ಬಿಜೆಪಿಯ ಆರು ಸಂಸದರು, 13 ಶಾಸಕರು ಟಿಎಂಸಿ ಸೇರಲು ಸಿದ್ಧರಿದ್ದಾರೆ: ಟಿಎಂಸಿ ನಾಯಕ
ಬಿಜೆಪಿ ಶಾಸಕರೊಬ್ಬರು ತೃಣಮೂಲ ಕಾಂಗ್ರೆಸ್(ಟಿಎಂಸಿ)ಗೆ ಸೇರಿದ ಮಾರನೇ ದಿನವೇ ಕೇಸರಿ ಪಾಳೆಯದ ಹಲವು ಸಂಸದರು ಮತ್ತು ಶಾಸಕರು ಬಂಗಾಳದ ಆಡಳಿತ ಪಕ್ಷಕ್ಕೆ ಜಿಗಿಯಲು ಅಣಿಯಾಗುತ್ತಿದ್ದಾರೆ ಎಂದು ಟಿಎಂಸಿ ನಾಯಕರೊಬ್ಬರು...
Published: 06th February 2023 08:41 PM | Last Updated: 06th February 2023 08:41 PM | A+A A-

ಕುನಾಲ್ ಘೋಷ್
ಕೋಲ್ಕತ್ತಾ: ಬಿಜೆಪಿ ಶಾಸಕರೊಬ್ಬರು ತೃಣಮೂಲ ಕಾಂಗ್ರೆಸ್(ಟಿಎಂಸಿ)ಗೆ ಸೇರಿದ ಮಾರನೇ ದಿನವೇ ಕೇಸರಿ ಪಾಳೆಯದ ಹಲವು ಸಂಸದರು ಮತ್ತು ಶಾಸಕರು ಬಂಗಾಳದ ಆಡಳಿತ ಪಕ್ಷಕ್ಕೆ ಜಿಗಿಯಲು ಅಣಿಯಾಗುತ್ತಿದ್ದಾರೆ ಎಂದು ಟಿಎಂಸಿ ನಾಯಕರೊಬ್ಬರು ಸೋಮವಾರ ಹೇಳಿದ್ದಾರೆ.
ಇನ್ನೂ ಪಕ್ಷಾಂತರ ಮಾಡದ ಬಿಜೆಪಿ ಶಾಸಕರು ಮತ್ತು ಸಂಸದರಿಗೆ ಕೇಸರಿ ಪಾಳಯದಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಟಿಎಂಸಿ ಆರೋಪಿಸಿದೆ.
ಇದನ್ನು ಓದಿ: ಪಂಚಾಯತ್ ಚುನಾವಣೆ: ಪಶ್ಚಿಮ ಬಂಗಾಳ ಬಿಜೆಪಿ ಶಾಸಕ ಸುಮನ್ ಕಾಂಜಿಲಾಲ್ ಟಿಎಂಸಿಗೆ ಸೇರ್ಪಡೆ
"ಕನಿಷ್ಠ ಆರು ಸಂಸದರು ಮತ್ತು 13 ಶಾಸಕರು ಟಿಎಂಸಿಗೆ ಸೇರಲು ಸಿದ್ಧರಾಗಿದ್ದಾರೆ. ಪಕ್ಷದ ವರಿಷ್ಠೆ ಮಮತಾ ಬ್ಯಾನರ್ಜಿ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅವರಲ್ಲಿ ಹಲವರು ಈಗಾಗಲೇ ಅಭಿಷೇಕ್ ಅವರ ಕಚೇರಿಯಲ್ಲಿ ಮತ್ತು ಮುಖ್ಯಮಂತ್ರಿಯನ್ನು ಅವರ ಜಿಲ್ಲಾ ಭೇಟಿಯ ಸಮಯದಲ್ಲಿ ಭೇಟಿಯಾಗಿದ್ದಾರೆ" ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಹೇಳಿದ್ದಾರೆ.
ಬಿಜೆಪಿಯ ಚುನಾಯಿತ ಪ್ರತಿನಿಧಿಗಳೊಂದಿಗೆ ಪಕ್ಷವು ನಿರಂತರ ಸಂಪರ್ಕದಲ್ಲಿದೆ ಎಂದು ಘೋಷ್ ಸ್ಪಷ್ಟಪಡಿಸಿದ್ದಾರೆ.
"ಕೆಲವು ಬಿಜೆಪಿ ನಾಯಕರು ನಮ್ಮ ಪಕ್ಷಕ್ಕೆ ಸೇರಿದರೆ ಸ್ಥಳೀಯ ನಾಯಕತ್ವದ ನಾಡಿಮಿಡಿತ ಮತ್ತು ಅವರ ಪ್ರತಿಕ್ರಿಯೆಯನ್ನು ನಾವು ಅರ್ಥಮಾಡಿಕೊಳ್ಳಬೇಕು. ನಾವು ನಮ್ಮ ಸಮೀಕ್ಷೆಗಳ ಬಗ್ಗೆ ಮುಖ್ಯಮಂತ್ರಿಗೆ ತಿಳಿಸುತ್ತೇವೆ ಮತ್ತು ಅವರು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ" ಎಂದು ಘೋಷ್ ತಿಳಿಸಿದ್ದಾರೆ.