ತಿಂಗಳ ಅವಧಿಯಲ್ಲಿ 2 ಸಾವು: ಕುನೊ ಉದ್ಯಾನದಿಂದ ಚೀತಾಗಳ ಬೇರೆಡೆ ಸ್ಥಳಾಂತರಿಸಿ; ಕೇಂದ್ರ ಸರ್ಕಾರಕ್ಕೆ ಮಧ್ಯಪ್ರದೇಶ ಪತ್ರ

ಕೇವಲ ಒಂದು ತಿಂಗಳ ಅವಧಿಯಲ್ಲಿ 2ನೇ ಚೀತಾ ಸಾವನ್ನಪ್ಪಿದ ಪ್ರಕರಣದ ಬೆನ್ನಲ್ಲೇ ಇದೀಗ ಮಧ್ಯ ಪ್ರದೇಶ ಸರ್ಕಾರ ಚೀತಾಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.
ಚೀತಾ
ಚೀತಾ
Updated on

ಭೋಪಾಲ್: ಕೇವಲ ಒಂದು ತಿಂಗಳ ಅವಧಿಯಲ್ಲಿ 2ನೇ ಚೀತಾ ಸಾವನ್ನಪ್ಪಿದ ಪ್ರಕರಣದ ಬೆನ್ನಲ್ಲೇ ಇದೀಗ ಮಧ್ಯ ಪ್ರದೇಶ ಸರ್ಕಾರ ಚೀತಾಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.

ಮಧ್ಯಪ್ರದೇಶದ ಕುನೊ ಉದ್ಯಾನದಲ್ಲಿರುವ ಚೀತಾಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಕೋರಿ ಮಧ್ಯ ಪ್ರದೇಶದ ಅರಣ್ಯ ಇಲಾಖೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಕುನೊ ಉದ್ಯಾನದಲ್ಲಿ ಕಳೆದ ಒಂದು ತಿಂಗಳ ಅಂತರದಲ್ಲೇ ಎರಡು ಚೀತಾ ಮೃತಪಟ್ಟಿವೆ. ಹೀಗಾಗಿ ಚೀತಾಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಇಲಾಖೆ ಕೇಳಿಕೊಂಡಿದೆ. 

‘ಕುನೊ ಉದ್ಯಾನದಲ್ಲಿ ಚೀತಾಗಳಿಗೆ ಅಗತ್ಯವಾಗಿರುವ ಸೌಲಭ್ಯಗಳು ಇಲ್ಲ. ಚೀತಾಗಳ ಮೇಲೆ ನಿಗಾ ವಹಿಸಲು ಇಲ್ಲಿ ಸಿಬ್ಬಂದಿ ಕೊರತೆ ಇದೆ. ಚೀತಾಗಳಿಗೆ ಓಡಾಡಲು ಬೇಕಾದಷ್ಟು ಜಾಗವೂ ಇಲ್ಲ’ ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರಕ್ಕೆ ಚೀತಾ ಗಳನ್ನು ಸ್ಥಳಾಂತರಿಸುವ ಬಗ್ಗೆ ಪತ್ರ ಬರೆಯಲಾಗಿದೆ ಎಂದು ಮಧ್ಯ ಪ್ರದೇಶದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಜೆ.ಎಸ್. ಚೌಹಾಣ್‌ ತಿಳಿಸಿದರು. 

‘ಕುನೊ ಉದ್ಯಾನವನಕ್ಕೆ ಚೀತಾಗಳು ಹೊಂದಿಕೊಳ್ಳದಿದ್ದರೆ ಅವುಗಳನ್ನು ರಾಜಸ್ಥಾನದ ಮುಕುಂದರಾ ಹಿಲ್ಸ್‌ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವ ಯೋಜನೆಯನ್ನು ಮಾಡಲಾಗಿತ್ತು’ ಎಂದು ಪತ್ರದಲ್ಲಿ ಹೇಳಲಾಗಿದೆ.

1 ಚೀತಾ ನೋಡಿಕೊಳ್ಳಲು 9 ಜನ:
ಆಫ್ರಿಕಾದಿಂದ ತರಲಾಗಿದ್ದ ಚೀತಾಗಳ ಪೈಕಿ ಮಾರ್ಚ್‌ನಲ್ಲಿ ಒಂದು ಹಾಗೂ ಈ ಭಾನುವಾರ ಇನ್ನೊಂದು ಮೃತಪಟ್ಟಿವೆ. ಒಂದು ಚೀತಾ ನಾಲ್ಕು ಮರಿಗಳನ್ನು ಹಾಕಿದೆ. ಚೀತಾಗಳನ್ನು ಮಧ್ಯಪ್ರದೇಶದ 748 ಚದರ ಕಿ.ಮೀ. ವಿಸ್ತೀರ್ಣದ ಕುನೋ ನ್ಯಾಷನಲ್‌ ಪಾರ್ಕ್‌ನಲ್ಲಿ ಬಿಡುವ ನಿರ್ಧಾರ ಕೈಗೊಂಡಿದ್ದಾಗಲೇ ಕೆಲ ವನ್ಯಜೀವಿ ತಜ್ಞರು ಅಷ್ಟು ಜಾಗ ಸಾಲದು ಎಂದಿದ್ದರು. ಈಗ ಮಧ್ಯ ಪ್ರದೇಶ ಅರಣ್ಯ ಇಲಾಖೆಯು ಜಾಗದ ಸಮಸ್ಯೆಯ ಜೊತೆಗೆ ಸಿಬ್ಬಂದಿಯ ಕೊರತೆಯೂ ಇದೆ. ಒಂದು ಚೀತಾವನ್ನು ನೋಡಿಕೊಳ್ಳಲು 9 ಜನರು ಬೇಕು. ಅಷ್ಟು ಸಿಬ್ಬಂದಿ ನಮ್ಮಲ್ಲಿಲ್ಲ. ಹೀಗಾಗಿ ಚೀತಾಗಳಿಗೆ ಬೇರೆ ಜಾಗ ತೋರಿಸಬೇಕು ಎಂದು ‘ಚೀತಾ ಯೋಜನೆ’ ಉಸ್ತುವಾರಿ ಹೊತ್ತಿರುವ ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರಕ್ಕೆ ಪತ್ರ ಬರೆದಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

