ಗುಜರಾತ್ ಕೃಷಿ ನಾಯಕ? ಬಿಹಾರಕ್ಕಿಂತಲೂ ಪ್ರತಿ ಕೃಷಿಕನ ಮೇಲೆ ಸಾಲದ ಹೊರೆ!
ಅಹಮದಾಬಾದ್: ಕೃಷಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ, ಕೃಷಿ ಕ್ಷೇತ್ರದ ನಾಯಕನೆಂಬ ಗುಜರಾತ್ ಸರ್ಕಾರದ ಪ್ರತಿಪಾದನೆಯ ಬಗ್ಗೆ ಈಗ ಪ್ರಶ್ನೆಗಳೆದ್ದಿವೆ. ಕೇಂದ್ರ ಕೃಷಿ ಸಚಿವಾಲಯ ಬಿಡುಗಡೆ ಮಾಡಿರುವ ವರದಿ ಇಂಥಹದ್ದೊಂದು ಪ್ರಶ್ನೆ ಮೂಡಿಸಿದೆ.
ಈ ವರದಿಯ ಪ್ರಕಾರ ಗುಜರಾತ್ ನಲ್ಲಿ ಪ್ರತಿ ಕೃಷಿಕನ ಮೇಲೆ 56,568 ರೂಪಾಯಿಗಳಷ್ಟು ಸಾಲವಿದ್ದು, ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ, ಚತ್ತೀಸ್ ಗಢ, ಉತ್ತರಾಖಂಡ್ ಗಳಲ್ಲಿರುವ ಕೃಷಿಕರು ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದು ವರದಿ ಹೇಳುತ್ತಿದೆ. 2021-22 ನೇ ಸಾಲಿನಲ್ಲಿ ಗುಜರಾತ್ ರೈತರು 96,963 ಕೋಟಿ ರೂಪಾಯಿ ಸಾಲ ಪಡೆದಿದ್ದರು.
ವರದಿಯ ಪ್ರಕಾರ ಗುಜರಾತ್ ನ ಒಂದು ರೈತ ಕುಟುಂಬದ ಮಾಸಿಕ ಆದಾಯ 12,631 ರೂಪಾಯಿಗಳಿದ್ದರೆ, ಸರಾಸರಿ ಆದಾಯ ಬೆಳೆ ಉತ್ಪಾದನೆಯಿಂದ 4318 ರೂಪಾಯಿಗಳಷ್ಟಿದೆ. ಪಶುಸಂಗೋಪನೆಯಿಂದ 3477 ರೂಪಾಯಿ ಆದಾಯವಿದ್ದು, ವೇತನದಿಂದ 4415 ಗಳಿಕೆ ಇದೆ, ಬಾಡಿಗೆಯಿಂದ 53 ರೂಪಾಯಿಗಳ ಆದಾಯವಿದ್ದು, ಮಾಸಿಕ ಹೆಚ್ಚುವರಿಯಾಗಿ 369 ರೂಗಳ ಗಳಿಕೆಯಿದೆ ಎಂದು ವರದಿ ಹೇಳಿದೆ.
ವರದಿಯ ಪ್ರಕಾರ, ಗುಜರಾತ್ ನಲ್ಲಿ ಒಟ್ಟು 66,02,700 ಕುಟುಂಬಗಳಿದ್ದರೆ, 40,36,900 ಕುಟುಂಬಗಳು ಕೃಷಿಯಲ್ಲಿ ತೊಡಗಿವೆ, ಅಂದರೆ ರಾಜ್ಯದ ಶೇ.61.10 ರಷ್ಟು ಮನೆಗಳಿಗೆ ಕೃಷಿ ಜೀವನಾಧಾರವಾಗಿದೆ. ರಾಜ್ಯದಲ್ಲಿ ಕೃಷಿ ಕುಟುಂಬ ಸರಾಸರಿ ೦.616 ಹೆಕ್ಟೇರ್ ಭೂಮಿಯನ್ನು ಹೊಂದಿದ್ದು, ಪ್ರತಿ ಕುಟುಂಬಕ್ಕೆ ಇರುವ ಭೂಮಿಯ ಪ್ರಕಾರ ಗುಜರಾತ್ ದೇಶದಲ್ಲಿ 10 ನೇ ಸ್ಥಾನದಲ್ಲಿದೆ.
ಕೃಷಿ ವಿಜ್ಞಾನಿ ಮತ್ತು ಗುಜರಾತ್‌ನ ಮಾಜಿ ಉಪಕುಲಪತಿ ವಿದ್ಯಾಪೀಠ ರಾಜೇಂದ್ರ ಖಿಮಾನಿ ಪ್ರಕಾರ, ಕೃಷಿ ಉತ್ಪನ್ನಗಳ ಬೆಲೆ ಸಾಗುವಳಿಯ ಗೆ ಖರ್ಚಾಗುವುದಕ್ಕಿಂತಲೂ ಕಡಿಮೆ ಸಿಗುತ್ತದೆ. ಪರಿಣಾಮವಾಗಿ ರೈತ ಸಾಲದ ಸುಳಿಯಲ್ಲಿ ಸಿಲುಕುತ್ತಾನೆ. ಬೆಳೆ ಬೆಳೆಯುವುದಕ್ಕೆ ಆಗುವ ಖರ್ಚು 3 ವರ್ಷಗಳಲ್ಲಿ ಶೇ.60 ರಷ್ಟು ಏರಿಕೆಯಾಗಿದೆ. ಆದರೆ ಉತ್ಪನ್ನಕ್ಕೆ ಸಿಗುವ ಬೆಲೆ ಶೇ.30 ರಷ್ಟು ಕಡಿಮೆಯಾಗಿದೆ.
