ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಮಳೆಯಿಂದಾಗಿ ಪ್ರತೀನಿತ್ಯ ಅವಘಡ, ಪ್ರಾಣಹಾನಿ ವರದಿಯಾಗುತ್ತಲೇ ಇದೆ.
ಭಾರೀ ಮಳೆಯಿಂದಾಗಿ ಹಿಮಾಚಲ ಪ್ರದೇಶದ ಕುಲ್ಲುವಿನ ಅನ್ನಿ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದು, ಅನೇಕ ಮನೆಗಳು ಏಕಾಏಕಿ ನೆಲಸಮವಾಗಿವೆ. ಪರಿಣಾಮ ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಟ್ಟಡದಲ್ಲಿ ಹಲವು ಅಂಗಡಿಗಳು, ಬ್ಯಾಂಕ್ ಗಳು ಮತ್ತು ಇತೆ ವಾಣಿಜ್ಯ ಸಂಸ್ಥೆಗಳಿದ್ದವು. 4-5 ದಿನಗಳ ಹಿಂದೆಯೇ ಕಟ್ಟಡದಲ್ಲಿ ಬಿರುಕುಗಳು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಕಟ್ಟಡಗಳನ್ನು ಅಸುರಕ್ಷಿತವೆಂದು ಘೋಷಿಸಿ, ಎಲ್ಲರನ್ನೂ ಸ್ಥಳಾಂತರಗೊಳಿಸಲಾಗಿತ್ತು ಎಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಅಣ್ಣಿ, ನರೇಶ್ ವರ್ಮಾ ಅವರು ಹೇಳಿದ್ದಾರೆ.
ಹಾನಿಯ ಮೌಲ್ಯಮಾಪನ ಮಾಡಲಾಗುತ್ತಿದೆ. ಅನ್ನಿಯ ರಾಷ್ಟ್ರೀಯ ಹೆದ್ದಾರಿ 305 ರ ಉದ್ದಕ್ಕೂ ಇರುವ ಕೆಲವು ಅಸುರಕ್ಷಿತ ಕಟ್ಟಡಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ತೆರವು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಜೂನ್ 24 ರಂದು ಹಿಮಾಚಲ ಪ್ರದೇಶದಲ್ಲಿ ಮಾನ್ಸೂನ್ ಪ್ರಾರಂಭವಾಗಿದ್ದು, ಮುಂಗಾರು ಆರಂಭವಾದಾಗಿನಿಂದಲೂ ಮಳೆ ಸಂಬಂಧಿದ ಘಟನೆಗಳಲ್ಲಿ ಈ ವರೆಗೂ 238 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ, 40 ಮಂದಿ ನಾಪತ್ತೆಯಾಗಿದ್ದಾರೆ.
ಜುಲೈ 9 ಮತ್ತು 10 ರಂದು ಮಂಡಿ ಮತ್ತು ಕುಲು ಜಿಲ್ಲೆಗಳಲ್ಲಿ ಹಲವು ಪ್ರಮಾದಗಳು ಸೃಷ್ಟಿಯಾಗಿದ್ದವು. ಆಗಸ್ಟ್ 14 ಮತ್ತು 15 ರಂದು ಸುರಿದ ಮಳೆಗೆ ಶಿಮ್ಲಾ ಮತ್ತು ಸೋಲನ್ ಜಿಲ್ಲೆಗಳಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ.
ಹಾನಿಗೊಳಗಾದ ಕಾಮಗಾರಿಗಳ ಪುನರ್ ಆರಂಭಕ್ಕಾಗಿ 165.22 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಅವರು ಹೇಳಿದ್ದಾರೆ.
Advertisement