1 ಚೀತಾಕ್ಕೆ 100 ಚ. ಕಿಮೀ ವಿಸ್ತೀರ್ಣದ ಅರಣ್ಯ ಬೇಕು:
ಕೆಲ ಚೀತಾಗಳು ಕುನೋ ಅರಣ್ಯದಲ್ಲಿ ಜಾಗ ಸಾಲದೆ ಪದೇಪದೇ ಬೇರೆ ಅರಣ್ಯಕ್ಕೆ ಹೋಗುತ್ತಿರುವುದು ಇತ್ತೀಚೆಗೆ ವರದಿಯಾಗಿತ್ತು. ಒಂದು ಚೀತಾಕ್ಕೆ ಸಂಚರಿಸಲು ಸರಾಸರಿ 100 ಚ.ಕಿ.ಮೀ. ಅರಣ್ಯ ಬೇಕಾಗುತ್ತದೆ. ಇನ್ನು, ಕುನೋ ರಾಷ್ಟ್ರೀಯ ಉದ್ಯಾನವನ್ನೇ ಚೀತಾಗಳಿಗೆ ಯೋಗ್ಯವಾಗಿ ಮಧ್ಯಪ್ರದೇಶದ ಗಾಂಧಿ ಸಾಗರ್‌ ಅಥವಾ ನೌರಾದೇಹಿ ಅರಣ್ಯದ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಆರಂಭಿಸಿದರೆ ಅದಕ್ಕೆ ಕ್ರಮವಾಗಿ ಎರಡು ಹಾಗೂ ಮೂರು ವರ್ಷ ಬೇಕಾಗುತ್ತದೆ. ಅಲ್ಲಿಯವರೆಗೆ ಚೀತಾಗಳನ್ನು ಉಳಿಸಿಕೊಳ್ಳುವುದು ಹೇಗೆಂಬ ಚಿಂತೆ ಅಧಿಕಾರಿಗಳಿಗೆ ಎದುರಾಗಿದೆ. ಹೀಗಾಗಿ ಬೇರೆ ಅರಣ್ಯವನ್ನು ಸೂಚಿಸುವಂತೆ ಕೋರಿದ್ದಾರೆ ಎನ್ನಲಾಗಿದೆ.

ಕಳೆದ ವರ್ಷ ನಮೀಬಿಯಾ, ದಕ್ಷಿಣ ಆಫ್ರಿಕಾದಿಂದ ‘ಪ್ರಾಜೆಕ್ಟ್‌ ಚೀತಾ’ ಅಡಿಯಲ್ಲಿ ಒಟ್ಟು 20 ಚೀತಾಗಳನ್ನು ಕುನೊ ಉದ್ಯಾನಕ್ಕೆ ಕರೆತರಲಾಗಿತ್ತು. ಎರಡು ತಂಡಗಳಲ್ಲಿ ನಮೀಬಿಯಾ (8) ಹಾಗೂ ದಕ್ಷಿಣ ಆಫ್ರಿಕಾದಿಂದ (12) ಚೀತಾಗಳನ್ನು ಕರೆತರಲಾಗಿತ್ತು. ಪ್ರಧಾನಿ ಮೋದಿ ಅವರ ಹುಟ್ಟುಹಬ್ಬದ (ಸೆ.17) ದಿನದಂದು ಮೊದಲ ತಂಡದಲ್ಲಿ ಚೀತಾಗಳು ಭಾರತಕ್ಕೆ ಬಂದಿದ್ದವು. ಮೊದಲ ಕಂತಿನಲ್ಲಿ ನಮೀಬಿಯಾದಿಂದ ತಂದಿದ್ದ 8 ಚೀತಾಗಳನ್ನು ಈಗಾಗಲೇ ಮುಕ್ತ ಕಾಡಿಗೆ ಬಿಡಲಾಗಿದೆ. ಎರಡನೇ ಕಂತಿನಲ್ಲಿ ದಕ್ಷಿಣ ಆಫ್ರಿಕಾದಿಂದ ತಂದ 12 ಚೀತಾಗಳನ್ನು ಇನ್ನೂ ಪೂರ್ಣ ಪ್ರಮಾಣದ ಕಾಡಿಗೆ ಬಿಟ್ಟಿಲ್ಲ. ಮೃತಪಟ್ಟ ಎರಡು ಚೀತಾಗಳ ಪೈಕಿ ಒಂದು ನಮೀಬಿಯಾ, ಇನ್ನೊಂದು ದಕ್ಷಿಣ ಆಫ್ರಿಕಾದ್ದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com