ಮಣಿಪುರ ಸಿಎಂ ಬದಲಾವಣೆ ಇಲ್ಲ; ಸ್ವಾತಂತ್ರ್ಯಾನಂತರದ ಭಾರತದಲ್ಲಿ ಜನ ನಂಬಿಕೆ ಇಟ್ಟಿರುವ ಏಕೈಕ ವ್ಯಕ್ತಿ ಪ್ರಧಾನಿ ಮೋದಿ: ಅಮಿತ್ ಶಾ

ದೇಶದ ಜನತೆಗೆ ತಪ್ಪು ಸಂದೇಶ ನೀಡಲು ವಿರೋಧ ಪಕ್ಷಗಳು ಲೋಕಸಭೆಯಲ್ಲಿ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಸ್ವತಂತ್ರ್ಯಾನಂತರದ ಭಾರತದಲ್ಲಿ ಜನ ನಂಬಿಕೆ ಇಟ್ಟಿರುವ ಏಕೈಕ ವ್ಯಕ್ತಿ ಎಂದರೆ ಅದು ಪ್ರಧಾನಿ ಮೋದಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಲೋಕಸಭೆಯಲ್ಲಿ ಅಮಿತ್ ಶಾ
ಲೋಕಸಭೆಯಲ್ಲಿ ಅಮಿತ್ ಶಾ

ನವದೆಹಲಿ: ದೇಶದ ಜನತೆಗೆ ತಪ್ಪು ಸಂದೇಶ ನೀಡಲು ವಿರೋಧ ಪಕ್ಷಗಳು ಲೋಕಸಭೆಯಲ್ಲಿ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಸ್ವತಂತ್ರ್ಯಾನಂತರದ ಭಾರತದಲ್ಲಿ ಜನ ನಂಬಿಕೆ ಇಟ್ಟಿರುವ ಏಕೈಕ ವ್ಯಕ್ತಿ ಎಂದರೆ ಅದು ಪ್ರಧಾನಿ ಮೋದಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಮಣಿಪುರ ವಿಚಾರ ಸಂಬಂಧ ವಿರೋಧ ಪಕ್ಷಗಳು ಲೋಕಸಭೆಯಲ್ಲಿ ಮಂಡಿಸಿರುವ ಅವಿಶ್ವಾಸ ನಿರ್ಣಯದ ಕುರಿತಾದ ಚರ್ಚೆ ವೇಳೆ ಮಾತನಾಡಿದ ಅಮಿತ್ ಶಾ, 'ಮಣಿಪುರ ಜನಾಂಗೀಯ ಹಿಂಸಾಚಾರ ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಆದರೆ, ಈ ವಿಚಾರದಲ್ಲಿ ನಡೆಯುತ್ತಿರುವ ರಾಜಕೀಯವಂತೂ ಇದಕ್ಕೂ ದೊಡ್ಡ ನಾಚಿಕೆಗೇಡಿನ ಸಂಗತಿಯಾಗಿದೆ.

ಸ್ವತಂತ್ರ್ಯಾನಂತರದ ಭಾರತದಲ್ಲಿ ಜನ ನಂಬಿಕೆ ಇಟ್ಟಿರುವ ಏಕೈಕ ವ್ಯಕ್ತಿ ಎಂದರೆ ಅದು ಪ್ರಧಾನಿ ಮೋದಿ ಎಂದು ಪ್ರತಿಪಾದಿಸಿದ ಅವರು, ಮೋದಿ ಸರ್ಕಾರ ಕೈಗೊಂಡಿರುವ ಜನಪರ ಕಾರ್ಯಗಳನ್ನು ವಿವರಿಸಿದರು. ದೇಶದ ರೈತರು, ಮಹಿಳೆಯರು ಹಾಗೂ ಬಡವರ ಪರವಾದ ಕಲ್ಯಾಣ ಕಾರ್ಯಕ್ರಮಗಳ ರಿಪೋರ್ಟ್‌ ಕಾರ್ಡ್‌ ನೀಡಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯವು ರಾಜಕೀಯ ಪ್ರೇರಿತ ಎಂದರು.

