Joshimath Sinking: ಜೋಶಿಮಠ ಕುಸಿತಕ್ಕೆ ಮಿತಮೀರಿದ ಜನಸಂಖ್ಯೆ, ನಿರ್ಮಾಣ, ಮೂಲಸೌಕರ್ಯ ವೃದ್ಧಿ ಕಾರಣ: IUCN

ಇಡೀ ದೇಶಾದ್ಯಂತ ವ್ಯಾಪಕ ಆತಂಕಕ್ಕೆ ಕಾರಣವಾಗಿದ್ದ ದೇವಭೂಮಿ ಉತ್ತರಾಖಂಡದ ಜೋಶಿಮಠ ಕುಸಿತಕ್ಕೆ ಅಲ್ಲಿಯ ಮಿತಮೀರಿದ ಜನಸಂಖ್ಯೆ, ನಿರ್ಮಾಣ, ಮೂಲಸೌಕರ್ಯ ವೃದ್ಧಿಯೇ ಕಾರಣ ಎಂದು ಹೇಳಲಾಗಿದೆ.
ಉತ್ತರಾಖಂಡದ ಜೋಶಿಮಠದಲ್ಲಿ ಬಿರುಕು ಬಿಟ್ಟ ಭೂಮಿ
ಉತ್ತರಾಖಂಡದ ಜೋಶಿಮಠದಲ್ಲಿ ಬಿರುಕು ಬಿಟ್ಟ ಭೂಮಿ
Updated on

ಡೆಹ್ರಾಡೂನ್: ಇಡೀ ದೇಶಾದ್ಯಂತ ವ್ಯಾಪಕ ಆತಂಕಕ್ಕೆ ಕಾರಣವಾಗಿದ್ದ ದೇವಭೂಮಿ ಉತ್ತರಾಖಂಡದ ಜೋಶಿಮಠ ಕುಸಿತಕ್ಕೆ ಅಲ್ಲಿಯ ಮಿತಮೀರಿದ ಜನಸಂಖ್ಯೆ, ನಿರ್ಮಾಣ, ಮೂಲಸೌಕರ್ಯ ವೃದ್ಧಿಯೇ ಕಾರಣ ಎಂದು ಹೇಳಲಾಗಿದೆ.

ಈ ಬಗ್ಗೆ ಅಧ್ಯಯನ ನಡೆಸಿದ್ದ ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (ಅಂತಾರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟ-IUCN) ತನ್ನ ವರದಿ ನೀಡಿದ್ದು, ಹಿಮಾಲಯ ಪ್ರದೇಶವು ದುರ್ಬಲಗೊಳ್ಳುತ್ತಿರುವುದು ಹಾಗೂ ಜನಸಂಖ್ಯೆ ಏರಿಕೆ ಮತ್ತು ಮೂಲಸೌಕರ್ಯಗಳ ವೃದ್ಧಿಯು ಜೋಶಿಮಠದಂತ ಪ್ರಕರಣಗಳಿಗೆ ಕಾರಣವಾಗಿದೆ ಎಂದು ಹೇಳಿದೆ.

ಈ ಕುರಿತು ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಐಯುಸಿಎನ್ ಹಿರಿಯ ಅಧಿಕಾರಿಗಳಲ್ಲಿ ಒಬ್ಬರಾದ ಐಯುಸಿಎನ್‌ನ ಭಾರತದ ಪ್ರತಿನಿಧಿ ಯಶ್‌ವೀರ್ ಭಟ್ನಾಗರ್‌ ಅವರು ಮಾತನಾಡಿ, 'ಪ್ರಾಕೃತಿಕ ವಿಕೋಪ ಪರಿಸ್ಥಿತಿ ಎದುರಿಸುವಲ್ಲಿ ಭಾರತದ ಸಿದ್ಧತೆ ಮತ್ತು ಪ್ರತಿಕ್ರಿಯೆ ಗಣನೀಯವಾಗಿ ಉತ್ತಮಗೊಂಡಿದೆ. ದಿಢೀರ್‌ ಪ್ರವಾಹ, ಮೇಘಸ್ಫೋಟ ಅಥವಾ ಜೋಶಿಮಠದಂತಹ ಪ್ರಕರಣ ಈ ಎಲ್ಲ ಸಂದರ್ಭಗಳಲ್ಲಿ ವಿವಿಧ ಅಂಶಗಳು ಒಟ್ಟಾಗಿ ಕಾರಣವಾಗುತ್ತವೆ. ಜನಸಂಖ್ಯೆಯ ಏರಿಕೆ ಮತ್ತು ಪ್ರವಾಸಿಗರಿಗಾಗಿ ಹೆಚ್ಚುತ್ತಿರುವ ಮೂಲಸೌಕರ್ಯಗಳ ಒತ್ತಡ, ಹಿಮಾಲಯ ಪ್ರದೇಶವು ದುರ್ಬಲಗೊಳ್ಳುತ್ತಿರುವುದು ಮೂಲ ಕಾರಣಗಳು ಎಂದು ಅಭಿಪ್ರಾಯಪಟ್ಟರು.

