2023ರ ಬಜೆಟ್ 'ಜನವಿರೋಧಿ', 'ಅಮೃತ್ ಕಾಲ್ ಪ್ರಧಾನಿ ಮೋದಿಗೆ, ಜನರಿಗೆ ಅಲ್ಲ': ಪ್ರತಿಪಕ್ಷಗಳು
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಮಂಡಿಸಿದ 2023-24ನೇ ಸಾಲಿನ ಬಜೆಟ್ ಜನ ವಿರೋಧಿಯಾಗಿದ್ದು, 2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಬಜೆಟ್ ಸಿದ್ಧಪಡಿಸಲಾಗಿದೆ...
Published: 01st February 2023 08:15 PM | Last Updated: 01st February 2023 08:46 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಮಂಡಿಸಿದ 2023-24ನೇ ಸಾಲಿನ ಬಜೆಟ್ ಜನ ವಿರೋಧಿಯಾಗಿದ್ದು, 2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಬಜೆಟ್ ಸಿದ್ಧಪಡಿಸಲಾಗಿದೆ ಎಂದು ಪ್ರತಿಪಕ್ಷಗಳು ಟೀಕಿಸಿವೆ.
ಕೇಂದ್ರ ಬಜೆಟ್ ಅನ್ನು "ಜನ ವಿರೋಧಿ" ಎಂದು ಟೀಕಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಇದು ಬಡವರನ್ನು ವಂಚಿಸಿದೆ ಎಂದು ಆರೋಪಿಸಿದ್ದಾರೆ.
ಬಿರ್ಭೂಮ್ ಜಿಲ್ಲೆಯ ಬೋಲ್ಪುರ್‌ನಲ್ಲಿ ಸರ್ಕಾರಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಮತಾ, ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿನ ಬದಲಾವಣೆಗಳಿಂದ ಯಾರಿಗೂ ಲಾಭವಾಗುದಿಲ್ಲ ಎಂದು ಹೇಳಿದ್ದಾರೆ.
"ಈ ಕೇಂದ್ರ ಬಜೆಟ್ ಸಂಪೂರ್ಣ ಅವಕಾಶವಾದಿ, ಜನವಿರೋಧಿ ಮತ್ತು ಬಡವರ ವಿರೋಧಿ. ಇದು ಕೇವಲ ಒಂದು ವರ್ಗದ ಜನರಿಗೆ ಪ್ರಯೋಜನವಾಗಲಿದೆ. ಈ ಬಜೆಟ್ ದೇಶದ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುವುದಿಲ್ಲ. ಇದನ್ನು 2024 ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಲಾಗಿದೆ" ಎಂದು ಪಶ್ಚಿಮ ಬಂಗಾಳ ಸಿಎಂ ಹೇಳಿದ್ದಾರೆ.
ಈ ಬಜೆಟ್ "ಹಮ್ ದೋ ಹುಮಾರೆ ದೋ" ಮೇಲೆ ಕೇಂದ್ರೀಕೃತವಾಗಿದೆ ಮತ್ತು ಮಧ್ಯಮ ವರ್ಗದ ಜನರಿಗೆ ವಿಶೇಷವಾದದ್ದೇನೂ ಇಲ್ಲ ಎಂದು ಟಿಎಂಸಿ ನಾಯಕ ಶತ್ರುಘ್ನ ಸಿನ್ಹಾ ತಿಳಿಸಿದ್ದಾರೆ.
ಇದನ್ನು ಓದಿ: ಇದು ಅಮೃತ್ ಕಾಲದ ಮೊದಲ ಬಜೆಟ್: ನಿರ್ಮಲಾ ಸೀತಾರಾಮನ್ ರನ್ನು ಶ್ಲಾಘಿಸಿದ ಪ್ರಧಾನಿ ಮೋದಿ
ಕಳೆದ ವರ್ಷ ಬಜೆಟ್‌ಗಿಂತ ವಾಸ್ತವಿಕ ವೆಚ್ಚವು ಗಣನೀಯವಾಗಿ ಕಡಿಮೆಯಾಗಿದೆ ಎಂದು ಟೀಕಿಸಿದ ಕಾಂಗ್ರೆಸ್, ಇದು ಪ್ರಧಾನಿ ನರೇಂದ್ರ ಮೋದಿಯವರ ಹೆಡ್‌ಲೈನ್ ಮ್ಯಾನೇಜ್‌ಮೆಂಟ್ ತಂತ್ರ ಎಂದು ಆರೋಪಿಸಿದೆ.
ಕಳೆದ ವರ್ಷದ ಬಜೆಟ್‌ನಲ್ಲಿ ಕೃಷಿ, ಆರೋಗ್ಯ, ಶಿಕ್ಷಣ, ಎಂಜಿಎನ್‌ಆರ್‌ಇಜಿಎ ಮತ್ತು ಎಸ್‌ಸಿಗಳ ಕಲ್ಯಾಣಕ್ಕೆ ಹೆಚ್ಚಿನ ಹಣ ಮೀಸಲಿಟ್ಟಿದ್ದಕ್ಕಾಗಿ ಶ್ಲಾಘನೆ ವ್ಯಕ್ತವಾಗಿತ್ತು. ಆದರೆ "ಈಗ ವಾಸ್ತವ ಗೊತ್ತಾಗಿದೆ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
2014 ರಿಂದ ತಲಾ ಆದಾಯನ್ನು ದ್ವಿಗುಣಗೊಳಿಸುವುದಾಗಿ ಹೇಳುತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಪ್ರಶ್ನಿಸಿದ ಆಮ್ ಆದ್ಮಿ ಪಕ್ಷ(ಎಎಪಿ), ಈ ಬಜೆಟ್ ಪ್ರಧಾನಿ ನರೇಂದ್ರ ಮೋದಿಯವರಿಗೆ 'ಅಮೃತ ಕಾಲ', ದೇಶದ ಸಾಮಾನ್ಯ ಜನರಿಗೆ ಅಲ್ಲ ಎಂದಿದೆ.
"ರೈತರ ಆದಾಯ ದ್ವಿಗುಣವಾಗಲಿಲ್ಲ, ಬೆಳೆಗಳ ಎಂಎಸ್‌ಪಿ ಹೆಚ್ಚಾಗಲಿಲ್ಲ, ಯುವಕರಿಗೆ ಉದ್ಯೋಗವೂ ಸಿಗಲಿಲ್ಲ. ಆದರೂ ನಿರ್ಮಲಾ ಜಿ ತಲಾ ಆದಾಯ ದ್ವಿಗುಣಗೊಂಡಿದೆ ಎಂದು ಹೇಳುತ್ತಿದ್ದಾರೆ. ಆದರೆ ಯಾರ ಆದಾಯ ದ್ವಿಗುಣಗೊಂಡಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ ಎಎಪಿಯ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರು, ಇದು ಮೋದಿಯವರಿಗೆ ಅಮೃತ ಕಾಲ್ ಎಂದು ಟ್ವೀಟ್ ಮಾಡಿದ್ದಾರೆ.