ಕಳೆದ 30 ವರ್ಷಗಳಿಂದ ಈ ದೇಶವು ಕುಟುಂಬ ರಾಜಕಾರಣದಿಂದ ಬಾಧಿತವಾಗಿದೆ. ಆದರೆ, ಭ್ರಷ್ಟಾಚಾರ, ಜಾತಿ ಪದ್ದತಿ ವಿರುದ್ಧ ಪ್ರಧಾನಿ ಮೋದಿ ಸರ್ಕಾರ ಹೋರಾಡುತ್ತಿದೆ. ಸರ್ಕಾರದ ಪರಿಣಾಮಕಾರಿ ಕಾರ್ಯ ನಿರ್ವಹಣೆಯತ್ತ ಗಮನ ಹರಿಸಿದೆ. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಜನತೆ ಸಂಪೂರ್ಣವಾಗಿ ನಂಬಿಕೆ ಇರಿಸಿದ ವ್ಯಕ್ತಿ ಅಂದರೆ, ಅದು ಪ್ರಧಾನಿ ಮೋದಿ. ಆದರೆ, ಇವತ್ತು ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಾಗಿದೆ. ಇದು ಜನರ ಆಯ್ಕೆ ಅಲ್ಲ. ಇದು ಕೇವಲ ಸಂಸತ್‌ನಲ್ಲಿ ಗದ್ದಲ ಎಬ್ಬಿಸುವ ತಂತ್ರವಾಗಿದೆ. ಈ ಘಟನೆಗೆ ಯಾರ ಸಹಮತವೂ ಇಲ್ಲ. ಮಣಿಪುರ ಘಟನೆಗೆ ನಾವು ಸಿದ್ದರಿದ್ದೇವು. ಆದರೆ ವಿಪಕ್ಷಗಳು ಗದ್ದಲದಲ್ಲೇ ಕಾಲ ಕಳೆಯಿತು. ಮೊದಲು ನಾನು ಉತ್ತರ ಕೊಡುತ್ತಿದ್ದೆ, ಸಮಾಧಾನ ಆಗದಿದ್ದರೆ, ಪ್ರಧಾನಿ ಕೊಡುತ್ತಿದ್ದರು. 

ಕಾಂಗ್ರೆಸ್ ಪಕ್ಷದ ರೀತಿ ಬಿಜೆಪಿ ಎಂದಿಗೂ ಕೂಡಾ ಗೆಲುವು ಸಾಧಿಸಲು ಲಂಚದ ಮೊರೆ ಹೋಗಿಲ್ಲ. ನರಸಿಂಹ ರಾವ್ ಅವರು ಪ್ರಧಾನಿ ಆಗಿದ್ದ ವೇಳೆ ಕೂಡಾ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಾಗಿತ್ತು. ಆಗ ಕಾಂಗ್ರೆಸ್ ಪಕ್ಷವು ತಮ್ಮ ಸರ್ಕಾರ ಅವಿಶ್ವಾಸ ನಿರ್ಣಯದಲ್ಲಿ ಗೆಲ್ಲಲೇ ಬೇಕು ಎಂದು ಬಯಸಿತ್ತು. ಜೆಎಂಎಂ ಸೇರಿದಂತೆ ಹಲವು ನಾಯಕರಿಗೆ ಲಂಚ ನೀಡಲಾಗಿತ್ತು. ಈ ಪೈಕಿ ಹಲವು ನಾಯಕರು ಜೈಲು ಪಾಲಾದರು. ಮಾಜಿ ಪ್ರಧಾನಿ ನರಸಿಂಹ ರಾವ್ ಕೂಡಾ ಜೈಲು ಸೇರಿದ್ದರು ಎಂದರು.

1990ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ಕೂಡಾ ಅವಿಶ್ವಾಸ ನಿರ್ಣಯ ಎದುರಿಸಿತ್ತು. ಆದರೆ, ಅಂದು ನಾವು ಯಾರಿಗೂ ಲಂಚ ಕೊಟ್ಟಿರಲಿಲ್ಲ. ನಾವು ಕೇವಲ ನಮ್ಮ ವಾದವನ್ನು ಪ್ರತಿಪಾದಿಸಿದೆವು. ಅಂದು ನಾವು ಕೇವಲ 1 ಮತದಿಂದ ಸೋಲು ಕಂಡೆವು. ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿರುವ ಪ್ರತಿಪಕ್ಷಗಳಿಗೆ ಸರ್ಕಾರದ ಬಳಿ ಸಾಕಷ್ಟು ಸಂಖ್ಯಾ ಬಲ ಇರೋದು ಗೊತ್ತಿದೆ. ಆದರೂ ಕೂಡಾ ಅವಿಶ್ವಾಸ ನಿರ್ಣಯ ಮಂಡಿಸಿದೆ. ಬುಧವಾರ ಲೋಕಸಭಾ ಕಲಾಪದ ಆರಂಭದಲ್ಲೇ ಭಾಷಣ ಮಾಡಿದ್ದ ಕಾಂಗ್ರೆಸ್‌ನ ಗೌರವ್ ಗೊಗೋಯ್, ವಿರೋಧ ಪಕ್ಷಗಳು ಕೇವಲ ಪ್ರಧಾನಿ ಮೋದಿ ಅವರು ಮಣಿಪುರ ವಿಚಾರವಾಗಿ ಲೋಕಸಭೆಯಲ್ಲಿ ಮಾತನಾಡಲಿ ಅನ್ನೋ ಒಂದೇ ಒಂದು ಕಾರಣಕ್ಕೆ ಅವಿಶ್ವಾಸ ನಿರ್ಣಯ ಮಂಡಿಸಿವೆ ಎಂದು ಹೇಳಿದ್ದರು. ನಮ್ಮ ಬೇಡಿಕೆಯನ್ನು ಸರ್ಕಾರ ಒಪ್ಪದ ಕಾರಣಕ್ಕೆ ನಾವು ಈ ನಿರ್ಧಾರಕ್ಕೆ ಬರಬೇಕಾಯ್ತು ಎಂದು ಹೇಳಿದ್ದರು.

