ವಿಪಕ್ಷಗಳಿಂದ ಗದ್ದಲ: ಲೋಕಸಭೆ, ರಾಜ್ಯಸಭೆಯ ಕಲಾಪ ಮತ್ತೆ ಮುಂದೂಡಿಕೆ

ಪ್ರತಿಪಕ್ಷಗಳ ಗದ್ದಲದ ಹಿನ್ನೆಲೆಯಲ್ಲಿ ಲೋಕಸಭೆಯ ಕಲಾಪವನ್ನು ಬುಧವಾರ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ರಾಜ್ಯಸಭೆಯಲ್ಲಿಯೂ ಗದ್ದಲದಿಂದಾಗಿ ಮಧ್ಯಾಹ್ನ 2 ಗಂಟೆಗೆ ಕಲಾಪವನ್ನು ಮುಂದೂಡಲಾಯಿತು.
ಸಂಸತ್ ಭವನ
ಸಂಸತ್ ಭವನ

ನವದೆಹಲಿ: ಪ್ರತಿಪಕ್ಷಗಳ ಗದ್ದಲದ ಹಿನ್ನೆಲೆಯಲ್ಲಿ ಲೋಕಸಭೆಯ ಕಲಾಪವನ್ನು ಬುಧವಾರ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. 

ಕಲಾಪ ಆರಂಭವಾಗುತ್ತಲೇ ಪ್ರತಿಪಕ್ಷಗಳ ಸದಸ್ಯರು ಘೋಷಣೆಗಳನ್ನು ಕೂಗುತ್ತಾ ಅದಾನಿ ವಿಷಯದ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಒತ್ತಾಯಿಸಿದರು.

ಲೋಕಸಭೆಯ ಸಭಾಧ್ಯಕ್ಷರಾಗಿ ಕುಳಿತಿದ್ದ ಮೀರತ್ ಸಂಸದ ರಾಜೇಂದ್ರ ಅಗರ್ವಾಲ್, ಎಲ್ಲಾ ಸದಸ್ಯರು ತಮ್ಮ ಆಸನಗಳಿಗೆ ತೆರಳಿ ಕಲಾಪದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಪ್ರಶ್ನೋತ್ತರ ಅವಧಿ ಬಹಳ ಮಹತ್ವದ್ದಾಗಿದ್ದು, ಹಲವು ಪ್ರಮುಖ ವಿಷಯಗಳ ಚರ್ಚೆ ನಡೆಯಲಿದೆ. ದಯವಿಟ್ಟು ನಿಮ್ಮ ಆಸನಗಳಿಗೆ ಹಿಂತಿರುಗಿ ಎಂದು ಅವರು ಮನವಿ ಮಾಡಿದರು.

ಆದರೆ, ವಿರೋಧ ಪಕ್ಷದ ಸದಸ್ಯರು ಅವರ ಮನವಿಯನ್ನು ನಿರ್ಲಕ್ಷಿಸಿ ಧರಣಿ ಮುಂದುವರಿಸಿದರು. ಅಗರ್ವಾಲ್ ಅವರು ಕಲಾಪ ಆರಂಭವಾದ ಕೆಲವೇ ನಿಮಿಷಗಳಲ್ಲಿ ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

ಪ್ರತಿಪಕ್ಷಗಳು ಮತ್ತು ಖಜಾನೆ ಪೀಠಗಳ ಪ್ರತಿಭಟನೆಯಿಂದಾಗಿ ಮಾರ್ಚ್ 13 ರಂದು ಬಜೆಟ್ ಅಧಿವೇಶನದ ಎರಡನೇ ಭಾಗವು ಪ್ರಾರಂಭವಾದಾಗಿನಿಂದಲೂ ಲೋಕಸಭೆಯ ಕಲಾಪಕ್ಕೆ ಅಡ್ಡಿಯಾಗಿದೆ.

ಪ್ರತಿಪಕ್ಷಗಳು ಅದಾನಿ ವಿಚಾರದಲ್ಲಿ ಜೆಪಿಸಿ ತನಿಖೆಗೆ ಒತ್ತಾಯಿಸುತ್ತಿದ್ದರೆ, ಖಜಾನೆ ಪೀಠಗಳು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಲಂಡನ್‌ನಲ್ಲಿ ಹೇಳಿಕೆ ಕುರಿತು ಕ್ಷಮೆಯಾಚಿಸಬೇಕೆಂದು ಒತ್ತಾಯಿಸುತ್ತಿವೆ.

ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್‌ನ ನ್ಯಾಯಾಲಯವು ದೋಷಿ ಎಂದು ನಿರ್ಣಯಿಸಿದ ನಂತರ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.

