೇಗವಾಗಿ ಸಂಚರಿಸುತ್ತವೆ ಮತ್ತು ಪ್ರಯಾಣಿಕರಿಗೆ ಸಾಕಷ್ಟು ಸಮಯವನ್ನು ಉಳಿಸಲು ಸಹಾಯ ಮಾಡುತ್ತವೆ' ಎಂದು ಅದು ಹೇಳಿದೆ.

ರೂರ್ಕೆಲಾ- ಭುವನೇಶ್ವರ - ಪುರಿ ಮತ್ತು ಕಾಸರಗೋಡು- ತಿರುವನಂತಪುರಂ ಮಾರ್ಗದಲ್ಲಿ ಸದ್ಯದ ವೇಗದ ರೈಲಿಗೆ ಹೋಲಿಸಿದರೆ, ವಂದೇ ಭಾರತ್ ರೈಲುಗಳು ಆಯಾ ಸ್ಥಳಗಳ ನಡುವಿನ ಪ್ರಯಾಣದ ಸಮಯವನ್ನು ಸುಮಾರು ಮೂರು ಗಂಟೆಗಳಷ್ಟು ಕಡಿತಗೊಳಿಸುತ್ತವೆ. ಹೈದರಾಬಾದ್- ಬೆಂಗಳೂರು ನಡುವೆ 2.5 ಗಂಟೆಗಳಿಗಿಂತ ಹೆಚ್ಚು ಮತ್ತು ತಿರುನೆಲ್ವೇಲಿ-ಮಧುರೈ-ಚೆನ್ನೈ ನಡುವೆ 2 ಗಂಟೆಗಳಿಗಿಂತ ಹೆಚ್ಚು ಸಮಯ ಉಳಿತಾಯವಾಗಲಿದೆ.

ರಾಂಚಿ- ಹೌರಾ ಮತ್ತು ಪಾಟ್ನಾ- ಹೌರಾ ಮತ್ತು ಜಾಮ್‌ನಗರ-ಅಹಮದಾಬಾದ್ ನಡುವಿನ ಪ್ರಯಾಣದ ಸಮಯವು ಸುಮಾರು ಒಂದು ಗಂಟೆ ಕಡಿಮೆಯಾಗಲಿದೆ. ಉದಯಪುರ-ಜೈಪುರ ನಡುವಿನ ಪ್ರಯಾಣದ ಸಮಯ ಸುಮಾರು ಅರ್ಧ ಗಂಟೆ ಕಡಿಮೆಯಾಗಲಿದೆ.

ರೂರ್ಕೆಲಾ-ಭುವನೇಶ್ವರ್- ಪುರಿ ಮತ್ತು ತಿರುನಲ್ವೇಲಿ-ಮಧುರೈ-ಚೆನ್ನೈ ರೈಲುಗಳು ಪ್ರಮುಖ ಧಾರ್ಮಿಕ ಪಟ್ಟಣಗಳಾದ ಪುರಿ ಮತ್ತು ಮಧುರೈಗಳಿಗೆ ಸಂಪರ್ಕ ಒದಗಿಸುತ್ತವೆ. ಅಲ್ಲದೆ, ವಿಜಯವಾಡ- ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್ ರೇಣಿಗುಂಟಾ ಮಾರ್ಗವಾಗಿ ಪ್ರಮುಖ ಯಾತ್ರಾ ಸ್ಥಳವಾದ ತಿರುಪತಿಗೆ ಸಂಪರ್ಕ ಒದಗಿಸುತ್ತದೆ.

ಈ ವಂದೇ ಭಾರತ್ ರೈಲುಗಳ ಪರಿಚಯವು ದೇಶದಲ್ಲಿ ಹೊಸ ಗುಣಮಟ್ಟದ ರೈಲು ಸೇವೆಗೆ ನಾಂದಿ ಹಾಡಲಿದೆ. ಕವಚ್ ತಂತ್ರಜ್ಞಾನ ಸೇರಿದಂತೆ ವಿಶ್ವದರ್ಜೆಯ ಸೌಕರ್ಯಗಳು ಮತ್ತು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಈ ರೈಲುಗಳು ಸಾಮಾನ್ಯ ಜನರು, ವೃತ್ತಿಪರರು, ಉದ್ಯಮಿಗಳು, ವಿದ್ಯಾರ್ಥಿ ಸಮುದಾಯ ಮತ್ತು ಪ್ರವಾಸಿಗರಿಗೆ ಆಧುನಿಕ, ವೇಗದ ಮತ್ತು ಆರಾಮದಾಯಕ ಪ್ರಯಾಣವನ್ನು ಒದಗಿಸುವ ಪ್ರಮುಖ ಹೆಜ್ಜೆಯಾಗಿದೆ  ಎಂದು ಹೇಳಿಕೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com