ಮಣಿಪುರ ಸಿಎಂ ಬದಲಾವಣೆ ಇಲ್ಲ
ಮಣಿಪುರದಲ್ಲಿ ಕಳೆದ 6 ವರ್ಷಗಳಿಂದ ಬಿಜೆಪಿ ಸರ್ಕಾರ ಇದೆ. ಒಂದೇ ಒಂದು ದಿನವೂ ಕರ್ಫ್ಯೂ ಹಾಕಿಲ್ಲ. ಬಂದ್ ಮಾಡಿಲ್ಲ. ಹಿಂಸಾಚಾರ ನೆಡೆದಿಲ್ಲ. ಆದರೆ ಪಕ್ಕದಲ್ಲಿ ಮ್ಯಾನ್ಮರ್‌ನಲ್ಲಿ ಮಿಲಿಟರಿ ಆಡಳಿತವಿದೆ. ಹೀಗಾಗಿ ಮ್ಯಾನ್ಮಾರ್ ಗಡಿಯಿಂದ ಜನರು ನುಸುಳಿ ಭಾರತಕ್ಕೆ ಬಂದು ದಂಗೆ ಎಬ್ಬಿಸುತ್ತಿದ್ದಾರೆ. ಒಂದು ಆದೇಶದ ವಿರುದ್ಧ ಆರಂಭಗೊಂಡ ಪ್ರತಿಭಟನೆ, ಗಲಭೆಯಾಗಿ ಹಿಂಸಾಚಾರ ಜೋರಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರದಲ್ಲಿ ಹತ್ತು ಹಲವು ಘಟನೆಗಳು ನಡೆದಿದೆ. ಹಿಂಸೆ ಆಗಿದೆ. ಆದರೆ ಒಂದೇ ಒಂದು ಬಾರಿ ಗೃಹ ಸಚಿವರು ಉತ್ತರ ಕೊಟ್ಟಿಲ್ಲ. ಈಗ ಪ್ರಧಾನಿ ಬದಲು ನಾನೇ ಕೊಡುತ್ತೇನೆ ಎಂದು ಅಮಿತ್ ಶಾ ಹೇಳಿದ್ದಾರೆ.  ಮಣಿಪುರ ಹಿಂಸಾಚಾರ ನಿಯಂತ್ರಣಕ್ಕೆ ತಕ್ಷಣವೇ ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ. ಡಿಜಿಪಿ, ಮುಖ್ಯ ಕಾರ್ಯದರ್ಶಿ ಬದಲಾಯಿಸಿದ್ದೇವೆ. ಈ ಪರಿಸ್ಥಿತಿಯಲ್ಲಿ ರಾಜಕಾರಣ ಉತ್ತಮವಲ್ಲ. ಮಣಿಪುರ ಮಹಿಳೆಯ ವಿವಸ್ತ್ರ ಮೆರವಣಿ ವಿಚಾರ ಅತ್ಯಂತ ಕೆಟ್ಟ ಘಟನೆ. ಇಂತಹ ಘಟನೆಗಳು ಎಲ್ಲಿಯೂ ನಡೆಯಬಾರದು.

