BEd ಕಡ್ಡಾಯವಲ್ಲ, ಸರ್ಕಾರದ ಆದೇಶ ವಜಾ: 'ಪ್ರಾಥಮಿಕ ಶಿಕ್ಷಣಕ್ಕೆ ಬಿಎಡ್ ಅರ್ಹತೆ ಅನಿಯಂತ್ರಿತ, ಅಸಮಂಜಸ' ಎಂದ ಸುಪ್ರೀಂ ಕೋರ್ಟ್
ಪ್ರಾಥಮಿಕ ಶಾಲೆಯ ಶಿಕ್ಷಕರಾಗಲು ಬಿ.ಇಡಿ. ಅರ್ಹತೆ ಹೊಂದಿರಬೇಕು ಎಂದು ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರವು ‘ಸ್ವೇಚ್ಛೆ’ಯಿಂದ ಕೂಡಿದೆ ಮತ್ತು ‘ಅತಾರ್ಕಿಕ’ವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು ಮಾತ್ರವಲ್ಲದೇ BEd ಕಡ್ಡಾಯವಲ್ಲ ಎಂದು ಹೇಳಿ ಸುಪ್ರೀಂ ಕೋರ್ಟ್ ಸರ್ಕಾರದ ಆದೇಶವನ್ನು ವಜಾಗೊಳಿಸಿದೆ.
Published: 13th August 2023 12:46 PM | Last Updated: 16th August 2023 12:12 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಪ್ರಾಥಮಿಕ ಶಾಲೆಯ ಶಿಕ್ಷಕರಾಗಲು ಬಿ.ಇಡಿ. ಅರ್ಹತೆ ಹೊಂದಿರಬೇಕು ಎಂದು ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರವು ‘ಸ್ವೇಚ್ಛೆ’ಯಿಂದ ಕೂಡಿದೆ ಮತ್ತು ‘ಅತಾರ್ಕಿಕ’ವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು ಮಾತ್ರವಲ್ಲದೇ BEd ಕಡ್ಡಾಯವಲ್ಲ ಎಂದು ಹೇಳಿ ಸುಪ್ರೀಂ ಕೋರ್ಟ್ ಸರ್ಕಾರದ ಆದೇಶವನ್ನು ವಜಾಗೊಳಿಸಿದೆ.
ಮಕ್ಕಳಿಗೆ ಉಚಿತ, ಕಡ್ಡಾಯ ಮತ್ತು ಗುಣಮಟ್ಟದ ಶಿಕ್ಷಣ ನೀಡುವುದಕ್ಕಾಗಿ ರೂಪಿಸಲಾದ ಶಿಕ್ಷಣ ಹಕ್ಕು ಕಾಯ್ದೆಗೂ ಈ ನಿರ್ಧಾರಕ್ಕೂ ಸಂಬಂಧ ಇಲ್ಲ. ಪ್ರಾಥಮಿಕ ಶಾಲಾ ಶಿಕ್ಷಕರಾಗಲು ಬಿ.ಇಡಿ. ಅನ್ನು ಅರ್ಹತೆಯಾಗಿ ನಿಗದಿ ಮಾಡಬೇಕು ಎಂದು ಎನ್‌ಸಿಟಿಇ 2018ರ ಜೂನ್ 28ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ.
