ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ಚಿ
ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ಚಿ

ಭಾರತೀಯ ನೌಕಾಪಡೆ ಅಧಿಕಾರಿಗಳಿಗೆ ಕತಾರ್ ನಲ್ಲಿ ಶಿಕ್ಷೆ: ಆದೇಶ ಪರಿಶೀಲಿಸಿ ಕಾನೂನು ತಂಡದ ಜೊತೆ ಚರ್ಚೆ- ಕೇಂದ್ರ ಸರ್ಕಾರ

ಭಾರತೀಯ ನೌಕಾಪಡೆಯ 8 ಅಧಿಕಾರಿಗಳಿಗೆ ಕತಾರ್ ಕೋರ್ಟ್ ನೀಡಿರುವ ಶಿಕ್ಷೆ ಕುರಿತು ಆದೇಶ ಪರಿಶೀಲಿಸಿ ಕಾನೂನು ತಂಡದ ಜೊತೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Published on

ನವದೆಹಲಿ: ಭಾರತೀಯ ನೌಕಾಪಡೆಯ 8 ಅಧಿಕಾರಿಗಳಿಗೆ ಕತಾರ್ ಕೋರ್ಟ್ ನೀಡಿರುವ ಶಿಕ್ಷೆ ಕುರಿತು ಆದೇಶ ಪರಿಶೀಲಿಸಿ ಕಾನೂನು ತಂಡದ ಜೊತೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಈ ಬಗ್ಗೆ ಮಾತನಾಡಿದ ಕೇಂದ್ರ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ಚಿ ಅವರು, ಕತಾರ್ ನ್ಯಾಯಾಲಯದ ತೀರ್ಪನ್ನು ಪರಿಶೀಲಿಸಿ ಮತ್ತು ಈ ವಿಷಯವನ್ನು ನಿಭಾಯಿಸುವ ಕಾನೂನು ತಂಡದೊಂದಿಗೆ ಚರ್ಚಿಸಿದ ನಂತರ ಎಂಟು ಮಾಜಿ ಭಾರತೀಯ ನೌಕಾಪಡೆಯ ಸಿಬ್ಬಂದಿಗೆ ಸಂಬಂಧಿಸಿದ ಪ್ರಕರಣದಲ್ಲಿ ತನ್ನ ಮುಂದಿನ ಕ್ರಮಗಳನ್ನು ನಿರ್ಧರಿಸಲಾಗುವುದು ಎಂದು ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಬಾಗ್ಚಿ ಅವರು, ಭಾರತೀಯ ನೌಕಾಪಡೆ ಮಾಜಿ ಅಧಿಕಾರಿಗಳು ಮತ್ತು ಅವರ ಕುಟುಂಬದ ಸದಸ್ಯರ ಹಿತಾಸಕ್ತಿಯು ನಮ್ಮ ಪ್ರಮುಖ ಕಾಳಜಿಯಾಗಿದೆ. ನಾವು ಕಾನೂನು ತಂಡ ಮತ್ತು ಕುಟುಂಬ ಸದಸ್ಯರೊಂದಿಗೆ ಮುಂದಿನ ಸಂಭವನೀಯ ಕ್ರಮಗಳನ್ನು ಚರ್ಚಿಸುತ್ತೇವೆ. ಈ ವಿಷಯ ಸೂಕ್ಷ್ಮವಾಗಿರುವುದರಿಂದ ಹೆಚ್ಚಿಗೆ ಏನನ್ನೂ ಹೇಳಲು ಇಷ್ಟಪಡುವುದಿಲ್ಲ ಎಂದು ಹೇಳಿದರು.

ಶಿಕ್ಷೆ ಬದಲಿಸಿದ್ದ ಕೋರ್ಟ್
ಇನ್ನು ಕತಾರ್ ನಲ್ಲಿ ಗೂಢಚಾರಿಕೆ ನಡೆಸಿದ ಆರೋಪದ ಮೇರೆಗೆ ಭಾರತೀಯ ನೌಕಾಪಡೆಯ 8 ಮಾಜಿ ಅಧಿಕಾರಿಗಳನ್ನು ಕತಾರ್ ಕೋರ್ಟ್ ಗಲ್ಲು ಶಿಕ್ಷೆಗೆ ಗುರಿಪಡಿಸಿತ್ತು. ಭಾರತೀಯ ವಿದೇಶಾಂಗ ಇಲಾಖೆಯ ಸತತ ಪರಿಶ್ರಮ ಮತ್ತು ಸಂಧಾನಗಳ ನಡುವೆ ನಿನ್ನೆ ಕೋರ್ಟ್ ಗಲ್ಲು ಶಿಕ್ಷೆಯನ್ನು ಜೈಲು ಶಿಕ್ಷೆಯಾಗಿ ಮಾರ್ಪಡಿಸಿತ್ತು. 

ಇದನ್ನೂ ಓದಿ: ಮಾಜಿ ನೌಕಾಪಡೆ ಅಧಿಕಾರಿಗಳಿಗೆ ಗಲ್ಲು: ಭಾರತದ ಮೇಲ್ಮನವಿ ವಿಚಾರಣೆಗೆ ಕತಾರ್‌ ಕೋರ್ಟ್ ಅನುಮತಿ!
 
ಪ್ರಕರಣದ ಹಿನ್ನಲೆ
ದೋಹಾ ಮೂಲದ ಅಲ್ ದಹ್ರಾ ಗ್ಲೋಬಲ್ ಟೆಕ್ನಾಲಜೀಸ್‌ನೊಂದಿಗೆ ಕೆಲಸ ಮಾಡುತ್ತಿದ್ದ ಭಾರತೀಯ ಪ್ರಜೆಗಳನ್ನು 2022 ರ ಆಗಸ್ಟ್‌ನಲ್ಲಿ ಬೇಹುಗಾರಿಕೆ ಆರೋಪದ ಪ್ರಕರಣದಲ್ಲಿ ಬಂಧಿಸಲಾಯಿತು. ಅವರ ವಿರುದ್ಧದ ಆರೋಪಗಳನ್ನು ಕತಾರಿ ಅಧಿಕಾರಿಗಳು ಬಹಿರಂಗಗೊಳಿಸದಿದ್ದರೂ, ಈ ವರ್ಷದ ಅಕ್ಟೋಬರ್‌ನಲ್ಲಿ ಗಲ್ಫ್ ದೇಶದ ಪ್ರಥಮ ನ್ಯಾಯಾಲಯವು ಅವರಿಗೆ ಮರಣದಂಡನೆ ವಿಧಿಸಿತ್ತು. ಈ ಖಾಸಗಿ ಸಂಸ್ಥೆಯು ಕತಾರ್‌ನ ಸಶಸ್ತ್ರ ಪಡೆಗಳು ಮತ್ತು ಭದ್ರತಾ ಏಜೆನ್ಸಿಗಳಿಗೆ ತರಬೇತಿ ಮತ್ತು ಇತರ ಸೇವೆಗಳನ್ನು ಒದಗಿಸಿತ್ತು ಎನ್ನಲಾಗಿದೆ. ಇದೇ ಪ್ರಕರಣದಲ್ಲಿ ಅಧಿಕಾರಿಗಳಿಗೆ ಕೋರ್ಟ್ ಗಲ್ಲು ಶಿಕ್ಷೆ ವಿದಿಸಿತ್ತು. ಮರಣದಂಡನೆ ಶಿಕ್ಷೆಯ ವಿರುದ್ಧ ಭಾರತ ಕಳೆದ ತಿಂಗಳು ಕತಾರ್‌ನ ಮೇಲ್ಮನವಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com