ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಪುಣರು, ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುವುದರಲ್ಲಿ ಸಿದ್ಧಹಸ್ತರು: ಮಲ್ಲಿಕಾರ್ಜುನ ಖರ್ಗೆ
ಹಳೆಯ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆರಂಭಿಸಿದ ಕಾರ್ಯಕ್ರಮಗಳನ್ನು ಉದ್ಘಾಟನೆ ಮಾಡಿ ಅದರ ಚುನಾವಣಾ ಲಾಭ ಪಡೆದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ನೋಡುತ್ತಿದ್ದಾರೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
Published: 07th February 2023 10:48 AM | Last Updated: 07th February 2023 08:11 PM | A+A A-

ಮಲ್ಲಿಕಾರ್ಜುನ ಖರ್ಗೆ
ನವದೆಹಲಿ: ಹಳೆಯ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆರಂಭಿಸಿದ ಕಾರ್ಯಕ್ರಮಗಳನ್ನು ಉದ್ಘಾಟನೆ ಮಾಡಿ ಅದರ ಚುನಾವಣಾ ಲಾಭ ಪಡೆದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ನೋಡುತ್ತಿದ್ದಾರೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಬಿಜೆಪಿಯವರೇನು ಇಂದು ಮ್ಯಾಜಿಕ್ ಮಾಡಿಲ್ಲ. ಹೆಚ್ ಎಎಲ್ 108 ರಫೇಲ್ ಯುದ್ಧ ವಿಮಾನಗಳನ್ನು ಕಟ್ಟಲು ಸಿದ್ಧವಾಗಿದ್ದು, ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಫ್ರಾನ್ಸ್ ನಿಂದ ತಂದಿರುವುದು ರೆಡಿಮೇಡ್ ರಫೇಲ್ ಜೆಟ್. ಜವಹರಲಾಲ್ ನೆಹರೂರವರ ಆಡಳಿತಾವಧಿಯಲ್ಲಿಯೇ ಹಲವು ಕೈಗಾರಿಕೆಗಳು ಕರ್ನಾಟಕಕ್ಕೆ ಬಂದಿದ್ದವು ಎಂದರು.
ಅದಾನಿ ಗ್ರೂಪ್ ವಿವಾದಕ್ಕೆ ಸಂಬಂಧಪಟ್ಟಂತೆ ಸದನದಲ್ಲಿ ನಡೆಯುತ್ತಿರುವ ಗದ್ದಲಕ್ಕೆ ಪ್ರತಿಕ್ರಿಯಿಸಿರುವ ಅವರು, ಅದಾನಿ ಗ್ರೂಪ್ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಜೆಪಿಸಿ ಅಥವಾ ಸಿಜೆಐ ನೇತೃತ್ವದ ತನಿಖಾ ತಂಡದಿಂದ ಸರಿಯಾದ ತನಿಖೆ ನಡೆಸಿ ಎಂದು ನಾವು ಕೇಳಿಕೊಳ್ಳುತ್ತಿದ್ದೇವೆ. ನಮ್ಮ ಬೇಡಿಕೆಯನ್ನು ಒಪ್ಪಿಕೊಳ್ಳಿ ಎಂದು ಆಡಳಿತ ಪಕ್ಷವನ್ನು ಸದನದಲ್ಲಿ ಕೇಳುತ್ತಿದ್ದೇವೆ. ಅದಕ್ಕೆ ನೀವೇಕೆ ಹಿಂಜರಿಯುತ್ತಿದ್ದೀರಿ, ಇದರಲ್ಲೇನು ತಪ್ಪಿದೆ, ಏಕೆ ನೀವು ತನಿಖಾ ತಂಡ ರಚಿಸುವುದಿಲ್ಲ, ಇಂತಹ ವಿಷಯಗಳು ಬಂದಾಗ ಬಿಜೆಪಿಯವರು ಚರ್ಚೆಯಿಂದ ಹಿಂದೆ ಸರಿಯುತ್ತಾರೆ ಎಂದರು.
ನಾವೊಂದು ವಿಷಯ ಪ್ರಸ್ತಾಪ ಮಾಡುವ ಮೊದಲೇ ಸದನವನ್ನು ಮುಂದೂಡುತ್ತಾರೆ. ನಮ್ಮ ನೊಟೀಸ್ ಗಳಿಗೆ ಸದನದಲ್ಲಿ ಕಿಮ್ಮತ್ತು ನೀಡುವುದಿಲ್ಲ. ಸದನ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ ಎನ್ನುತ್ತಾರೆ. ನೀವು ಸರಿಯಾಗಿ ಸದನ ನಡೆಯಲು ಬಿಡುತ್ತೀರಾ, ವಿರೋಧ ಪಕ್ಷದವರು ಸದನದಲ್ಲಿ ಗದ್ದಲ ಮಾಡುತ್ತಾರೆ, ಕಲಾಪ ನಡೆಯಲು ಬಿಡುವುದಿಲ್ಲ ಎಂದು ಸುಳ್ಳು ಹೇಳುತ್ತಾರೆ, ಬಿಜೆಪಿ ಸುಳ್ಳು ಹೇಳುವುದರಲ್ಲಿ ನುರಿತವಾಗಿದೆ. ಸುಳ್ಳು ಹೇಳಿ ಜನರನ್ನು ದಾರಿತಪ್ಪಿಸುವುದರಲ್ಲಿ ಸಿದ್ಧಹಸ್ತರು ಎಂದು ಖರ್ಗೆ ಕಿಡಿಕಾರಿದರು.