ಹರ್ಯಾಣ: ವಿಎಚ್ ಪಿ ಮೆರವಣಿಗೆ ವೇಳೆ ಘರ್ಷಣೆ, ಸಾವಿನ ಸಂಖ್ಯೆ 4ಕ್ಕೆ ಏರಿಕೆ, 30ಕ್ಕೂ ಅಧಿಕ ಮಂದಿಗೆ ಗಾಯ

ಮಣಿಪುರ ಹಿಂಸಾಚಾರ ಪ್ರಕರಣ ಇನ್ನೂ ಹಸಿರಾಗಿರುವಂತೆಯೇ ಇತ್ತ ದೆಹಲಿಗೆ ಕೂಗಳತೆ ದೂರದಲ್ಲಿರುವ ಹರ್ಯಾಣದಲ್ಲೂ ಕೋಮು ಹಿಂಸಾಚಾರದ ಸುದ್ದಿ ಕೇಳಿಬಂದಿದ್ದು, 4 ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಹರ್ಯಾಣದಲ್ಲಿ ಸಂಘರ್ಷ
ಹರ್ಯಾಣದಲ್ಲಿ ಸಂಘರ್ಷ
Updated on

ಗುರುಗ್ರಾಮ: ಮಣಿಪುರ ಹಿಂಸಾಚಾರ ಪ್ರಕರಣ ಇನ್ನೂ ಹಸಿರಾಗಿರುವಂತೆಯೇ ಇತ್ತ ದೆಹಲಿಗೆ ಕೂಗಳತೆ ದೂರದಲ್ಲಿರುವ ಹರ್ಯಾಣದಲ್ಲೂ ಕೋಮು ಹಿಂಸಾಚಾರದ ಸುದ್ದಿ ಕೇಳಿಬಂದಿದ್ದು, 4 ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಹರ್ಯಾಣದ ನೂಹ್‌ ಪಟ್ಟಣದಲ್ಲಿ ಸೋಮವಾರ ವಿಶ್ವ ಹಿಂದೂ ಪರಿಷತ್‌ ಆಯೋಜಿಸಿದ್ದ ಮೆರವಣಿಗೆ ವೇಳೆ ಎರಡು ಗುಂಪುಗಳ ನಡು‌ವೆ ಘರ್ಷಣೆ ನಡೆದಿದ್ದು, ಉದ್ರಿಕ್ತರು ಕಲ್ಲು ತೂರಾಟ ನಡೆಸಿ, ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ಗೃಹರಕ್ಷಕ ದಳದ ಇಬ್ಬರು ಸಿಬ್ಬಂದಿ ಹಾಗೂ ನಾಗರಿಕರೊಬ್ಬರು ಸೇರಿ ಒಟ್ಟು 4 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ 30 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಭದ್ರತೆಗೆ ನಿಯೋಜನೆಯಾಗಿದ್ದ ಪೊಲೀಸ್ ವಾಹನಗಳಿಗೂ ಹಾನಿಯಾಗಿದೆ. ಡಿಎಸ್‌ಪಿ ಸೇರಿದಂತೆ ಹಲವು ಪೊಲೀಸರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಜನರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ ಮತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಪುರುಷರು, ಮಹಿಳೆಯರು ಮತ್ತು ಮಕ್ಕಳು ಗುರುಗ್ರಾಮ ಬಳಿಯ ದೇವಾಲಯದಲ್ಲಿ ಆಶ್ರಯ ಪಡೆದಿದ್ದಾರೆ. ನೂಹ್‌ ಪಟ್ಟಣದಲ್ಲಿ ಘರ್ಷಣೆಯಿಂದಾಗಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಶಾಲಾ– ಕಾಲೇಜುಗಳಿಗೆ ರಜೆ, ಇಂಟರ್ನೆಟ್ ನಿರ್ಬಂಧ
ಉದ್ವಿಗ್ನ ಪರಿಸ್ಥಿತಿ ಹಿನ್ನೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಫರಿದಾಬಾದ್ ಜಿಲ್ಲೆಯಲ್ಲಿ ಇಂದು ಶಾಲಾ– ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಉದ್ವಿಗ್ನ ವಾತಾವರಣ ಶಮನ ಮಾಡಲು ಮೊಬೈಲ್ ಇಂಟರ್‌ನೆಟ್‌ ಸೇವೆಗಳನ್ನು ಬುಧವಾರದವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಹರಿಯಾಣ ಸರ್ಕಾರ ತಿಳಿಸಿದೆ.

ವಿಶ್ವ ಹಿಂದೂ ಪರಿಷತ್‌ನ ‘ಬ್ರಿಜ್ ಮಂಡಲ್ ಜಲಾಭಿಷೇಕ್ ಯಾತ್ರೆ'ಯನ್ನು ನೂಹ್‌ನ ಖೇಡ್ಲಾ ಮೋಡ್ ಬಳಿ ಯುವಕರ ಗುಂಪು ತಡೆದು, ಕಲ್ಲು ತೂರಾಟ ನಡೆಸಿತು. ಈ ವೇಳೆ ಪರಸ್ಪರ ಸಂಘರ್ಷ ನಡೆದಿದ್ದು, ನಾಲ್ಕು ಕಾರುಗಳಿಗೆ ಬೆಂಕಿ ಹಚ್ಚಲಾಯಿತು. ‌ಯಾತ್ರೆ ತಡೆದ ಯುವಕರ ಗುಂಪಿನ ಮೇಲೆ ಜನರು ಪ್ರತಿಯಾಗಿ ಕಲ್ಲುಗಳನ್ನು ತೂರಿದ್ದಾರೆ.  ಇದಕ್ಕೂ ಮುನ್ನ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗಾರ್ಗಿ ಕಕ್ಕರ್ ಗುರುಗ್ರಾಮದ ಸಿವಿಲ್ ಲೈನ್ಸ್‌ನಿಂದ ಯಾತ್ರೆಗೆ ಚಾಲನೆ ನೀಡಿದ್ದರು. ಮೆರವಣಿಗೆಯೊಂದಿಗೆ ಪೊಲೀಸ್ ತುಕಡಿಯನ್ನೂ ನಿಯೋಜಿಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com