ಅಂತೆಯೇ ಸಂರಕ್ಷಕರಾಗಿ ನಾವು ಯಾವುದೇ ಸ್ಥಳದಲ್ಲಿ ಅಭಿವೃದ್ಧಿ ಸ್ಥಗಿತಗೊಳಿಸಬೇಕು ಎಂದು ಬಯಸುವುದಿಲ್ಲ. ಹಿಮಾಲಯದ ಕುಗ್ರಾಮಗಳಿಗೆ ಮೂಲಸೌಲಭ್ಯಗಳು ಅಗತ್ಯ ಎಂಬುದನ್ನು ಗಮನದಲ್ಲಿಟ್ಟುಕೊಂಡೇ ಅಭಿವೃದ್ಧಿ ಆದಷ್ಟು ಸುಸ್ಥಿರವಾಗಿರಬೇಕು ಎಂದು ನಾವು ಬಯಸುತ್ತೇವೆ. ಹಿಮಾಲಯದಲ್ಲಿನ ಜೋಶಿಮಠವು 12 ದಿನಗಳಲ್ಲಿ 5.4 ಸೆಂ.ಮೀನಷ್ಟು ಕುಸಿದಿತ್ತು ಎಂಬುದನ್ನು ಉಪಗ್ರಹ ಚಿತ್ರಗಳು ದೃಢಪಡಿಸಿದ್ದವು. ಜೋಶಿಮಠ ಪಟ್ಟಣವು ಹಿಮಾಲಯದ ಇಳಿಜಾರು ಪ್ರದೇಶದಲ್ಲಿದೆ. ಅಲ್ಲಿ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿರುವುದು ಇದಕ್ಕೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.

ಐಯುಸಿಎನ್ ಇಂಡಿಯಾ ಮತ್ತು ಟಿಸಿಎಸ್‌ ಫೌಂಡೇಷನ್ ಈಗ ಜಂಟಿಯಾಗಿ ‘ಭವಿಷ್ಯಕ್ಕಾಗಿ ಹಿಮಾಲಯ’ ಹೆಸರಿನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸುಸ್ಥಿರತೆಗೆ ಒತ್ತು ನೀಡುತ್ತಿದೆ. ಭಾಗಿದಾರರ ಸಹಯೋಗದಲ್ಲಿ ಹಾಲಿ ಕಾರ್ಯಕ್ರಮಗಳ ಮರುಪರಿಶೀಲನೆ, ಸಂಶೋಧನೆ, ಕಟ್ಟಡಗಳ ಸ್ವರೂಪ ಮರುಚಿಂತನೆ ಕ್ರಮಗಳು ಇದರಲ್ಲಿ ಸೇರಿವೆ. ಅರಣ್ಯ ರಕ್ಷಣೆ, ನಗರೀಕರಣ, ಜಲಮೂಲಗಳು, ಇಂಧನ ಸೌಲಭ್ಯ, ಮೂಲಸೌಕರ್ಯ, ವಲಸೆ, ಸ್ಥಳೀಯರ ಸಾಂಪ್ರಾದಾಯಿಕ ತಿಳಿವಳಿಕೆ, ಪ್ರಾಕೃತಿಕ ವಿಕೋಪ ಇತ್ಯಾದಿ ದೃಷ್ಟಿಯಿಂದ ಸಂಶೋಧನೆ ನಡೆದಿದೆ ಎಂದು ಐಯುಸಿಎನ್‌ ಭಾರತ ಕಾರ್ಯಕ್ರಮ ಮೇಲ್ವಿಚಾರಕಿ ಅರ್ಚನಾ ಚಟರ್ಜಿ ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com