ಇದನ್ನೂ ಓದಿ: ಶರದ್ ಪವಾರ್-ಅಜಿತ್ ಪವಾರ್ ಪುಣೆಯಲ್ಲಿ ರಹಸ್ಯ ಭೇಟಿ-ಮಾತುಕತೆ? ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ಸಂಚಲನ
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠವು, 'ಪ್ರಾಥಮಿಕ ಹಂತದ ತರಗತಿಗಳಲ್ಲಿ ಕಲಿಸಲು ಬಿ.ಇಡಿ. ಅರ್ಹತೆಯ ಅಗತ್ಯ ಇಲ್ಲ. ಈ ತರಗತಿಗಳಲ್ಲಿ ಕಲಿಸಲು ಭಿನ್ನವಾದ ಅರ್ಹತೆ ಅಗತ್ಯ ಇದೆ. ಪ್ರಾಥಮಿಕ ತರಗತಿಗಳಿಗೆ ಬೋಧಿಸಲು ಬಿ.ಇಡಿ. ವಿದ್ಯಾರ್ಹತೆ ಇರುವವರು ಆಯ್ಕೆ ಆಗಿದ್ದರೆ ನೇಮಕವಾಗಿ ಎರಡು ವರ್ಷಗಳೊಳಗೆ ಬೋಧನೆಗೆ ಸಂಬಂಧಿಸಿದ ಕೋರ್ಸ್ ಒಂದನ್ನು ಪೂರ್ಣಗೊಳಿಸಬೇಕು ಎಂದು ಬೋಧನಾ ಶಿಕ್ಷಣ ರಾಷ್ಟ್ರೀಯ ಪರಿಷತ್ (ಎನ್‌ಸಿಟಿಇ) ಹೇಳಿರುವುದು ಇದನ್ನು ಪುಷ್ಟೀಕರಿಸುತ್ತದೆ' ಎಂದು ಹೇಳಿದೆ.
ಪ್ರಾಥಮಿಕ ಶಾಲೆಯ ಶಿಕ್ಷಕರಾಗಲು ಬಿ.ಇಡಿ. ಅನ್ನು ಅರ್ಹತೆಯಾಗಿ ನಿಗದಿ ಮಾಡುವ ಮೂಲಕ ಸರ್ಕಾರವು ಸಂವಿಧಾನ ಮತ್ತು ಕಾನೂನುಗಳನ್ನು ಉಲ್ಲಂಘಿಸಿದೆ. ಶಿಕ್ಷಕರಿಗೆ ಸಂಬಂಧಿಸಿದಂತೆ ಬೋಧನಾ ಕೌಶಲವು ಅತ್ಯಂತ ಮಹತ್ವದ್ದಾಗಿದೆ. ಬಿ.ಇಡಿ. ಅನ್ನು ಅರ್ಹತೆಯಾಗಿ ನಿಗದಿ ಮಾಡಲು ಸರ್ಕಾರ ನೀಡಿರುವ ಒಂದೇ ಒಂದು ಸಮರ್ಥನೆ ಏನೆಂದರೆ, ಇದು ‘ಉನ್ನತ ಅರ್ಹತೆ’ ಎಂಬುದಾಗಿದೆ. ನೀತಿಗೆ ಸಂಬಂಧಿಸಿದ ನಿರ್ಧಾರ ಎಂದು ಪರಿಗಣಿಸಿದರೂ ಇದು ಸರಿಯಾದ ಕ್ರಮ ಅಲ್ಲ ಎಂದು ಕೋರ್ಟ್ ಹೇಳಿದೆ.
ಇದನ್ನೂ ಓದಿ: ತಮಿಳುನಾಡು ಸಚಿವ ಅನ್ಬಿಲ್ ಮಹೇಶ್ಗೆ ಹಠಾತ್ ಎದೆನೋವು; ಬೆಂಗಳೂರಿನಲ್ಲಿ ಆಂಜಿಯೋಗ್ರಾಮ್
ಅಂತೆಯೇ ಪ್ರಾಥಮಿಕ ಶಾಲೆಯಲ್ಲಿ ಬೋಧಿಸಲು ಪ್ರಾಥಮಿಕ ಶಿಕ್ಷಣ ಡಿಪ್ಲೊಮಾವೇ (ಡಿ.ಎಡ್.) ಅರ್ಹತೆಯೇ ಹೊರತು ಬಿ.ಇಡಿ. ಅಲ್ಲ ಎಂದು ಸುಪ್ರೀಂ ಕೋರ್ಟ್ ಹಲವು ಬಾರಿ ಹೇಳಿದ್ದಾಗಿಯೂ ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.