ತೆಲಂಗಾಣ: ರಾಜಭವನದಲ್ಲಿ ನಡೆದ ಗಣರಾಜ್ಯೋತ್ಸವಕ್ಕೆ ಗೈರಾದ ಸಿಎಂ ಕೆಸಿಆರ್!
ದೇಶದಾದ್ಯಂತ 74ನೇ ಗಣರಾಜ್ಯೋತ್ಸವವನ್ನು ಸಂಭ್ರದಿಂದ ಆಚರಿಸಲಾಗುತ್ತಿದ್ದು, ಈ ನಡುವೆ ಹೈದರಾಬಾದ್'ನ ರಾಜಭವನದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಗೈರು ಹಾಜರಾಗಿರುವುದು ಹಲವರ ಹುಬ್ಬೇರುವಂತೆ ಮಾಡಿದೆ.
Published: 26th January 2023 12:52 PM | Last Updated: 26th January 2023 12:52 PM | A+A A-

ಹೈದರಾಬಾದ್ ರಾಜಭವನದಲ್ಲಿ ಧ್ವಜಾರೋಹಣ ನೆರವೇರಿಸಿರುವುದು.
ಹೈದರಾಬಾದ್: ದೇಶದಾದ್ಯಂತ 74ನೇ ಗಣರಾಜ್ಯೋತ್ಸವವನ್ನು ಸಂಭ್ರದಿಂದ ಆಚರಿಸಲಾಗುತ್ತಿದ್ದು, ಈ ನಡುವೆ ಹೈದರಾಬಾದ್'ನ ರಾಜಭವನದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಗೈರು ಹಾಜರಾಗಿರುವುದು ಹಲವರ ಹುಬ್ಬೇರುವಂತೆ ಮಾಡಿದೆ.
ಇಂದು ಬೆಳಗ್ಗೆ ತೆಲಂಗಾಣ ರಾಜ್ಯಪಾಲೆ ಡಾ.ತಮಿಳಿಸೈ ಸುಂದರ್ರಾಜನ್ ಅವರು ಪ್ರಗತಿ ಭವನದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಇದಕ್ಕೂ ಮುನ್ನ ಸಿಕಂದರಾಬಾದ್ ಪರೇಡ್ ಮೈದಾನದಲ್ಲಿರುವ ಅಮರ ಸೈನಿಕರ ಸ್ಮಾರಕದಲ್ಲಿ ಜ್ಯೋತಿ ಬೆಳಗಿಸಿ ನಮನ ಸಲ್ಲಿಸಿದರು. ಈ ವೇಳೆ ಮುಖ್ಯಮಂತ್ರಿಗಳು ಗೈರು ಹಾಜರಾಗಿರುವುದು ಎದ್ದು ಕಾಣುತ್ತಿತ್ತು.
ರಾಜ್ಯಪಾಲರ ಜೊತೆಗಿನ ಭಿನ್ನಾಭಿಪ್ರಾಯಗಳೇ ಈ ಬೆಳವಣಿಗೆಗೆ ಕಾರಣ ಎಂದು ಹೇಳಲಾಗುತ್ತಿದೆ. ಈ ನಡುವೆ ಸಂಜೆ ರಾಜ್ಯಪಾಲರು ನೀಡುತ್ತಿರುವ ಭೋಜನ ಕೂಟಕ್ಕೂ ಕೆಸಿಆರ್ ಭಾಗವಹಿಸುತ್ತಿಲ್ಲ ಎಂದು ತಿಳಿದುಬಂದಿದೆ.
ತೆಲಂಗಾಣದಲ್ಲಿ ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ಮಧ್ಯೆ ಜಟಾಪಟಿ ನಡೆಯುತ್ತಿದೆ. ಸಿಕಂದರಾಬಾದ್ ಪರೇಡ್ ಮೈದಾನದಲ್ಲಿ ಸಮಾರಂಭ ನಡೆಸುವ ಬದಲು ರಾಜಭವನದಲ್ಲಿಯೇ ಸಮಾರಂಭ ನಡೆಸುವಂತೆ ಸರ್ಕಾರ ರಾಜ್ಯಪಾಲರಿಗೆ ಪತ್ರ ಬರೆದಿತ್ತು.
ಕೋವಿಡ್ ಹಿನ್ನೆಲೆಯಲ್ಲಿ ರಾಜಭವನದಲ್ಲಿಯೇ ಗಣರಾಜ್ಯೋತ್ಸವ ಆಚರಿಸಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿತ್ತು. ಈ ಬಗ್ಗೆ ರಾಜ್ಯಪಾಲರಾದ ತಮಿಳಿಸೈ ಸುಂದರರಾಜನ್ ಬೇಸರ ವ್ಯಕ್ತಪಡಿಸಿದ್ದರು. ಕೊರೊನಾ ಹೆಸರಿನಲ್ಲಿ ಯಾವುದೇ ಆಚರಣೆಗಳು ನಡೆಯದಿರುವುದು ಬೇಸರದ ಸಂಗತಿ ಎಂದು ಅಸಮಾಧಾನಗೊಂಡಿದ್ದರು.
ಈ ನಡುವೆ ಗಣರಾಜ್ಯೋತ್ಸವದ ಅಂಗವಾಗಿ ಪರೇಡ್ ಆಯೋಜಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ತೆಲಂಗಾಣ ಹೈಕೋರ್ಟ್ ನಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿತ್ತು.
ಈ ಹಿಂದೆ ಸಿಕಂದರಾಬಾದ್ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿತ್ತು. ಸಾವಿರಾರು ಮಂದಿ ಕಾರ್ಯಕ್ರಮವನ್ನು ವೀಕ್ಷಿಸುತಿದ್ದರು ಎಂದು ಅರ್ಜಿಯಲ್ಲಿ ಹೇಳಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಕೇಂದ್ರ ಸರ್ಕಾರದ ನಿರ್ದೇಶನದಂತೆ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸುವಂತೆ ಹಾಗೂ ಪರೇಡ್ ಆಯೋಜಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿತ್ತು.