ಸಂಸತ್ತಿನಲ್ಲಿ ನಡೆಯುತ್ತಿರುವ ಬಜೆಟ್‌ ಅಧಿವೇಶನದ ಎರಡನೇ ಭಾಗವು ಏಪ್ರಿಲ್ 6ರ ಗುರುವಾರದಂದು ಮುಕ್ತಾಯಗೊಳ್ಳಲಿದೆ.

ರಾಜ್ಯಸಭೆಯೂ ಮಧ್ಯಾಹ್ನ 2 ಗಂಟೆಗೆ ಮುಂದೂಡಿಕೆ

ಅದಾನಿ ಗ್ರೂಪ್ ವಿರುದ್ಧದ ವಂಚನೆ ಆರೋಪಗಳ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಒತ್ತಾಯಿಸಿ ವಿರೋಧ ಪಕ್ಷದ ಸಂಸದರು ಘೋಷಣೆಗಳನ್ನು ಕೂಗಿದ್ದರಿಂದ ರಾಜ್ಯಸಭೆಯ ಕಲಾಪವನ್ನು ಬುಧವಾರ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

ಕಲಾಪ ಆರಂಭವಾಗುತ್ತಲೇ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕೆಲವು ವಿಷಯಗಳನ್ನು ಪ್ರಸ್ತಾಪಿಸಲು ಎದ್ದು ನಿಂತರು. ಇತರ ವಿರೋಧ ಪಕ್ಷಗಳ ಸಂಸದರು ಅವರನ್ನು ಬೆಂಬಲಿಸಿದರು.

ಆದರೆ, ಪಟ್ಟಿ ಮಾಡಲಾದ ದಾಖಲೆಗಳನ್ನು ಸದನದ ಮೇಜಿನ ಮೇಲೆ ಇಡುವವರೆಗೆ ಕಾಯುವಂತೆ ಸಭಾಪತಿ ಜಗದೀಪ್ ಧನಕರ್ ಅವರನ್ನು ಕೇಳಿದರು. ಹಲವಾರು ವಿರೋಧ ಪಕ್ಷದ ಸಂಸದರ ಘೋಷಣೆಗಳ ನಡುವೆ ಪಟ್ಟಿ ಮಾಡಲಾದ ಪೇಪರ್‌ಗಳನ್ನು ಮೇಜಿನ ಮೇಲೆ ಇಡಲಾಯಿತು.

ಅವರು 'ಮೋದಿ-ಅದಾನಿ ಭಾಯಿ ಭಾಯಿ, ದೇಶ್ ಬೆಚ್ ಕರ್ ಖಯೀನ್ ಮಲೈ' ಮತ್ತು 'ನಮಗೆ ಜೆಪಿಸಿ ತನಿಖೆ ಬೇಕು' ಎಂಬ ಘೋಷಣೆಗಳನ್ನು ಕೂಗುತ್ತಿದ್ದರು.

ರಾಜ್ಯಸಭೆಯ ನಿಯಮ 267ರ ಅಡಿಯಲ್ಲಿ ದಿನದ ನಿಗದಿತ ಕಲಾಪವನ್ನು ಸ್ಥಗಿತಗೊಳಿಸುವಂತೆ ಖರ್ಗೆ ಅವರಿಂದ ನೋಟಿಸ್ ಬಂದಿದೆ ಎಂದು ಸಭಾಪತಿ ಹೇಳುತ್ತಿದ್ದಂತೆ ಘೋಷಣೆಗಳು ತೀವ್ರಗೊಂಡವು. ಧನಕರ್ ಅವರು ನೋಟಿಸ್ ಓದುತ್ತಿದ್ದಂತೆ, ಎಎಪಿಯ ಸಂಜಯ್ ಸಿಂಗ್ ಅವರು ಘೋಷಣೆಗಳನ್ನು ಕೂಗುತ್ತಾ ಸದನದ ಬಾವಿಗೆ ಪ್ರವೇಶಿಸಿದರು.

ಕೆಲವು ಕಾಂಗ್ರೆಸ್ ಸಂಸದರು ಅವರೊಂದಿಗೆ ಸೇರಿಕೊಂಡರು. ಪ್ರತಿಭಟನೆಯ ಸಂಕೇತವಾಗಿ ಹಲವಾರು ಕಾಂಗ್ರೆಸ್ ಸಂಸದರು ಕಪ್ಪು ಬಟ್ಟೆ ಧರಿಸಿದ್ದರು. ಬಳಿಕ ಗದ್ದಲದ ನಡುವೆಯೇ ಸಭಾಪತಿಯವರು ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com