ಸಣ್ಣ ರೈತರು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವ ಬೆಳೆಗಳತ್ತ ಮುಖ ಮಾಡಿದ್ದಾರೆ. ಈ ರೀತಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವ ಬೆಳೆಗಳಿಗೆ ಮಾರುಕಟ್ಟೆ ಬೇಡಿಕೆಗಳ ಪ್ರಕಾರ ಬೆಳೆಯುವುದಕ್ಕಾಗಿ ಸಾಲ ಮಾಡುತ್ತಾರೆ, ಕೃಷಿಯನ್ನು ಹೆಚ್ಚು ವಾಣಿಜ್ಯೀಕರಣಗೊಳಿಸಿದರೆ ಸಾಲ ಹೆಚ್ಚುತ್ತದೆ ಎನ್ನುತ್ತಾರೆ ರಾಜೇಂದ್ರ ಖಿಮಾನಿ.
ದಕ್ಷಿಣ ಗುಜರಾತ್ ನ ರೈತ ರಮೇಶ್ ಪಟೇಲ್, ರಸಗೊಬ್ಬರ ಬೆಲೆ ಏರಿಕೆಯಾಗಿದೆ. ಇದೇ ವೇಳೆ ಬೀಜಗಳ ಬೆಲೆಯೂ ದುಪ್ಪಟ್ಟಾಗಿದೆ. ಟ್ರ್ಯಾಕ್ಟರ್ ಮೊದಲಾದ ಉಪಕರಣಗಳಿಗೆ ಬಳಕೆ ಮಾಡಲಾಗುವ ಡೀಸೆಲ್ ನ ಬೆಲೆಯೂ ಏರಿಕೆಯಾಗಿದೆ. ಬೆಳೆ ಬೆಳೆಯುವುದಕ್ಕೆ ಖರ್ಚು ಹೆಚ್ಚಾಗಿದ್ದರೆ, ಬೆಳೆ ಮಾರಾಟ ಮಾಡುವುದರಿಂದ ಬರುವ ಲಾಭ ಕುಸಿತವಾಗಿದೆ, ಹಲವು ರೈತರು ಹಿಂದಿನ ಬಾಕಿ ಸಾಲ ಇನ್ನೂ ತೀರಿಸುತ್ತಿದ್ದಾರೆ ಎನ್ನುತ್ತಾರೆ.
ಸಂಸತ್ ಗೆ ಸಲ್ಲಿಕೆಯಾಗಿರುವ ಡೇಟಾ ಪ್ರಕಾರ, ಗುಜರಾತ್ ನಲ್ಲಿ ಕೃಷಿ ಸಾಲಗಳು 2019-2020 ರಲ್ಲಿ 73,228.67 ಕೋಟಿ ರೂಪಾಯಿಗಳಿಂದ 2021-2022 ರಲ್ಲಿ 96,963.07 ಕ್ಕೆ ಏರಿಕೆಯಾಗಿದೆ. ಇನ್ನು ಸಾಲ ಯೋಜನೆಗಳ ಅಡಿಯಲ್ಲಿ ಪಡೆದಿರುವ ಸಾಲಗಳೂ ಸಹ ಕಳೆದ 2 ವರ್ಷಗಳಲ್ಲಿ ಶೇ.45 ರಷ್ಟು ಏರಿಕೆಯಾಗಿದೆ. ಪ್ರತಿ ಖಾತೆಯ ಕೃಷಿ ಸಾಲ ತ್ರೈಮಾಸಿಕದಲ್ಲಿ 1.71 ಲಕ್ಷದಿಂದ 2.48 ಲಕ್ಷಕ್ಕೆ ಏರಿಕೆಯಾಗಿದೆ.
ಈ ಸಾಲದಿಂದಾಗಿ ರೈತರ ಆದಾಯ ದ್ವಿಗುಣಗೊಳ್ಳುವುದಿಲ್ಲ. ಆದರೆ ಸರ್ಕಾರ 2022 ರ ವೇಳೆಗೆ ಸರ್ಕಾರ ರೈತರ ಆದಾಯ ದ್ವಿಗುಣಗೊಂಡಿದೆ ಎಂದು ಹೇಳಿದೆ ಆದರೆ ಅವರದ್ದೇ ಡೇಟಾ ಪ್ರಕಾರ ರೈತರ ಸಾಲ ದ್ವಿಗುಣಗೊಂಡಿರುವುದನ್ನು ಬಹಿರಂಗಪಡಿಸಿದೆ. ಗುಜರಾತ್ ನಲ್ಲಿ ಕೃಷಿ ಕ್ಷೇತ್ರದಲ್ಲಿರುವವರ ಆತ್ಮಹತ್ಯೆ ಪ್ರಕರಣಗಳೂ ಹೆಚ್ಚಾಗಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