ಸಂಸತ್ತಿನಲ್ಲಿ ಮಣಿಪುರ ವಿಷಯದ ಚರ್ಚೆಯಿಂದ ವಿರೋಧ ಪಕ್ಷಗಳು ಓಡಿಹೋಗುತ್ತಿವೆ: ಪ್ರಲ್ಹಾದ್ ಜೋಶಿ
ಸಂಸತ್ತಿನಲ್ಲಿ ಮಣಿಪುರ ವಿಷಯದ ಚರ್ಚೆಯಿಂದ ವಿರೋಧ ಪಕ್ಷಗಳು ಓಡಿಹೋಗುತ್ತಿವೆ. ಅವರ (ವಿಪಕ್ಷಗಳ) ಪ್ರಶ್ನೆಗಳಿಗೆ ಸರ್ಕಾರದ ಬಳಿ ಸೂಕ್ತ ಉತ್ತರವಿದೆ ಎಂಬುದನ್ನು ತಿಳಿದಿರುವ ಕಾರಣ ಅವರು ಚರ್ಚೆಯಲ್ಲಿ ಆಸಕ್ತಿ ಹೊಂದಿಲ್ಲ ಎಂದು ಬಿಜೆಪಿ ಬುಧವಾರ ಆರೋಪಿಸಿದೆ.
Published: 02nd August 2023 03:45 PM | Last Updated: 02nd August 2023 07:31 PM | A+A A-

ಪ್ರಹ್ಲಾದ್ ಜೋಶಿ
ನವದೆಹಲಿ: ಸಂಸತ್ತಿನಲ್ಲಿ ಮಣಿಪುರ ವಿಷಯದ ಚರ್ಚೆಯಿಂದ ವಿರೋಧ ಪಕ್ಷಗಳು ಓಡಿಹೋಗುತ್ತಿವೆ. ಅವರ (ವಿಪಕ್ಷಗಳ) ಪ್ರಶ್ನೆಗಳಿಗೆ ಸರ್ಕಾರದ ಬಳಿ ಸೂಕ್ತ ಉತ್ತರವಿದೆ ಎಂಬುದನ್ನು ತಿಳಿದಿರುವ ಕಾರಣ ಅವರು ಚರ್ಚೆಯಲ್ಲಿ ಆಸಕ್ತಿ ಹೊಂದಿಲ್ಲ ಎಂದು ಬಿಜೆಪಿ ಬುಧವಾರ ಆರೋಪಿಸಿದೆ.
ಮಣಿಪುರ ವಿಷಯದ ಬಗ್ಗೆ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿರುವ ವಿಪಕ್ಷಗಳು ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು ಭೇಟಿ ಮಾಡಿ, ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದರು.
ಶಾಂತಿಯನ್ನು ಪುನಃಸ್ಥಾಪಿಸಲು ಕಲಹ ಪೀಡಿತ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಬೇಕೆಂದು ಒತ್ತಾಯಿಸಿದ ಬಳಿಕ ಬಿಜೆಪಿ ನಾಯಕರಿಂದ ಈ ಪ್ರತಿಕ್ರಿಯೆ ನೀಡಿದೆ.
'ಮಣಿಪುರ ಹಿಂಸಾಚಾರದ ಕುರಿತು ಸರ್ಕಾರ ಚರ್ಚೆಗೆ ಸಿದ್ಧವಾಗಿದೆ ಮತ್ತು ಮಣಿಪುರಕ್ಕೆ ಭೇಟಿ ನೀಡಿದ್ದ ಗೃಹ ಸಚಿವ ಅಮಿತ್ ಶಾ ಅವರು ಉತ್ತರಿಸಲು ಸಿದ್ಧರಾಗಿದ್ದಾರೆ. ಅವರ ಸಮಸ್ಯೆ ಏನು ಎಂದು ನನಗೆ ಅರ್ಥವಾಗುತ್ತಿಲ್ಲ. ಜನರು ಸಹ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ' ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸುದ್ದಿಗಾರರಿಗೆ ತಿಳಿಸಿದರು.
ಇದನ್ನೂ ಓದಿ: INDIA ಒಕ್ಕೂಟದ ಸದಸ್ಯರಿಂದ ರಾಷ್ಟ್ರಪತಿ ಮುರ್ಮು ಭೇಟಿ; ಮಧ್ಯಪ್ರವೇಶಿಸಿ ಶಾಂತಿ ಮರುಸ್ಥಾಪಿಸುವಂತೆ ಮನವಿ!
ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ನಾಯಕ ಸುಶೀಲ್ ಮೋದಿ, ವಿಪಕ್ಷಗಳ ನಾಯಕರು ಮಣಿಪುರ ಮತ್ತು ರಾಷ್ಟ್ರಪತಿಗಳ ನಿವಾಸಕ್ಕೆ ಹೋಗಬಹುದು. ಆದರೆ, ಈ ವಿಷಯದ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಲ್ಲಿ ಭಾಗವಹಿಸಲು ಅವರಿಗೆ ಸಾಧ್ಯವಿಲ್ಲ ಎಂದು ಹೇಳಿದರು.
ಸರ್ಕಾರ ಸಾಮೂಹಿಕ ಜವಾಬ್ದಾರಿಯಿಂದ ಕೆಲಸ ಮಾಡುತ್ತಿರುವುದರಿಂದ ಪ್ರದಾನಿ ಮೋದಿ ಮಾತನಾಡಬೇಕು ಎಂಬ ಅವರ ಬೇಡಿಕೆಯಲ್ಲಿ ಯಾವುದೇ ತರ್ಕವಿಲ್ಲ ಮತ್ತು ಈ ಸಂದರ್ಭದಲ್ಲಿ ಅದಕ್ಕೆ ಸಂಬಂಧಿಸಿದ ಸಚಿವ ಅಮಿತ್ ಶಾ ಅವರು ಉತ್ತರಿಸಲು ಸಿದ್ಧರಿದ್ದಾರೆ ಎಂದರು.
'ಅವರು ಎತ್ತಿರುವ ಎಲ್ಲಾ ಪ್ರಶ್ನೆಗಳಿಗೆ ಸರ್ಕಾರದ ಬಳಿ ಸಮರ್ಪಕ ಉತ್ತರಗಳಿವೆ ಎಂದು ಅವರಿಗೆ ತಿಳಿದಿದೆ ಮತ್ತು ಅದಕ್ಕಾಗಿಯೇ ಅವರು ಸಂಸತ್ತಿನಲ್ಲಿ ಚರ್ಚೆಯಿಂದ ಓಡಿಹೋಗುತ್ತಿದ್ದಾರೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮಾತನಾಡಿ, ‘ಮಣಿಪುರ ಸೇರಿದಂತೆ ಪ್ರತಿಯೊಂದು ವಿಷಯದ ಬಗ್ಗೆಯೂ ಚರ್ಚೆಗೆ ಸಿದ್ಧ ಎಂದು ಸರ್ಕಾರ ಪದೇ ಪದೇ ಹೇಳುತ್ತಿದೆ. ಆದರೆ, ಪ್ರತಿಪಕ್ಷಗಳು ಮಾತ್ರ ಚರ್ಚೆಗೆ ಸಿದ್ಧವಾಗಿಲ್ಲ ಮತ್ತು ಅವರು ಸಂಸತ್ತಿಗೆ ಅಡ್ಡಿಪಡಿಸಲು ಬಯಸುತ್ತಿದ್ದಾರೆ' ಎಂದು ದೂರಿದರು.