

ನವದೆಹಲಿ: ಸುಪ್ರೀಂ ಕೋರ್ಟ್ ನ್ನು ಭಾರತ ವಿರೋಧ ಶಕ್ತಿಗಳು ಸಾಧನವಾಗಿ ಬಳಕೆ ಮಾಡಿಕೊಳ್ಳುತ್ತಿವೆ ಎಂದು ಆರ್ ಎಸ್ ಎಸ್ ನ ಸಾಪ್ತಾಹಿಕ ಪತ್ರಿಕೆ ಪಾಂಚಜನ್ಯ ಬರೆದಿದೆ.
ಪ್ರಧಾನಿ ಮೋದಿ ಕುರಿತ ಬಿಬಿಸಿ ಡಾಕ್ಲ್ಯುಮೆಂಟರಿ ಲಿಂಕ್ ನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿಷೇಧಿಸಲಾಗಿರುವ ಕ್ರಮದ ಬಗ್ಗೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿರುವುದನ್ನು ಟೀಕಿಸಿರುವ ಆರ್ ಎಸ್ಎಸ್ ಸಾಪ್ತಾಹಿಕ ಪತ್ರಿಕೆ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಭಯೋತ್ಪಾದಕರನ್ನು ಮಾನವಹಕ್ಕುಗಳ ಹೆಸರಿನಲ್ಲಿ ರಕ್ಷಿಸುವ ಯತ್ನಗಳ ನಂತರ, ಪರಿಸರದ ಹೆಸರಿನಲ್ಲಿ ಭಾರತದ ಅಭಿವೃದ್ಧಿಗೆ ಅಡೆತಡೆಗಳನ್ನೊಡ್ಡಲು ಯತ್ನಿಸಿದ ನಂತರ ಈಗ ದೇಶವಿರೋಧಿ ಶಕ್ತಿಗಳಿಗೆ ದೇಶದ ವಿರುದ್ಧ, ಭಾರತದಲ್ಲೇ ಪ್ರಚಾರ ಮಾಡಲು ಅವಕಾಶ ನೀಡಲು ಯತ್ನಿಸಲಾಗುತ್ತಿದೆ ಎಂದು ಸಂಪಾದಕೀಯದಲ್ಲಿ ಪಾಂಚಜನ್ಯ ತೀವ್ರ ಅಸಾಮಾಧಾನ ಹೊರಹಾಕಿದೆ.
ಬಿಬಿಸಿ ಡಾಕ್ಯುಮೆಂಟರಿ ವಿಚಾರವಾಗಿ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೀಡಿರುವ ನೊಟೀಸ್ ನ್ನು ಉಲ್ಲೇಖಿಸಿರುವ ಪಾಂಚಜನ್ಯದ ಸಂಪಾದಕೀಯ ಲೇಖನ, ಸುಪ್ರೀಂ ಕೋರ್ಟ್ ನ್ನು ದೇಶದ ಹಿತಾಸಕ್ತಿಯ ರಕ್ಷಣೆಗಾಗಿ ಸೃಷ್ಟಿಸಲಾಗಿದೆ. ಆದರೆ ಅದನ್ನು ಭಾರತ ವಿರೋಧಿಗಳು ತಮ್ಮ ದಾರಿ ಸುಗಮಗೊಳಿಸಿಕೊಳ್ಳುವುದಕ್ಕೆ ಸಾಧನವಾಗಿ ಬಳಕೆ ಮಾಡಿಕೊಳ್ಳುತ್ತಿವೆ. ಸುಪ್ರೀಂ ಕೋರ್ಟ್ ನಡೆಯುತ್ತಿರುವುದು ತೆರಿಗೆದಾರರ ಹಣದಲ್ಲಿ ಹಾಗೂ ದೇಶಕ್ಕಾಗಿ ಭಾರತೀಯ ಕಾನೂನಿನ ಪ್ರಕಾರ ನಡೆಯುತ್ತಿದೆ ಎಂದು ಲೇಖನದಲ್ಲಿ ಹೇಳಲಾಗಿದೆ.
ಬಿಬಿಸಿ ಡಾಕ್ಯುಮೆಂಟರಿಯನ್ನು ಭಾರತದ ಮಾನಹಾನಿ ಮಾಡುವ ಡಾಕ್ಯುಮೆಂಟರಿ ಎಂದು ಹೇಳಿರುವ ಸಂಪಾದಕೀಯ ಅದರಲ್ಲಿನ ಅಂಶಗಳು ಸುಳ್ಳು ಹಾಗೂ ಕಾಲ್ಪನಿಕ ಕಥೆ ಎಂದಿದೆ. ನಮ್ಮ ಪ್ರಜಾಪ್ರಭುತ್ವದ ನಿಬಂಧನೆಗಳನ್ನು, ಉದಾರತೆ, ನಮ್ಮ ನಾಗರಿಕತೆಯ ಮಾನದಂಡಗಳನ್ನು ದೇಶವಿರೋಧಿ ಶಕ್ತಿಗಳು ನಮ್ಮ ವಿರುದ್ಧವೇ ದುರುಪಯೋಗಪಡಿಸಿಕೊಳ್ಳುತ್ತಿವೆ ಎಂದು ಸಂಪಾದಕೀಯ ಹೇಳಿದೆ.
Advertisement