ಅಲಹಾಬಾದ್: ಮಹತ್ವದ ಬೆಳವಣಿಗೆಯಲ್ಲಿ ಕೃಷ್ಣ ಜನ್ಮಭೂಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಶಾಹಿ ಈದ್ಗಾ ಸಂಕೀರ್ಣದ ಸಮೀಕ್ಷೆಗೆ ಅನುಮತಿ ನೀಡಿದೆ.
ಹೌದು.. ಜ್ಞಾನವ್ಯಾಪಿ ಪ್ರಕರಣದಂತೆಯೇ ಹಿಂದೂ-ಮುಸ್ಲಿಂ ಸಮುದಾಯಗಳ ತಿಕ್ಕಾಟಕ್ಕೆ ಕಾರಣವಾಗಿರುವ ಮತ್ತೊಂದು ಪುಣ್ಯಕ್ಷೇತ್ರ ಕೃಷ್ಣ ಜನ್ಮಭೂಮಿ ಮಥುರಾದಲ್ಲಿರುವ ಶಾಹಿ ಈದ್ಗಾ ಸಂಕೀರ್ಣದ ಸಮೀಕ್ಷೆಗೆ ಅಲಹಾಬಾದ್ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ.
ಹಿಂದೂಪರ ಸಂಘಟನೆಗಳು ಸಲ್ಲಿಸಿದ್ದ ಮನವಿಯನ್ನು ಸ್ವೀಕರಿಸಿರುವ ಅಲಹಾಬಾದ್ ಹೈಕೋರ್ಟ್ ವಿವಾದಿತ ಶಾಹಿ ಈದ್ಗಾ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆ ನಡೆಸಲು ಅನುಮತಿ ನೀಡಿದೆ.
ಶಾಹಿ ಈದ್ಗಾ ಮಸೀದಿಯ ವಾದ ತಿರಸ್ಕರಿಸಿದ ಕೋರ್ಟ್
ಇನ್ನು ಈ ಕುರಿತು ಮಾತನಾಡಿರುವ ಕೃಷ್ಣ ಜನ್ಮಭೂಮಿ ಪ್ರಕರಣ ಹಿಂದೂ ಸಂಘಟನೆಗಳ ಪರ ವಕೀಲ ವಿಷ್ಣು ಶಂಕರ್ ಜೈನ್ ಅವರು, 'ವಕೀಲ ಕಮಿಷನರ್‌ನಿಂದ ಶಾಹಿ ಈದ್ಗಾ ಮಸೀದಿ ಸಮೀಕ್ಷೆಗೆ ನಾವು ಒತ್ತಾಯಿಸಿದ್ದ ನಮ್ಮ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಅನುಮತಿಸಿದೆ. ಸಮೀಕ್ಷೆ ವಿಧಾನಗಳನ್ನು ಡಿಸೆಂಬರ್ 18 ರಂದು ನಿರ್ಧರಿಸಲಾಗುವುದು. ಶಾಹಿ ಈದ್ಗಾ ಮಸೀದಿಯ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ. ನಮ್ಮ ಬೇಡಿಕೆಯು ಶಾಹಿ ಈದ್ಗಾ ಮಸೀದಿ ಸರ್ವೆಯಾಗಿತ್ತು. ಶಾಹಿ ಈದ್ಗಾ ಸಂಕೀರ್ಣದಲ್ಲಿ ಹಿಂದೂ ದೇವಾಲಯದ ಸಾಕಷ್ಟು ಚಿಹ್ನೆಗಳು ಇವೆ. ಮತ್ತು ನಿಜವಾದ ಸ್ಥಾನವನ್ನು ತಿಳಿಯಲು, ವಕೀಲ ಕಮಿಷನರ್ ಅಗತ್ಯವಿದೆ. ಇದು ನ್ಯಾಯಾಲಯದ ಮಹತ್ವದ ತೀರ್ಪು ಎಂದು ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ದೇಗುಲದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು, "ತೀರ್ಪು ಬರುವುದು ಒಳ್ಳೆಯದು. ಸಮೀಕ್ಷೆ ಮುಖ್ಯವಾಗಿದೆ... ಸಮೀಕ್ಷೆಯು ಸತ್ಯಗಳನ್ನು ಸ್ಪಷ್ಟವಾಗಿ ತೋರಿಸುತ್ತದೆ..." ಎಂದು ಹೇಳಿದರು.
Advertisement