ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದ ನಾಲ್ಕು ಶಾಲೆಗಳಲ್ಲಿ 148 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್
ಜಾರ್ಖಂಡ್‌ನ ಪೂರ್ವ ಸಿಂಗ್‌ಭೂಮ್ ಜಿಲ್ಲೆಯ ನಾಲ್ಕು ಬಾಲಕಿಯರ ವಸತಿ ಶಾಲೆಗಳಲ್ಲಿ ನಡೆಸಿದ ಪರೀಕ್ಷೆಯಲ್ಲಿ 148 ವಿದ್ಯಾರ್ಥಿಗಳಿಗೆ ಕೋವಿಡ್ ತಗುಲಿರುವುದು ದೃಢಪಟ್ಟಿದೆ ಎಂದು ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
Published: 26th April 2023 08:31 PM | Last Updated: 26th April 2023 08:31 PM | A+A A-

ಪ್ರಾತಿನಿಧಿಕ ಚಿತ್ರ
ಜಮ್‌ಶೆಡ್‌ಪುರ: ಜಾರ್ಖಂಡ್‌ನ ಪೂರ್ವ ಸಿಂಗ್‌ಭೂಮ್ ಜಿಲ್ಲೆಯ ನಾಲ್ಕು ಬಾಲಕಿಯರ ವಸತಿ ಶಾಲೆಗಳಲ್ಲಿ ನಡೆಸಿದ ಪರೀಕ್ಷೆಯಲ್ಲಿ 148 ವಿದ್ಯಾರ್ಥಿಗಳಿಗೆ ಕೋವಿಡ್ ತಗುಲಿರುವುದು ದೃಢಪಟ್ಟಿದೆ ಎಂದು ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಸೋಮವಾರ 69 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಆಗಿದೆ. ನಂತರ ಜಿಲ್ಲೆಯ ಎಲ್ಲಾ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ (ಕೆಜಿಬಿವಿ) ಶಾಲೆಗಳಲ್ಲಿ ಕೋವಿಡ್-19 ಪರೀಕ್ಷೆಯನ್ನು ನಡೆಸುವಂತೆ ಜಿಲ್ಲಾಧಿಕಾರಿ ವಿಜಯ ಜಾಧವ್ ಮಂಗಳವಾರ ಸೂಚಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಸಿವಿಲ್ ಸರ್ಜನ್ ಡಾ. ಜುಝಾರ್ ಮಜ್ಹಿ ನೇತೃತ್ವದಲ್ಲಿ ಜಿಲ್ಲೆಯ ದುಮಾರಿಯಾ, ಪೊಟ್ಕಾ ಮತ್ತು ಜಮ್‌ಶೆಡ್‌ಪುರ ಬ್ಲಾಕ್‌ಗಳ ಇತರ ಮೂರು ಕೆಜಿಬಿವಿ ಶಾಲೆಗಳಲ್ಲಿ ವೈದ್ಯರು ಕೋವಿಡ್ ಪರೀಕ್ಷೆಯನ್ನು ನಡೆಸಿದರು. ಈ ವೇಳೆ ಇನ್ನೂ 79 ವಿದ್ಯಾರ್ಥಿಗಳಿಗೆ ಕೋವಿಡ್ ತಗುಲಿರುವುದು ಪತ್ತೆಯಾಗಿದೆ.
ದುಮಾರಿಯಾದ ಕೆಜಿಬಿವಿಯಲ್ಲಿ 14 ಪ್ರಕರಣಗಳು ದಾಖಲಾಗಿದ್ದರೆ, ಪೊಟ್ಕಾದ ಕೆಜಿಬಿವಿಯಲ್ಲಿ 10 ಮತ್ತು ಜಮ್‌ಶೆಡ್‌ಪುರದ ಕೆಜಿಬಿವಿ ಶಾಲೆಯಲ್ಲಿ 55 ಕೋವಿಡ್-19 ಪ್ರಕರಣಗಳು ದಾಖಲಾಗಿವೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಕೊರೊನಾವೈರಸ್ ನಿಯಮಾವಳಿಗಳ ಪ್ರಕಾರ, ಎಲ್ಲಾ ವಿದ್ಯಾರ್ಥಿಗಳನ್ನು ಪ್ರತ್ಯೇಕ ವಾಸದಲ್ಲಿರಿಸಲಾಗಿದೆ ಮತ್ತು ಶಾಲೆಯ ಆವರಣವನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದೆ.
ಜಾಧವ್ ಅವರ ನಿರ್ದೇಶನದ ಮೇರೆಗೆ, ಸಿವಿಲ್ ಸರ್ಜನ್ ಎಲ್ಲಾ ಕೆಜಿಬಿವಿಗಳ ವಾರ್ಡನ್‌ಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳೊಂದಿಗೆ ವರ್ಚುವಲ್ ಸಭೆ ನಡೆಸಿದರು ಮತ್ತು ಅವರಿಗೆ ಕೋವಿಡ್-19 ಮಾರ್ಗಸೂಚಿಗಳನ್ನು ಜಾರಿಗೊಳಿಸಲು ಆದೇಶಿಸಿದರು.
ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ವೈರಸ್ ಹರಡುವುದನ್ನು ತಡೆಗಟ್ಟಲು ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳು, ಶಾಲೆಗಳು ಮತ್ತು ಕಾಲೇಜುಗಳಲ್ಲಿ ಕೋವಿಡ್-19 ಪರೀಕ್ಷೆಗಳನ್ನು ನಡೆಸುವಂತೆ ಜಿಲ್ಲಾಧಿಕಾರಿಗಳು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.