ವಿದೇಶದಲ್ಲಿ ವ್ಯಾಸಂಗ ಮಾಡಲು ಪಾಸ್‌ಪೋರ್ಟ್ ಪಡೆದ ಮೆಹಬೂಬಾ ಪುತ್ರಿ ಇಲ್ತಿಜಾ ಮುಫ್ತಿ
ಸಿಐಡಿಯ ವ್ಯತಿರಿಕ್ತ ವರದಿಯ ಹೊರತಾಗಿಯೂ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ, ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರ ಪುತ್ರಿ ಇಲ್ತಿಜಾ ಮುಫ್ತಿ ಅವರಿಗೆ ವಿದೇಶದಲ್ಲಿ ವ್ಯಾಸಂಗ ಮಾಡಲು ಎರಡು ವರ್ಷಗಳ ಸೀಮಿತ ಅವಧಿಗೆ...
Published: 06th April 2023 07:57 PM | Last Updated: 06th April 2023 07:57 PM | A+A A-

ಇಲ್ತಿಜಾ ಮುಫ್ತಿ
ಶ್ರೀನಗರ: ಸಿಐಡಿಯ ವ್ಯತಿರಿಕ್ತ ವರದಿಯ ಹೊರತಾಗಿಯೂ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ, ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರ ಪುತ್ರಿ ಇಲ್ತಿಜಾ ಮುಫ್ತಿ ಅವರಿಗೆ ವಿದೇಶದಲ್ಲಿ ವ್ಯಾಸಂಗ ಮಾಡಲು ಎರಡು ವರ್ಷಗಳ ಸೀಮಿತ ಅವಧಿಗೆ ಪಾಸ್‌ಪೋರ್ಟ್ ನೀಡಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
35ರ ಹರೆಯದ ಇಲ್ತಿಜಾ ಅವರು ಪ್ರಯಾಣದ ದಾಖಲೆಗಾಗಿ ತಾವು ಸಲ್ಲಿಸಿದ ಅರ್ಜಿಯನ್ನು ತೆರವುಗೊಳಿಸದ ಹಿನ್ನೆಲೆಯಲ್ಲಿ ವ್ಯಾಸಂಗಕ್ಕಾಗಿ ಪಾಸ್‌ಪೋರ್ಟ್ ನೀಡುವಂತೆ ಕೋರಿ ಕಳೆದ ಫೆಬ್ರವರಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಇದನ್ನು ಓದಿ: ಪ್ರತಿಪಕ್ಷಗಳ ಮೇಲೆ ಬಿಜೆಪಿ ದಾಳಿಯ ಬಗ್ಗೆ ಪಿಡಿಪಿ ಮೌನವಾಗಿರುವುದಿಲ್ಲ: ಮೆಹಬೂಬಾ ಮುಫ್ತಿ
ಇಲ್ತಿಜಾ ಅವರ ಪಾಸ್‌ಪೋರ್ಟ್ ಅವಧಿಯು ಜನವರಿ 2 ರಂದು ಮುಕ್ತಾಯಗೊಂಡಿತ್ತು. ಆದರೆ ಅವರು ಕಳೆದ ವರ್ಷ ಜೂನ್ 8 ರಂದು ಮುಂಚಿತವಾಗಿ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದ್ದರು.
ಪ್ರಾದೇಶಿಕ ಪಾಸ್‌ಪೋರ್ಟ್ ಕಛೇರಿಯು ಹೆಚ್ಚುವರಿ ಸಾಲಿಸಿಟರ್ ಜನರಲ್‌ಗೆ ಬರೆದ ಪತ್ರದ ಪ್ರಕಾರ, ಉನ್ನತ ವ್ಯಾಸಂಗ ಮಾಡಲು ಇಚ್ಛಿಸುವ ಇಲ್ತಿಜಾ ಅವರಿಗೆ ಪಾಸ್‌ಪೋರ್ಟ್ ನೀಡಲಾಗಿದ್ದು, ಇದು ಏಪ್ರಿಲ್ 5, 2023 ರಿಂದ ಏಪ್ರಿಲ್ 4, 2025 ರವರೆಗೆ ಮಾನ್ಯವಾಗಿರುತ್ತದೆ ಎಂದು ತಿಳಿಸಲಾಗಿದೆ.
ಕಳೆದ ಫೆಬ್ರವರಿಯಲ್ಲಿ ಜಮ್ಮು ಮತ್ತು ಕಾಶ್ಮೀರ ವಿಶೇಷ ಪೊಲೀಸ್ ಮಹಾನಿರ್ದೇಶಕ(ಸಿಐಡಿ)ರಿಂದ ಸ್ವೀಕರಿಸಿದ ಸಿಐಡಿ/ಪೊಲೀಸ್ ಪರಿಶೀಲನಾ ವರದಿಯು ಇಲ್ತಿಜಾಗೆ ಪಾಸ್‌ಪೋರ್ಟ್ ನೀಡಲು ವಿರೋಧ ವ್ಯಕ್ತಪಡಿಸಿದೆ ಎಂದು ಪತ್ರವನ್ನು ಉಲ್ಲೇಖಿಸಿ ಅಧಿಕಾರಿಗಳು ಹೇಳಿದ್ದಾರೆ.