ದೆಹಲಿ ಸರ್ಕಾರದ ಅಧಿಕಾರ ದುರುಪಯೋಗ ತಡೆಯಲು ಸೇವಾ ಮಸೂದೆ ತರಲಾಗಿದೆ: ಕೇಂದ್ರ ಗೃಹ ಸಚಿವ ಅಮಿತ್ ಶಾ

ದೆಹಲಿ ಸರ್ಕಾರದ ಅಧಿಕಾರ ದುರುಪಯೋಗ ತಡೆಯಲು ಸೇವಾ ಮಸೂದೆ ತರಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ

ನವದೆಹಲಿ: ದೆಹಲಿ ಸರ್ಕಾರದ ಅಧಿಕಾರ ದುರುಪಯೋಗ ತಡೆಯಲು ಸೇವಾ ಮಸೂದೆ ತರಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಸೇವಾ ಮಸೂದೆಯ ಚರ್ಚೆಯ ವೇಳೆ ಸದನವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, 'ದೆಹಲಿ ಸರ್ಕಾರದ ಅಧಿಕಾರ ದುರುಪಯೋಗ ತಡೆಯಲು ಸೇವಾ ಮಸೂದೆ ತರಲಾಗಿದ್ದು, ದೆಹಲಿಯಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ಇರುವುದನ್ನು ಖಚಿತಪಡಿಸಿಕೊಳ್ಳುವುದು ಮಸೂದೆಯ ಉದ್ದೇಶವಾಗಿದೆ. ಇದು ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸುವುದಿಲ್ಲ ಎಂದು ಹೇಳಿದರು.

ಇದಕ್ಕೂ ಮುನ್ನ ಕೇಂದ್ರ ಗೃಹಸಚಿವ ಅಮಿತ್​ ಶಾ ಮಸೂದೆ ಸಂಬಂಧಿಸಿದ ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಮಸೂದೆ ಏಕೆ ಅಗತ್ಯ ಎಂಬುದರ ಕುರಿತು ವಿವರವಾಗಿ ವಿವರಿಸಿದರು. ದೆಹಲಿ ಸೇವಾ ಮಸೂದೆ ಯಾವುದೇ ರೀತಿಯಲ್ಲೂ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲಂಘಿಸುವುದಿಲ್ಲ. ಮಸೂದೆಯು ರಾಷ್ಟ್ರ ರಾಜಧಾನಿಯಲ್ಲಿ ಪರಿಣಾಮಕಾರಿ, ಭ್ರಷ್ಟಾಚಾರ ಮುಕ್ತ ಆಡಳಿತದ ಗುರಿಯನ್ನು ಹೊಂದಿದೆ. ಇದು ದೆಹಲಿ ಸರ್ಕಾರದ ಅಧಿಕಾರ ದುರುಪಯೋಗಕ್ಕೆ ಕಡಿವಾಣ ಹಾಕುವ ಗುರಿ ಹೊಂದಿದೆ ಎಂದು ಶಾ ತಿಳಿಸಿದರು.

ದೆಹಲಿಯಲ್ಲಿ ಸುಗಮ ಭ್ರಷ್ಟಾಚಾರ ರಹಿತ ಆಡಳಿತ ನೀಡುವುದು ಈ ಮಸೂದೆಯ ಉದ್ದೇಶವಾಗಿದ್ದು, ಮಸೂದೆಯ ಒಂದೇ ಒಂದು ನಿಬಂಧನೆಯಿಂದ ಈ ಹಿಂದೆ ಇದ್ದ ವ್ಯವಸ್ಥೆಯಲ್ಲಿ ಒಂದು ಇಂಚು ಕೂಡ ಬದಲಾವಣೆ ಆಗಿಲ್ಲ. ಇದೇ ಸಂದರ್ಭದಲ್ಲಿ ಎಎಪಿ ಸರ್ಕಾರದ ವಿರುದ್ಧವೂ ಕಿಡಿಕಾರಿದ ಅವರು, ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಕಡತಗಳು ಅಲ್ಲಿ ಬಿದ್ದಿರುವುದರಿಂದ ಅವರು ವಿಜಿಲೆನ್ಸ್ ಇಲಾಖೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ
ಎಎಪಿಯನ್ನು ಸಮಾಧಾನಪಡಿಸಲು ದೆಹಲಿ ಸೇವಾ ಮಸೂದೆಯನ್ನು ಕಾಂಗ್ರೆಸ್ ವಿರೋಧಿಸುತ್ತಿದೆ. ಸೇವೆಗಳು ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ದೆಹಲಿಗೆ ಕಾನೂನು ರೂಪಿಸಲು ಸಂಸತ್ತಿಗೆ ಅಧಿಕಾರವನ್ನು ನೀಡುವ ಮೂಲಕ ಕಾಂಗ್ರೆಸ್ ಸರ್ಕಾರ ಸಂವಿಧಾನವನ್ನು ತಿದ್ದುಪಡಿ ಮಾಡಿದೆ ಎಂದು ಅಮಿತ್ ಶಾ ಹೇಳಿದರು.

