ಚುನಾವಣಾ ಆಯೋಗದ ನಿರ್ಧಾರ ರಾಜಕೀಯ ಹಿಂಸಾಚಾರ'ದ ಕ್ರಮ: ಸಂಜಯ್ ರಾವತ್

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣವೇ ನಿಜವಾದ ಶಿವಸೇನೆ ಎಂದು ಘೋಷಿಸಿದ ಕೇಂದ್ರ ಚುನಾವಣಾ ಆಯೋಗದ(ಸಿಇಸಿ) ಕ್ರಮವನ್ನು ಶಿವಸೇನಾ(ಯುಬಿಟಿ) ನಾಯಕ ಸಂಜಯ್ ರಾವತ್....
ಸಂಜಯ್ ರಾವತ್
ಸಂಜಯ್ ರಾವತ್

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣವೇ ನಿಜವಾದ ಶಿವಸೇನೆ ಎಂದು ಘೋಷಿಸಿದ ಕೇಂದ್ರ ಚುನಾವಣಾ ಆಯೋಗದ(ಸಿಇಸಿ) ಕ್ರಮವನ್ನು ಶಿವಸೇನಾ(ಯುಬಿಟಿ) ನಾಯಕ ಸಂಜಯ್ ರಾವತ್ ಶನಿವಾರ ಕಟುವಾಗಿ ಟೀಕಿಸಿದ್ದು, ಈ ನಿರ್ಧಾರ ರಾಜಕೀಯ ಹಿಂಸಾಚಾರದ ಉದ್ದೇಶ ಹೊಂದಿದೆ ಎಂದು ಹೇಳಿದ್ದಾರೆ.

ಎಲ್ಲಾ ರಾಜಕೀಯ ಪಕ್ಷಗಳು ರಾಜಕೀಯ ಪಕ್ಷದ ಅರ್ಥ ಏನು ಅಂತ ಚುನಾವಣಾ ಕಾವಲುಗಾರ ಚುನಾವಣಾ ಆಯೋಗಕ್ಕೆ ಕೇಳಬೇಕಾಗಿದೆ ಎಂದು ರಾವತ್ ಹೇಳಿದ್ದಾರೆ.

ಚುನಾವಣಾ ಆಯೋಗ ಶುಕ್ರವಾರ ಶಿವಸೇನೆಯ ಮೂಲ ಚಿಹ್ನೆಯಾದ 'ಬಿಲ್ಲು ಬಾಣ'ವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣಕ್ಕೆ ನೀಡುವ ಮೂಲಕ ಉದ್ಧವ್ ಠಾಕ್ರೆ ಬಣಕ್ಕೆ ಶಾಕ್ ನೀಡಿದೆ.

1966ರಲ್ಲಿ ಬಾಳ್ ಠಾಕ್ರೆ ಅವರು ಈ ಮಣ್ಣಿನ ಪುತ್ರರಿಗೆ ನ್ಯಾಯ ಎಂಬ ತತ್ವದಡಿ ಸ್ಥಾಪಿಸಿದ ಪಕ್ಷದ ಮೇಲೆ ಠಾಕ್ರೆ ಕುಟುಂಬದ ಹಿಡಿತ ತಪ್ಪಿದ್ದು ಇದೇ ಮೊದಲು.

ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಕಂಕಾವ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್, ಇಸಿ ಆದೇಶ ಶಿವಸೇನೆಯನ್ನು ಮುಗಿಸುವ, ರಾಜಕೀಯ ಹಿಂಸಾಚಾರದ ಉದ್ದೇಶ ಹೊಂದಿದೆ ಮತ್ತು ಇದು ಭಯ ಹಾಗೂ ಸೇಡಿನ ಕೃತ್ಯ ಎಂದು ಆರೋಪಿಸಿದ್ದಾರೆ.

50 ವರ್ಷಕ್ಕೂ ಹೆಚ್ಚು ಹಳೆಯ ಪಕ್ಷ ಇದಾಗಿದ್ದು, ಅವರಲ್ಲಿ ಕೆಲವು ಶಾಸಕರು ಮತ್ತು ಸಂಸದರು ಒತ್ತಡದಲ್ಲಿ ಪಕ್ಷಾಂತರ ಮಾಡಿದ್ದಾರೆ ಎಂದು ರಾವತ್ ಶಿಂಧೆ ಬಣವನ್ನು ಉಲ್ಲೇಖಿಸಿ ಹೇಳಿದರು.

ಸೇನಾ(ಉದ್ಧವ್ ಬಾಳಾಸಾಹೇಬ್ ಠಾಕ್ರೆ) ನಾಯಕ ರಾವತ್, ಚುನಾವಣಾ ಆಯೋಗದ ನಿರ್ಧಾರ ಕಾನೂನು, ಸಂವಿಧಾನ ಮತ್ತು ಜನರ ಇಚ್ಛೆಗೆ ವಿರುದ್ಧವಾಗಿದೆ ಎಂದು ಟೀಕಿಸಿದ್ದಾರೆ.

ಶಿವಸೇನೆ ಯಾರಿಗೆ ಸೇರಿದೆ ಎಂಬುದನ್ನು ತಿಳಿಯಲು ಹೊಸದಾಗಿ ವಿಧಾನಸಭೆ ಚುನಾವಣೆ ಎದುರಿಸಿ ಜನರಿಂದ ಜನಾದೇಶವನ್ನು ಪಡೆಯುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ರಾವತ್ ಸವಾಲು ಹಾಕಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com