ಚಂದ್ರಬಾಬು ನಾಯ್ಡು ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಎಸ್‌ವಿಎನ್ ಭಟ್ಟಿ

ಕೌಶಲ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತಮ್ಮ ವಿರುದ್ಧದ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಸಲ್ಲಿಸಿದ್ದ ಅರ್ಜಿ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಎಸ್‌ವಿಎನ್ ಭಟ್ಟಿ ಬುಧವಾರ ಹಿಂದೆ ಸರಿಸಿದ್ದಾರೆ.
ಸುಪ್ರೀಂ ಕೋರ್ಟ್ - ಎನ್ ಚಂದ್ರಬಾಬು ನಾಯ್ಡು
ಸುಪ್ರೀಂ ಕೋರ್ಟ್ - ಎನ್ ಚಂದ್ರಬಾಬು ನಾಯ್ಡು

ನವದೆಹಲಿ: ಕೌಶಲ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತಮ್ಮ ವಿರುದ್ಧದ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಸಲ್ಲಿಸಿದ್ದ ಅರ್ಜಿ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಎಸ್‌ವಿಎನ್ ಭಟ್ಟಿ ಬುಧವಾರ ಹಿಂದೆ ಸರಿಸಿದ್ದಾರೆ.

ಈ ಅರ್ಜಿಯು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್‌ವಿಎನ್ ಭಟ್ಟಿ ಅವರಿದ್ದ ಪೀಠದ ಮುಂದೆ ವಿಚಾರಣೆಗೆ ಬಂದ ತಕ್ಷಣ, ಖನ್ನಾ ಅವರು, 'ನನ್ನ ಸಹೋದ್ಯೋಗಿಗೆ (ಎಸ್‌ವಿಎನ್ ಭಟ್ಟಿ) ಈ ಅರ್ಜಿ ವಿಚಾರಣೆ ನಡೆಸಲು ಸ್ವಲ್ಪ ಕಷ್ಟವಾಗುತ್ತಿದೆ. ಹೀಗಾಗಿ, ಮುಂದಿನ ವಾರ ಮತ್ತೊಂದು ಪೀಠದ ಮುಂದೆ ಪಟ್ಟಿ ಮಾಡಲು ನಾವು ನಿರ್ದೇಶಿಸುತ್ತಿದ್ದೇವೆ' ಎಂದು ಹೇಳಿದರು.

ಬಳಿಕ, ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಅವರ ನೇತೃತ್ವದ ಪೀಠದ ಮುಂದೆ ತುರ್ತು ವಿಚಾರಣೆಗಾಗಿ ಮನವಿ ಮಾಡಲು ಅನುಮತಿ ನೀಡುವಂತೆ ಚಂದ್ರಬಾಬು ನಾಯ್ಡು ಪರ ಹಾಜರಾಗಿದ್ದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಮನವಿ ಮಾಡಿದರು.

ನಾಯ್ಡು ಅವರನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಹರೀಶ್ ಸಾಳ್ವೆ, ಸದ್ಯದ ಪೀಠವು ಈ ವಿಷಯವನ್ನು ಆಲಿಸದಿದ್ದರೆ, ಅದನ್ನು ನಂತರ ವಿಚಾರಣೆಗೆ ಪರಿಗಣನೆಗೆ ತೆಗೆದುಕೊಳ್ಳುವಲ್ಲಿ ವಿಳಂಬವಾಗುತ್ತದೆ. ಬದಲಾಗಿ, ಮುಂದಿನ ವಾರಕ್ಕೆ ನ್ಯಾಯಾಲಯವು ನೇರವಾಗಿ ಈ ವಿಷಯವನ್ನು ವಿಚಾರಣೆಗೆ ಪಟ್ಟಿ ಮಾಡಬೇಕು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಖನ್ನಾ, ಪೀಠವು ನಿರ್ದಿಷ್ಟ ದಿನಾಂಕದಂದು ನೇರವಾಗಿ ವಿಚಾರಣೆಗೆ ಪಟ್ಟಿ ಮಾಡಲು ಸಾಧ್ಯವಿಲ್ಲ. ಆದರೆ, ಮುಂದಿನ ವಾರ ವಿಚಾರಣೆಗೆ ತೆಗೆದುಕೊಳ್ಳಲು ಆದೇಶಿಸಬಹುದು ಎಂದು ಹೇಳಿದರು.

ಕೌಶಲ ಅಭಿವೃದ್ಧಿ ನಿಗಮದಲ್ಲಿ ಆಪಾದಿತ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಎಫ್‌ಐಆರ್ ಅನ್ನು ರದ್ದುಗೊಳಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಆಂಧ್ರ ಪ್ರದೇಶದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ನಾಯ್ಡು ಅವರು ಸೆಪ್ಟೆಂಬರ್ 23ರಂದು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಕಳೆದ ಶುಕ್ರವಾರ ಅವರ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com