ಮಹಾರಾಷ್ಟ್ರದಲ್ಲಿ ಕೆಸಿಆರ್ ರ್ಯಾಲಿ: ಕೇಂದ್ರದಲ್ಲಿ ರೈತರ ಸರ್ಕಾರ ರಚಿಸುವುದಾಗಿ ಶಿವನೇರಿಯಲ್ಲಿ ಪ್ರತಿಜ್ಞೆ

ರಾಷ್ಟ್ರೀಯ ಪಕ್ಷ ಘೋಷಿಸಿದ ನಂತರ ಮೊದಲ ಬಾರಿಗೆ ತೆಲಂಗಾಣದ ಹೊರಗೆ ಮಹಾರಾಷ್ಟ್ರದಲ್ಲಿ ರ್ಯಾಲಿ ನಡೆಸಿದ ತೆಲಂಗಾಣ ಮುಖ್ಯಮಂತ್ರಿ ಮತ್ತು ಬಿಆರ್‌ಎಸ್ ಅಧ್ಯಕ್ಷ ಕೆ ಚಂದ್ರಶೇಖರ್ ರಾವ್, ಕೇಂದ್ರದಲ್ಲಿ ರೈತರ ಸರ್ಕಾರ...
ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್
ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್

ನಾಂದೇಡ್: ರಾಷ್ಟ್ರೀಯ ಪಕ್ಷ ಘೋಷಿಸಿದ ನಂತರ ಮೊದಲ ಬಾರಿಗೆ ತೆಲಂಗಾಣದ ಹೊರಗೆ ಮಹಾರಾಷ್ಟ್ರದಲ್ಲಿ ರ್ಯಾಲಿ ನಡೆಸಿದ ತೆಲಂಗಾಣ ಮುಖ್ಯಮಂತ್ರಿ ಮತ್ತು ಬಿಆರ್‌ಎಸ್ ಅಧ್ಯಕ್ಷ ಕೆ ಚಂದ್ರಶೇಖರ್ ರಾವ್ ಅವರು, ಕೇಂದ್ರದಲ್ಲಿ ರೈತರ ಸರ್ಕಾರ ರಚಿಸುವುದಾಗಿ ನಮ್ಮ ಪಕ್ಷ ಛತ್ರಪತಿ ಶಿವಾಜಿ ಜನ್ಮಸ್ಥಳವಾದ ಶಿವನೇರಿಯಲ್ಲಿ ಪ್ರತಿಜ್ಞೆ ಮಾಡಲಿದೆ ಎಂದು ಭಾನುವಾರ ಹೇಳಿದ್ದಾರೆ.

ಇಂದು ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಭಾರತ್ ರಾಷ್ಟ್ರ ಸಮಿತಿ(ಬಿಆರ್‌ಎಸ್)ಯ ಮೊದಲ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕೆಸಿಆರ್, 10 ದಿನಗಳಲ್ಲಿ ಬಿಆರ್‌ಎಸ್ ಪಕ್ಷದ ವಾಹನಗಳು ಪಶ್ಚಿಮ ರಾಜ್ಯದ ಎಲ್ಲಾ 288 ವಿಧಾನಸಭಾ ಕ್ಷೇತ್ರಗಳ ಪ್ರತಿ ಹಳ್ಳಿಗೆ ತೆರಳಿ ರೈತರ ಸಮಿತಿಗಳನ್ನು ರಚಿಸಲಿವೆ ಎಂದು ಹೇಳಿದರು.

"ನಾವು ಶಿವನೇರಿಯಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಜನ್ಮಸ್ಥಳಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯುತ್ತೇವೆ. ದೇಶದಲ್ಲಿ ರೈತರ ಕಲ್ಯಾಣಕ್ಕಾಗಿ ಕೇಂದ್ರದಲ್ಲಿ ರೈತ ಸರ್ಕಾರ ರಚಿಸುವ ಬಗ್ಗೆ ಪ್ರತಿಜ್ಞೆ ಮಾಡುತ್ತೇವೆ. ಇಡೀ ಮಹಾರಾಷ್ಟ್ರದಲ್ಲಿ ರೈತರ ಸಮಿತಿಗಳನ್ನು ಮಾಡುವ ಪ್ರಕ್ರಿಯೆ ಪ್ರಾರಂಭವಾಗಲಿದೆ" ಎಂದು ಕೆಸಿಆರ್ ಹಿಂದಿಯಲ್ಲಿ ಭಾಷಣ ಮಾಡಿದರು.

ಇದೇ ವೇಳೆ ವಿವಿಧ ರಾಜಕೀಯ ಪಕ್ಷಗಳಿಗೆ ಸೇರಿದ ಮುಖಂಡರು ಬಿಆರ್‌ಎಸ್‌ಗೆ ಸೇರ್ಪಡೆಗೊಂಡರು. ಕೆಸಿಆರ್ ಅವರಿಗೆ ಗುಲಾಬಿ ಸ್ಕಾರ್ಫ್‌ಗಳನ್ನು ನೀಡಿ ಪಕ್ಷಕ್ಕೆ ಸ್ವಾಗತಿಸಿದರು.

"ನೀವು (ರೈತರು) ಒಂದಾಗಲು ನಾನು ವಿನಂತಿಸುತ್ತೇನೆ. ನಾನು ಪಶ್ಚಿಮ ಮಹಾರಾಷ್ಟ್ರ, ವಿದರ್ಭ ಮತ್ತು ಉತ್ತರ ಮಹಾರಾಷ್ಟ್ರಕ್ಕೂ ಭೇಟಿ ನೀಡುತ್ತೇನೆ" ಎಂದು ರಾವ್ ಹೇಳಿದರು.

ನಾವು ಒಗ್ಗೂಡಿದರೆ ಅದು ಅಸಾಧ್ಯವಲ್ಲ, ನಮ್ಮ ದೇಶದಲ್ಲಿ, ರೈತರು ಶೇಕಡಾ 42 ಕ್ಕಿಂತ ಹೆಚ್ಚು ಇದ್ದಾರೆ ಮತ್ತು ಅದಕ್ಕೆ ಕೃಷಿ ಕಾರ್ಮಿಕರ ಸಂಖ್ಯೆಯನ್ನು ಸೇರಿಸಿದರೆ ಅದು ಶೇಕಡಾ 50 ಕ್ಕಿಂತ ಹೆಚ್ಚಾಗಿರುತ್ತದೆ. ಇದು ಸರ್ಕಾರ ರಚಿಸಲು ಸಾಕಾಗುತ್ತದೆ” ಎಂದು ಕೆಸಿಆರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com