
ನವದೆಹಲಿ: ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವ ದೆಹಲಿ ಆಡಳಿತ ಸೇವೆಗಳ ನಿಯಂತ್ರಣ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ಬದಲಾಯಿಸುವ ದೆಹಲಿ ಸೇವಾ ಮಸೂದೆಯನ್ನು ಸೋಮವಾರ ರಾಜ್ಯಸಭೆಯಲ್ಲಿ ಮಂಡಿಸಲಾಯಿತು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ರಾಜ್ಯಸಭೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಪ್ರದೇಶ ಸರ್ಕಾರ ತಿದ್ದುಪಡಿ ಮಸೂದೆ, 2023 ಅನ್ನು ಮಂಡಿಸಿದರು.
ದೆಹಲಿ ಸೇವಾ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯ ಅಭಿಷೇಕ್ ಮನು ಸಿಂಘ್ವಿ ಅವರು, ಇದು "ಸಂಪೂರ್ಣವಾಗಿ ಅಸಾಂವಿಧಾನಿಕ", "ಹಿಂಪಡೆಯುವ ಮಸೂದೆ" ಎಂದು ಹೇಳಿದರು.
ಮತ್ತೊಂದೆಡೆ, ಮಸೂದೆಯನ್ನು ಸಮರ್ಥಿಸಿಕೊಂಡ ಬಿಜೆಪಿಯ ಸುಧಾಂಶು ತ್ರಿವೇದಿ ಅವರು, ಸುಪ್ರೀಂ ಕೋರ್ಟ್ ತೀರ್ಪಿನ ನಂತರ ದೆಹಲಿಯ ಎಎಪಿ ಸರ್ಕಾರಸ ದೊಡ್ಡ ಪ್ರಮಾಣದಲ್ಲಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದನ್ನು ಪರಿಗಣಿಸಿ ಸುಗ್ರೀವಾಜ್ಞೆ ಮತ್ತು ತರುವಾಯ ಮಸೂದೆ ಮಂಡಿಸಲಾಯಿತು ಎಂದು ಹೇಳಿದರು.
ದೆಹಲಿಯಲ್ಲಿ ಚುನಾಯಿತ ಸರ್ಕಾರವು ರಾಜಧಾನಿಯಲ್ಲಿ ಅಧಿಕಾರಿಗಳ ವರ್ಗಾವಣೆ ಮತ್ತು ನೇಮಕಾತಿಗಳ ಮೇಲೆ ನಿಯಂತ್ರಣವನ್ನು ಹೊಂದಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಅಧಿಕಾರ ಇಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಸುಪ್ರೀಂ ಆದೇಶವನ್ನು ರದ್ದುಗೊಳಿಸಲು ಕೇಂದ್ರ ಸರ್ಕಾರ ಕಳೆದ ಮೇ ತಿಂಗಳಲ್ಲಿ ಹೊರಡಿಸಿದ ಸುಗ್ರೀವಾಜ್ಞೆಯನ್ನು ಈ ಮಸೂದೆ ಬದಲಾಯಿಸುತ್ತದೆ.
Advertisement