ಅದು ನನ್ನ ಮಗುವೇ ಆಗಿದ್ದರೆ..!; ನನ್ನ ಮಗನನ್ನು ಗಲ್ಲಿಗೇರಿಸಿ: ಉಜ್ಜಯಿನಿ ಅತ್ಯಾಚಾರ ಆರೋಪಿ ತಂದೆಯ ನೋವಿನ ನುಡಿ

ಇಡೀ ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ಉಜ್ಜಯಿನಿ ಬಾಲಕಿಯ ಅತ್ಯಾಚಾರ ಆರೋಪಿಯನ್ನು ಕೂಡಲೇ ಗಲ್ಲಿಗೇರಿಸುವಂತೆ ಆತನ ತಂದೆಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಜ್ಜಯಿನಿ ಅತ್ಯಾಚಾರ
ಉಜ್ಜಯಿನಿ ಅತ್ಯಾಚಾರ
Updated on

ಉಜ್ಜಯಿನಿ: ಇಡೀ ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ಉಜ್ಜಯಿನಿ ಬಾಲಕಿಯ ಅತ್ಯಾಚಾರ ಆರೋಪಿಯನ್ನು ಕೂಡಲೇ ಗಲ್ಲಿಗೇರಿಸುವಂತೆ ಆತನ ತಂದೆಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು.. ಉಜ್ಜಯಿನಿಯಲ್ಲಿ 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧಿತನಾಗಿರುವ ಆರೋಪಿಯನ್ನು ಕೂಡಲೇ ಗಲ್ಲಿಗೇರಿಸುವಂತೆ ಆತನ ತಂದೆ ಒತ್ತಾಯಿಸಿದ್ದಾರೆ. 'ಇದು ನಾಚಿಕೆಗೇಡಿನ ಕೃತ್ಯ. ಇಡೀ ಮಾನವ ಕುಲವೇ ತಲೆ ತಗ್ಗಿಸುವ ಹೀನ ಕೃತ್ಯ. ಇಲ್ಲಿ ಅಪರಾಧಿ ಯಾರಾದರೂ ಸರಿ ಆತನಿಗೆ ಮರಣದಂಡನೆ ವಿಧಿಸಬೇಕು. ಅದು ನನ್ನ ಮಗನಾಗಿದ್ದರೂ ಸರಿ.. ಕೂಡಲೇ ಆತನನ್ನು ಗಲ್ಲಿಗೇರಿಸಬೇಕು ಎಂದು ಆರೋಪಿಯ ತಂದೆ ಹೇಳಿದ್ದಾರೆ.

ಅಂತೆಯೇ ಮಗನ ಹೀನಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು, ಅತ್ಯಾಚಾರಕ್ಕೆ ತುತ್ತಾದ ಮಗು ನನ್ನ ಮಗುವೇ ಆಗಿದ್ದರೆ..! ಎಂದು ವಿಷಾಧ ವ್ಯಕ್ತಪಡಿಸಿದರು. ಅಲ್ಲದೆ ನಾನು ಅವರನ್ನು ಭೇಟಿ ಮಾಡಲು ಆಸ್ಪತ್ರೆಗೆ ಹೋಗಿಲ್ಲ, ನಾನು ಪೊಲೀಸ್ ಠಾಣೆ ಅಥವಾ ನ್ಯಾಯಾಲಯಕ್ಕೆ ಹೋಗುವುದಿಲ್ಲ. ನನ್ನ ಮಗ ಅಪರಾಧ ಮಾಡಿದ್ದಾನೆ, ಆದ್ದರಿಂದ ಅವನನ್ನು ಗಲ್ಲಿಗೇರಿಸಬೇಕು ಎಂದು ಹೇಳಿದ್ದಾರೆ.

