ಚಂದ್ರಯಾನ 3 ಯಶಸ್ಸು, ಬೆಂಗಳೂರಿನ ಧನ್ ಪಾಲ್ ಕುರಿತು ಮನ್ ಕಿ ಬಾತ್ ನಲ್ಲಿ ಪಿಎಂ ಮೋದಿ ಪ್ರಸ್ತಾಪ!
ಚಂದ್ರಯಾನ 3 ರ ಯಶಸ್ಸು ದೇಶದ ನಾರಿ ಶಕ್ತಿಗೆ ಜೀವಂತ ಉದಾಹರಣೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಭಾನುವಾರ ತಮ್ಮ 104ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
Published: 27th August 2023 12:57 PM | Last Updated: 02nd September 2023 08:16 PM | A+A A-

ಬಿಎಂಟಿಸಿ ನಿವೃತ್ತ ಚಾಲಕ ಕೆ. ಧನಪಾಲ್
ನವದಹೆಲಿ: ಚಂದ್ರಯಾನ-3 ರ ಯಶಸ್ಸು ದೇಶದ ನಾರಿ ಶಕ್ತಿಗೆ ಜೀವಂತ ಉದಾಹರಣೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಭಾನುವಾರ ತಮ್ಮ 104ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಚಂದ್ರಯಾನ-3 ರ ಯಶಸ್ಸಿನ ಹಿಂದೆ ಇಸ್ರೊದ ಮಹಿಳೆಯರ ಕೆಲಸ ತುಂಬಾ ಇದೆ, ಅಸಾಧ್ಯವಾದುದ್ದನ್ನು ಸಾಧ್ಯವೆಂದು ತೋರಿಸಿದ್ದಾರೆ. ಚಂದ್ರಯಾನ-3 ರಲ್ಲಿ ಹಲವು ಮಂದಿ ಮಹಿಳಾ ವಿಜ್ಞಾನಿಗಳು ಹಾಗೂ ಎಂಜಿನಿಯರ್ಗಳು ಕೆಲಸ ಮಾಡಿದ್ದಾರೆ ಎಂದರು.
ಚಂದ್ರಯಾನ ಮಿಷನ್ ನವ ಭಾರತದ ಚೈತನ್ಯದ ಸಂಕೇತವಾಗಿದೆ. ಅದು ಯಾವುದೇ ಪರಿಸ್ಥಿತಿಯಲ್ಲಿ ಗೆಲ್ಲಲು ಬಯಸುತ್ತಿದೆ, ಗೆಲ್ಲುವುದು ಹೇಗೆಂಬುದು ಕೂಡ ತಿಳಿದಿದೆ. ಆಗಸ್ಟ್ 23 ರಂದು ಚಂದ್ರಯಾನ ಎಂಬ ಸಂಕಲ್ಪದ ಸೂರ್ಯ ಚಂದ್ರನ ಮೇಲೆ ಉದಯಿಸಿದ್ದಾನೆ ಎಂದು ಸಂತಸ ವ್ಯಕ್ತಪಡಿಸಿದರು.
ಯಾರು ಈ ಧನ್ ಪಾಲ್? ಇಂದು ಮನ್ ಕಿ ಬಾತ್ ನಲ್ಲಿ ಬೆಂಗಳೂರಿನ ಧನ್ ಪಾಲ್ ಅವರ ಕುರಿತು ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ. ಬೆಂಗಳೂರಿನ ಧನ್ಪಾಲ್ ಅವರು ಟ್ರಾನ್ಸ್ಪೋರ್ಟ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಅವರಿಗೆ ದರ್ಶಿನಿಯಲ್ಲಿ ಬೇರೆ ರಾಜ್ಯ ಹಾಗೂ ಬೇರೆ ದೇಶಗಳ ಜನರಿಗೆ ಬೆಂಗಳೂರು ದರ್ಶನ ಮಾಡುವ ಅವಕಾಶ ದೊರೆಯಿತು.