ಆದರೆ ಅಧಿವೇಶನಕ್ಕೆ ಎರಡು ದಿನ ಮುಂಚೆ ಈ ವಿಡಿಯೋ ಹೇಗೆ ಹೊರಗೆ ಬಂತು. ಇಂತಹ ವಿಡಿಯೋಗಳಿದ್ದರೆ, ಪೊಲೀಸರಿಗೆ ಕೊಡಬೇಕೋ ಬೇಡವೋ? ಇದೀಗ ಪ್ರತಿ ದಿನ ವಿಡಿಯೋ ಕಾನ್ಫೆರೆನ್ಸ್ ಮೂಲಕ ಪರಿಸ್ಥಿತಿ ಪರಿಶೀಲನೆ ನಡೆಸುತ್ತಿದ್ದೇನೆ.  ಇದೀಗ ಹಿಂಸೆ ಕಡಿಮೆಯಾಗಿದೆ. ಶಾಲೆಗಳು ಆರಂಭಗೊಂಡಿದೆ. ಮೆಡಿಕಲ್, ಆಹಾರ ಪದಾರ್ಥ ತಲುಪುತ್ತಿದೆ. ಮಣಿಪುರದ ಮೈತೇಯಿ ಮತ್ತು ಕುಕ್ಕಿ ಸೇರಿ ಕೂತು ಶಾಂತಿ ಮಾತುಕತೆ ನಡೆಸಬೇಕಿದೆ. ಹಿಂಸೆಗೆ ಹಿಂಸೆ ಉತ್ತರವಲ್ಲ. ಶಾಂತಿಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರರ ಕಂಡುಕೊಳ್ಳಲು ಸಾಧ್ಯವಿದೆ. ಶಾಂತಿ ಸ್ಥಾಪನೆಗೆ ಕೇಂದ್ರ ಸರ್ಕಾರಕ್ಕೆ ಎಲ್ಲಾ ಪ್ರಯತ್ನ ಮಾಡಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಅಂತೆಯೇ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರನ್ನು ರಾಜೀನಾಮೆ ನೀಡುವಂತೆ ಏಕೆ ಕೇಳಿಲ್ಲ ಎಂಬ ಪ್ರಶ್ನೆಗಳಿಗೆ ಉತ್ತರಿಸಿದ ಶಾ, "ಒಬ್ಬ ರಾಜ್ಯದ ಸಿಎಂ ಸಹಕರಿಸದಿರುವಾಗ ಅವರನ್ನು ಬದಲಾಯಿಸಬೇಕಾಗುತ್ತದೆ, ಆದರೆ ಮಣಿಪುರ ಸಿಎಂ ಕೇಂದ್ರದೊಂದಿಗೆ ಸಹಕರಿಸುತ್ತಿದ್ದಾರೆ" ಎಂದು ಹೇಳಿದರು.

ಕೋಮು ಸಂಘರ್ಷ, ಹಿಂಸಾಚಾರಗಳು ಅತೀ ಹೆಚ್ಚು ನಡೆದಿರುವುದು ಕಾಂಗ್ರೆಸ್ ಆಡಳಿತ ಅವಧಿಯಲ್ಲಿ. ಬಿಜೆಪಿ ದೇಶದ ಮೂಲೆ ಮೂಲೆಗೆ ಮೂಲಸೌಕರ್ಯ ಒದಗಿಸಿ ಗ್ರಾಮ ಗ್ರಾಮಗಳನ್ನು ಭಾರತದ ಮುಖ್ಯವಾಹನಿಗೆ ತರುವ ಪ್ರಯತ್ನ ಮಾಡಿದ್ದೇವೆ. ಮೋದಿ ಸರ್ಕಾರ ಬಂದ ಮೇಲೆ ದೇಶಕ್ಕೆ ಶುದ್ದ ಕುಡಿಯುವ ನೀರು, ಶೌಚಾಲಯ, ಡಿಬಿಟಿ ಮೂಲಕ ಫಲಾನುಭವಿಗಳಿಗೆ ನೇರ ಹಣ ನೀಡಿದ್ದೇವೆ. ರೈತರ ಬಗ್ಗೆ ಮಾತಾಡುವ ಕಾಂಗ್ರೆಸ್ ಬರೀ 70 ಸಾವಿರ ಕೋಟಿ ಸಾಲ ಮನ್ನ ಮಾಡಿ ಲಾಲಿಪಪ್ ನೀಡಿದೆ ಎಂದು ಆರೋಪಿಸಿದರು. ಆದರೆ ಮೋದಿ ಸರ್ಕಾರ ಅವರ ಖಾತೆಗಳಿಗೆ 2.40 ಲಕ್ಷ ಹಣ ಅವರ ಖಾತೆಗೆ ನೇರ ಹಣ ಹಾಕಿ ಋಣಮುಕ್ತರಾಗಿಸಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com