ಇತ್ತ ಆರೋಪಿ ಪರವಾಗಿ ಯಾವುದೇ ವಕೀಲರು ನ್ಯಾಯಾಲಯದಲ್ಲಿ ವಾದಿಸಬಾರದು ಎಂದು ಸ್ಥಳೀಯ ವಕೀಲರ ಸಂಘ ಮನವಿ ಮಾಡಿದೆ. ಉಜ್ಜಯಿನಿ ಬಾರ್ ಕೌನ್ಸಿಲ್ ಅಧ್ಯಕ್ಷ ಅಶೋಕ್ ಯಾದವ್ ಮಾತನಾಡಿ, ಈ ಘಟನೆಯಿಂದ ದೇವಸ್ಥಾನ ನಗರಿಯ ಪ್ರತಿಷ್ಠೆಗೆ ಧಕ್ಕೆಯಾಗಿದೆ. ಈ ಆರೋಪಿಯ ಪ್ರಕರಣವನ್ನು ಕೈಗೆತ್ತಿಕೊಳ್ಳದಂತೆ ನಮ್ಮ ಸದಸ್ಯರಿಗೆ ಮನವಿ ಮಾಡುತ್ತಿದ್ದೇವೆ ಎಂದರು.

ಏತನ್ಮಧ್ಯೆ, ಪ್ರತಿಪಕ್ಷ ಕಾಂಗ್ರೆಸ್ ಈ ಘಟನೆಯ ಬಗ್ಗೆ ಮಧ್ಯಪ್ರದೇಶದ ಬಿಜೆಪಿ ಸರ್ಕಾರವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ಮುಂದುವರೆಸಿದ್ದು, ಪ್ರಕರಣದ ಕುರಿತ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ "ಮೌನ" ವನ್ನು ಪ್ರಶ್ನಿಸಿದೆ.

ಏನಿದು ಘಟನೆ?
12 ವರ್ಷದ ಅಪ್ರಾಪ್ತ ಬಾಲಕಿ ಸತ್ನಾ ಜಿಲ್ಲೆಗೆ ಸೇರಿದ್ದು, ಕಳೆದ ಸೋಮವಾರ ಉಜ್ಜಯಿನಿಯ ಮಹಾಕಾಲ್ ಪೊಲೀಸ್ ಠಾಣೆ ವ್ಯಾಪ್ತಿಯ ರಸ್ತೆಯಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದಳು. ನಂತರ, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪ್ರಾಥಮಿಕ ವೈದ್ಯಕೀಯ ಪರೀಕ್ಷೆಯ ನಂತರ ಆಕೆಯ ಮೇಲೆ ಅತ್ಯಾಚಾರವೆಸಗಿರುವುದು ದೃಢಪಟ್ಟಿತ್ತು. ಮೂರು ದಿನಗಳ ನಂತರ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆಟೋರಿಕ್ಷಾ ಚಾಲಕ ಭರತ್ ಸೋನಿ ಎಂಬಾತನನ್ನು ವಶಕ್ಕೆ ತೆಗೆದುಕೊಂಡಿದ್ದರು.

ಆಟೋರಿಕ್ಷಾದ ಪ್ರಯಾಣಿಕರ ಸೀಟಿನಲ್ಲಿ ರಕ್ತದ ಕಲೆಗಳು ಇರುವುದನ್ನು ಪೊಲೀಸರು ಪತ್ತೆ ಮಾಡಿದ್ದರು. ಆರೋಪಿಗಳು ಅತ್ಯಾಚಾರವೆಸಗಿ ಆಕೆಯನ್ನು ಎಲ್ಲೋ ಎಸೆದು ಪರಾರಿಯಾಗಿದ್ದರು. ಬಾಲಕಿ ರಕ್ತಸಿಕ್ತ ಸ್ಥಿತಿಯಲ್ಲಿ ಸಹಾಯ ಬೇಡುತ್ತಾ 8 ಕಿ.ಮೀ ನಡೆದುಕೊಂಡು ಬಂದಿದ್ದಾಳೆ. ಬಾಲಕಿಯನ್ನು ಇಂದೋರ್‌ನ ಸರ್ಕಾರಿ ಮಹಾರಾಜ ತುಕೋಜಿರಾವ್ ಹೋಳ್ಕರ್ ಮಹಿಳಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಾಲಕಿಗೆ ವೈದ್ಯರ ತಂಡವು ಶಸ್ತ್ರಚಿಕಿತ್ಸೆ ಮಾಡಿದೆ ಮತ್ತು ಆಕೆಯ ಸ್ಥಿತಿ ಗಂಭೀರವಾಗಿದೆ, ಆದರೆ ಸ್ಥಿರವಾಗಿದೆ.

ತನಿಖೆಗಾಗಿ ಅಪರಾಧ ಸ್ಥಳಕ್ಕೆ ಕರೆದೊಯ್ಯುವಾಗ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಸೋನಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com