ನಿತೀಶ್ ಕುಮಾರ್ ಎನ್‌ಡಿಎಗೆ ಮರಳುವುದಾದರೆ ಸ್ವಾಗತ: ಕೇಂದ್ರ ಸಚಿವ
ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಎನ್‌ಡಿಎಗೆ ಮರಳುವುದಾದರೆ ಸ್ವಾಗತಿಸುವುದಾಗಿ ರಾಷ್ಟ್ರೀಯ ಲೋಕ ಜನತಾ ಪಕ್ಷದ(ಆರ್‌ಎಲ್‌ಜೆಪಿ) ಮುಖ್ಯಸ್ಥ ಮತ್ತು ಕೇಂದ್ರ ಸಚಿವ ಪಶುಪತಿ ಕುಮಾರ್ ಪರಾಸ್ ಅವರು ಮಂಗಳವಾರ ಹೇಳಿದ್ದಾರೆ.
ನಿತೀಶ್ ಕುಮಾರ್ ಅವರು ಎನ್‌ಡಿಎಗೆ ಮರಳುವ ಸಾಧ್ಯತೆಯ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಪರಾಸ್, ಅವರು ಎನ್‌ಡಿಎಗೆ ಮರಳಿದರೆ ಅವರನ್ನು ಸ್ವಾಗತಿಸಲಾಗುವುದು ಎಂದರು.
2024ರ ಲೋಕಸಭೆ ಚುನಾವಣೆಗೆ ಮುನ್ನ ನಿತೀಶ್ ಕುಮಾರ್ ಅವರು ಮತ್ತೊಮ್ಮೆ ಬಿಜೆಪಿಯೊಂದಿಗೆ ಕೈಜೋಡಿಸುತ್ತಾರೆ ಎಂಬ ಊಹಾಪೋಹಗಳಿಗೆ ಪಾರಸ್ ಅವರ ಹೇಳಿಕೆ ಸ್ವಲ್ಪ ಪುಷ್ಠಿ ನೀಡಿದ್ದರೂ, ಸೋಮವಾರ ತಾವು ಎನ್‌ಡಿಎಗೆ ಹಿಂತಿರುಗುವುದಿಲ್ಲ ಎಂದು ಬಿಹಾರ ಸಿಎಂ ಸ್ಪಷ್ಟಪಡಿಸಿದ್ದಾರೆ.
ಇದಕ್ಕೂ ಮುನ್ನ, ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಬಿಜೆಪಿಯ ಹಿರಿಯ ನಾಯಕ ವಿಜಯ್ ಕುಮಾರ್ ಸಿನ್ಹಾ ಅವರು, ನಿತೀಶ್ ಎನ್‌ಡಿಎಗೆ ಮರಳುತ್ತಾರೆ ಎಂಬ ಊಹಾಪೋಹಗಳ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ರಾಷ್ಟ್ರೀಯವಾದಿ, ಪ್ರಾಮಾಣಿಕ ಮತ್ತು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಯಲ್ಲಿ ನಂಬಿಕೆ ಇರುವ ಯಾರನ್ನಾದರೂ ಬಿಜೆಪಿ ಸ್ವಾಗತಿಸುತ್ತದೆ ಎಂದಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