ತುರ್ತು ಪರಿಸ್ಥಿತಿ ಹೇರಲು ಅಥವಾ ಜನರ ಹಕ್ಕುಗಳನ್ನು ಕಸಿದುಕೊಳ್ಳಲು ದೆಹಲಿ ಸೇವಾ ಮಸೂದೆಯನ್ನು ತಂದಿಲ್ಲ. ಕೇಂದ್ರವು ಅಧಿಕಾರವನ್ನು ತನ್ನ ಕೈಗೆ ತೆಗೆದುಕೊಳ್ಳಲು ಬಯಸುತ್ತದೆ. ಭಾರತದ ಜನರು ನಮಗೆ ಅಧಿಕಾರ ಮತ್ತು ಹಕ್ಕನ್ನು ನೀಡಿರುವುದರಿಂದ ಕೇಂದ್ರವು ಯಾವುದೇ ರಾಜ್ಯದಿಂದ ಅಧಿಕಾರವನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ನಾವು 130 ಕೋಟಿ ಜನರಿಂದ ಆಯ್ಕೆಯಾಗಿದ್ದೇವೆ. ದೆಹಲಿ ಸೇವಾ ಮಸೂದೆ ಯಾವುದೇ ರೀತಿಯಲ್ಲೂ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲಂಘಿಸುವುದಿಲ್ಲ ಎಂದು ಅವರು ಹೇಳಿದರು.

ಸುಗ್ರೀವಾಜ್ಞೆಯನ್ನು ಬದಲಿಸುವ ದೆಹಲಿ ಸೇವೆಗಳ ಮಸೂದೆಯು ಸುಪ್ರೀಂ ಕೋರ್ಟ್‌ನ ತೀರ್ಪನ್ನು ಉಲ್ಲಂಘಿಸುವುದಿಲ್ಲ ಎಂದು ಮಸೂದೆಯು ಅಸಾಂವಿಧಾನಿಕ ಎಂಬ ಆರೋಪಗಳನ್ನು ತಳ್ಳಿಹಾಕಿದರು. ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ (ತಿದ್ದುಪಡಿ) ಮಸೂದೆ, 2023 ರ ಮೇಲಿನ ಚರ್ಚೆಗೆ ರಾಜ್ಯಸಭೆಯಲ್ಲಿ ಉತ್ತರಿಸಿದ ಅಮಿತ್ ಶಾ, 1975 ರಲ್ಲಿ ಹೇರಲಾದ ತುರ್ತು ಪರಿಸ್ಥಿತಿಯ ಬಗ್ಗೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಹಕ್ಕು ಕಾಂಗ್ರೆಸ್‌ಗೆ ಇಲ್ಲ ಎಂದು ಹೇಳಿದರು.

ಈ ಹಿಂದೆ ದೆಹಲಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳಿದ್ದವು ಮತ್ತು ಅಧಿಕಾರ ಹಂಚಿಕೆಯಲ್ಲಿ ಯಾವುದೇ ವಿವಾದ ಇರಲಿಲ್ಲ. ಈ ಹಿಂದೆ ದೆಹಲಿಯಲ್ಲಿ ವರ್ಗಾವಣೆ ವಿಚಾರದಲ್ಲಿ ಜಗಳಗಳಿರಲಿಲ್ಲ, ಸಿಎಂಗಳಿಗೆ ಸಮಸ್ಯೆ ಇರಲಿಲ್ಲ. 2015ರಲ್ಲಿ 'ಆಂದೋಲನ'ದ ನಂತರ ಸರ್ಕಾರ ಬಂದಿತ್ತು. ಕೇಂದ್ರ ಸರ್ಕಾರ ಅಧಿಕಾರ ಹಿಡಿಯಲು ಬಯಸುತ್ತಿದೆ ಎಂದು ಕೆಲವರು ಹೇಳಿದ್ದಾರೆ. ಭಾರತದ ಜನರು ನಮಗೆ ಅಧಿಕಾರ ಮತ್ತು ಬಲವನ್ನು ನೀಡಿರುವುದರಿಂದ ಕೇಂದ್ರವು ಹಾಗೆ ಮಾಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಕಾಂಗ್ರೆಸ್ಸನ್ನು ವಿರೋಧಿಸಿ ಹುಟ್ಟಿದ ಪಕ್ಷವೇ ಎಎಪಿ
ಕಾಂಗ್ರೆಸ್ ಪಕ್ಷವನ್ನು ವಿರೋಧಿಸಿ ಎಎಪಿ ಹುಟ್ಟಿದೆ. ಆ ನಂತರ ಅವರು (ಎಎಪಿ) ಕಾಂಗ್ರೆಸ್ ವಿರುದ್ಧ ಸುಮಾರು ಮೂರು ಟನ್ ಆಕ್ಷೇಪಾರ್ಹ ಪದಗಳನ್ನು ಬಳಸಿದರು ಮತ್ತು ಅಸ್ತಿತ್ವಕ್ಕೆ ಬಂದರು. ಅಂಥವರು ಇಂದು ಈ ಮಸೂದೆಯನ್ನು ವಿರೋಧಿಸಲು ಕಾಂಗ್ರೆಸ್‌ನಿಂದ ಬೆಂಬಲವನ್ನು ಕೋರುತ್ತಿದ್ದಾರೆ ಎಂದು ಶಾ ವ್ಯಂಗ್ಯವಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com