ಕರ್ನಾಟಕದ ಬರಗಾಲದ ಸಮಸ್ಯೆಗೆ ಸ್ಪಂದಿಸಲು ಕೇಂದ್ರ ಸರ್ಕಾರಕ್ಕೆ ಈರಣ್ಣ ಕಡಾಡಿ ಮನವಿ

ಕರ್ನಾಟಕ ರಾಜ್ಯದಲ್ಲಿ ಬರಗಾಲದಿಂದ ರೈತರು ಎದುರಿಸುತ್ತಿರುವ ಸಂಕಷ್ಟದ ಪರಿಸ್ಥಿತಿ ಪರಿಹರಿಸಲು ಕೇಂದ್ರ ಸರ್ಕಾರ ರಾಜ್ಯದ ಬರಗಾಲದ ಸಮಸ್ಯೆಗೆ ಸ್ಪಂದಿಸಿ ಸಹಾಯ ಮಾಡಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ದೆಹಲಿಯ ಸಂಸತ್ತಿನ ಚಳಿಗಾಲ ಅಧಿವೇಶನದ ಶೂನ್ಯವೇಳೆಯಲ್ಲಿ ಮನವಿ ಮಾಡಿದರು.
ರಾಜ್ಯಸಭಾ ಸಂಸದ ಈರಣ್ಣ ಕಡಾಡಿ
ರಾಜ್ಯಸಭಾ ಸಂಸದ ಈರಣ್ಣ ಕಡಾಡಿ
Updated on

ನವದೆಹಲಿ: ಕರ್ನಾಟಕ ರಾಜ್ಯದಲ್ಲಿ ಬರಗಾಲದಿಂದ ರೈತರು ಎದುರಿಸುತ್ತಿರುವ ಸಂಕಷ್ಟದ ಪರಿಸ್ಥಿತಿ ಪರಿಹರಿಸಲು ಕೇಂದ್ರ ಸರ್ಕಾರ ರಾಜ್ಯದ ಬರಗಾಲದ ಸಮಸ್ಯೆಗೆ ಸ್ಪಂದಿಸಿ ಸಹಾಯ ಮಾಡಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ದೆಹಲಿಯ ಸಂಸತ್ತಿನ ಚಳಿಗಾಲ ಅಧಿವೇಶನದ ಶೂನ್ಯವೇಳೆಯಲ್ಲಿ ಮನವಿ ಮಾಡಿದರು.

ಕರ್ನಾಟಕ ರಾಜ್ಯದಲ್ಲಿ ಮುಂಗಾರು ಮತ್ತು ಹಿಂಗಾರಿನ ಈ ಎರಡು ಅವಧಿಯಲ್ಲಿ ಪ್ರತಿವರ್ಷ ಸಾಮಾನ್ಯವಾಗಿ 131 ಮೀ.ಮೀ ನಿಂದ 138 ಮೀ.ಮೀ ವರೆಗೆ ವಾಡಿಕೆಯ ಮಳೆಯಾಗುತ್ತಿತ್ತು. ಆದರೆ ಪ್ರಸ್ತುತ ವರ್ಷದಲ್ಲಿ 47 ಮೀ.ಮೀ ನಿಂದ 107 ಮೀ.ಮೀ ಮಳೆಯಾಗಿದ್ದು, ಶೇ.47 ರಿಂದ ಶೇ.65 ರಷ್ಟು ಮಳೆಯ ಕೊರತೆಯಾಗಿದೆ ಎಂದು ಗಮನ ಸೆಳೆದರು.

ಕರ್ನಾಟಕ ರಾಜ್ಯದಲ್ಲಿ 14 ಜಲಾಶಯಗಳಿದ್ದು ಒಟ್ಟು ನೀರಿನ ಸಂಗ್ರಹದ ಸಾಮಥ್ರ್ಯ 896 ಟಿ.ಎಂ.ಸಿ ಇರುತ್ತದೆ. ಪ್ರಸ್ತುತ ವರ್ಷ ಈ ಜಲಾಶಯಗಳಲ್ಲಿ ಕೇವಲ 404 ಟಿ.ಎಂ.ಸಿ ಪ್ರಮಾಣದಷ್ಟು ಮಾತ್ರ ನೀರಿನ ಸಂಗ್ರಹವಿದೆ. ರಾಜ್ಯದ ಒಟ್ಟಾರೆ ಜಲಾಶಯಗಳಲ್ಲಿ ಶೇ. 45ರಷ್ಟು ಪ್ರಮಾಣದ ನೀರಿನ ಸಂಗ್ರಹವಿದ್ದು, ಶೇ. 55 ರಷ್ಟು ಪ್ರಮಾಣದ ನೀರಿನ ಕೊರತೆ ಜಲಾಶಯಗಳಲ್ಲಿ ಕಂಡು ಬರುತ್ತದೆ. ತೀವ್ರ ಮಳೆಯ ಕೊರತೆಯಿಂದಾಗಿ ಅಂತರ್ಜಲ ಮಟ್ಟ ರಾಜ್ಯದಲ್ಲಿ ಶೇ. 11 ರಷ್ಟು ಕುಸಿತ ಕಂಡಿದೆ. ಇದರ ಪರಿಣಾಮ ರಾಜ್ಯದ 236 ತಾಲ್ಲೂಕುಗಳ ಪೈಕಿ 223 ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ. ರಾಜ್ಯದ ಸುಮಾರು 600 ಗ್ರಾಮ ಪಂಚಾಯತಗಳಲ್ಲಿ ಕುಡಿಯುವ ನೀರಿನ ತೀವ್ರ ಕೊರತೆ ಉಂಟಾಗುವ ಸಂಭವವಿದೆ ಎಂದು ವಿವರಿಸಿದರು.