ಇದನ್ನೂ ಓದಿ: ಕಲ್ಲುಗಳ ಕಥೆ ಹೇಳುವ ಧನಪಾಲ್; ಶಿಲಾ ಶಾಸನಗಳ ಪತ್ತೆಯಲ್ಲಿ ಅತೀವ ಆಸಕ್ತಿ!
ಬೆಂಗಳೂರಿನಲ್ಲಿ ಹಲವು ಶಿಲಾ ಶಾಸನಗಳನ್ನು ಹೊರತೆಗೆದ ಹೆಗ್ಗಳಿಕೆಗೆ ಪಾತ್ರರಾಗಿರುವ ನಿವೃತ್ತ ಬಿಎಂಟಿಸಿಯ ಬೆಂಗಳೂರು ದರ್ಶಿನಿಯ ಚಾಲಕ ಮತ್ತು ಪ್ರವಾಸಿ ಮಾರ್ಗದರ್ಶಿ ಈ ಕೆ ಧನಪಾಲ್. ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಬಸ್ ಚಾಲಕ ಧನಪಾಲ್ ಅವರನ್ನು 2006ರಲ್ಲಿ ಅದರ ದೃಶ್ಯವೀಕ್ಷಣೆಯ ವಿಭಾಗಕ್ಕೆ ವರ್ಗಾಯಿಸಲಾಗುತ್ತದೆ. ಈ ವಿಭಾಗವನ್ನು ಈಗ ‘ಬೆಂಗಳೂರು ದರ್ಶಿನಿ’ ಎಂದು ಕರೆಯಲಾಗುತ್ತದೆ. ನಗರದ ವಿವಿಧ ಸ್ಥಳಗಳನ್ನು ಒಳಗೊಂಡ ಪ್ರವಾಸಿ ಬಸ್ ಚಾಲನೆ ಅವರ ಕೆಲಸವಾಗಿತ್ತು.
ಧನಪಾಲ್ ಬಿಎಂಟಿಸಿಯಲ್ಲಿ ದೈನಂದಿನ ಪಾಳಿಯ ಕೆಲಸದ ನಂತರ ಬೆಂಗಳೂರಿನ ಪರಂಪರೆ ಅನ್ವೇಷಿಸಲು ಸಮಯವನ್ನು ವಿನಿಯೋಗಿಸಲು ಪ್ರಾರಂಭಿಸಿದ್ದರು. ತಮ್ಮ ಸ್ನೇಹಿತ ಮತ್ತು ಮಾರ್ಗದರ್ಶಕ ಪ್ರೊ. ಕೆ.ಆರ್.ನರಸಿಂಹನ್ ಅವರ ಸಹಾಯದಿಂದ ವಿವಿಧ ಕಾಲಕ್ಕೆ ಸೇರಿದ 100ಕ್ಕೂ ಹೆಚ್ಚು ಶಿಲಾ ಶಾಸನಗಳನ್ನು ಪತ್ತೆ ಹಚ್ಚಿದ್ದಾರೆ. ಇನ್ನಷ್ಟು ತಿಳಿಯುವ ನಿಟ್ಟಿನಲ್ಲಿ ಧನಪಾಲ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಂಜೆ ಕಾಲೇಜ್ ಸೇರಿಕೊಂಡು 2020 ರಲ್ಲಿ ಎಪಿಗ್ರಫಿಯಲ್ಲಿ ಡಿಪ್ಲೊಮಾ ಪಡೆದರು. ಕೆಲ ತಿಂಗಳ ಹಿಂದೆಯೇ ಬಿಎಂಟಿಸಿಯಿಂದಯಿಂದ ನಿವೃತ್ತರಾಗಿರುವ ಇವರು ಈಗ ತಮ್ಮ ಸಂಪೂರ್ಣ ಸಮಯವನ್ನು ಬೆಂಗಳೂರಿನ ಅನ್ವೇಷಣೆಯಲ್ಲಿ ಕಳೆಯುತ್ತಿದ್ದಾರೆ.