ರಾಜ್ಯದಲ್ಲಿ ಪ್ರತಿವರ್ಷ 83 ಲಕ್ಷ ಹೆಕ್ಟೇರ್ ಬೆಳೆ ಬಿತ್ತನೆಯಾಗಬೇಕು. ಆದರೆ ಈ ವರ್ಷ ಕೇವಲ 74 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಅದರಲ್ಲಿ 48 ಲಕ್ಷ ಹೆಕ್ಟೇರ್ ಬೆಳೆ ನೀರಿನ ಅಭಾವದಿಂದ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ದನ ಕರುಗಳಿಗೆ ಮುಂದಿನ ಬೇಸಿಗೆ ತಿಂಗಳುಗಳಲ್ಲಿ ಮೇವಿನ ಕೊರತೆ ಕಾಣಿಸಿಕೊಳ್ಳುವ ಸಂಭವವಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಆರ್ಥಿಕ ವರ್ಷದಲ್ಲಿ ಸುಮಾರು 456 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ವರದಿ ಅತ್ಯಂತ ದುರ್ದೈವದ ಹಾಗೂ ನೋವಿನ ಸಂಗತಿ. ಇಷ್ಟೊಂದು ಗಂಭೀರ ಸಮಸ್ಯೆಗಳನ್ನು ಜನತೆ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಕೇವಲ ಕೇಂದ್ರ ಸರ್ಕಾರದ ಕಡೆಗೆ ಬೆರಳು ತೋರಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ನಾವು ಹಿಂದಿನ ಅಂಕಿ ಸಂಖ್ಯೆ ಪರಿಶೀಲಿಸಿದಾಗ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರದ ಆಡಳಿತದ ಸಮಯದಲ್ಲಿ ಕರ್ನಾಟಕಕ್ಕೆ ಎಸ್.ಡಿ.ಆರ್.ಎಫ್ ಅಡಿಯಲ್ಲಿ ಕೇವಲ 812 ಕೋಟಿ ರೂಪಾಯಿ ಮತ್ತು ಎನ್.ಡಿ.ಆರ್.ಎಫ್ ಅಡಿಯಲ್ಲಿ 3,232 ಕೋಟಿ ರೂ.ಗಳ ನೆರವು ನೀಡಲಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯಕ್ಕೆ ಎಸ್.ಡಿ.ಆರ್.ಎಫ್ ಅಡಿ 2,778 ಕೋಟಿ ರೂಪಾಯಿ ಮತ್ತು ಎನ್.ಡಿ.ಆರ್.ಎಫ್ ಅಡಿ 12,542 ಕೋಟಿ ರೂಪಾಯಿ ನೆರವನ್ನು ನೀಡಲಾಗಿದೆ. ಆದರೂ ಕೂಡಾ ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರ ಟೀಕೆ ಮಾಡುವುದನ್ನು ನಿಲ್ಲಿಸಿಲ್ಲ ಎಂದು ಆಕ್ಷೇಪಿಸಿದರು.

ವಿಧಾನಸಭಾ ಚುನಾವಣೆಗೆ ಮುಂಚೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ತಾನು ನೀಡಿದ ಗ್ಯಾರಂಟಿಗಳನ್ನು ಸರ್ಕಾರ ರಚನೆಯಾದ ನಂತರ ಜಾರಿಗೊಳಿಸಲು ವಿಫಲವಾಗಿದೆ ಹಾಗೂ ಭೀಕರ ಬರಗಾಲಕ್ಕೆ ತುತ್ತಾಗಿರುವ ರಾಜ್ಯದ ರೈತರ ನೆರವಿಗೂ ಕೂಡ ಬರಲಾಗುತ್ತಿಲ್ಲ. ಕಾಂಗ್ರೆಸ್ ಸರ್ಕಾರದ ಸುಳ್ಳು ಭರವಸೆ ಮತ್ತು ಸಂಪೂರ್ಣ ವಿಫಲತೆಯ ಕಾರಣದಿಂದ ನಮ್ಮ ರಾಜ್ಯದ ರೈತರು ಕಂಗಾಲಾಗಿದ್ದಾರೆ.ಆದ್ದರಿಂದ ಕರ್ನಾಟಕದ ಜನತೆಯ ಹಿತದೃಷ್ಟಿಯಿಂದ ತೊಂದರೆಯಲ್ಲಿರುವ ರೈತರಿಗೆ ನೆರವಾಗಲು, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ನಮ್ಮ ರಾಜ್ಯದ ಬರಗಾಲದ ಸಮಸ್ಯೆಗೆ ಸ್ಪಂದಿಸಿ ಸಹಾಯ ಮಾಡಬೇಕೆಂದು ಸರ್ಕಾರಕ್ಕೆ ವಿನಂತಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com