
ಎನ್ ಡಿಆರ್ ಎಫ್
ನವದೆಹಲಿ: ಸರಣಿ ಭೂಕಂಪದಿಂದ ತತ್ತರಿಸಿದ್ದ ಟರ್ಕಿಗೆ ನೆರವು ನೀಡಲು ತೆರಳಿದ್ದ ಭಾರತದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(NDRF)ಯ ಕೊನೆ ತಂಡ ಭಾನುವಾರ ಮನೆಗೆ ಮರಳಿದೆ.
ಟರ್ಕಿ ವಿಪತ್ತು ಮತ್ತು ತುರ್ತು ನಿರ್ವಹಣಾ ಪ್ರೆಸಿಡೆನ್ಸಿ(AFAD) ರಕ್ಷಣಾ ಕಾರ್ಯಾಚರಣೆ ಅಂತ್ಯಗೊಳಿಸುವುದಾಗಿ ಘೋಷಿಸಿದ ನಂತರ ಆಪರೇಷನ್ ದೋಸ್ತ್ ಅಡಿಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ನೆರವು ನೀಡಲು ತೆರಳಿದ್ದ ಎನ್ ಡಿಆರ್ ಆಫ್ ತಂಡ ಇಂದು ಭಾರತಕ್ಕೆ ಮರಳಿದೆ.
ಇದನ್ನು ಓದಿ: ಟರ್ಕಿಯಲ್ಲಿ ಭೀಕರ ಭೂಕಂಪ: ಮೃತಪಟ್ಟವರ ಸಂಖ್ಯೆ 40 ಸಾವಿರಕ್ಕೆ ಏರಿಕೆ, ಮುಂದುವರಿದ ರಕ್ಷಣಾ ಕಾರ್ಯ
ಆಪರೇಷನ್ ದೋಸ್ತ್ ಅಡಿಯಲ್ಲಿ 151 ಎನ್‌ಡಿಆರ್‌ಎಫ್ ಸಿಬ್ಬಂದಿ ಮತ್ತು ಶ್ವಾನ ದಳ ಒಳಗೊಂಡ ಮೂರು ತಂಡಗಳು ಭೂಕಂಪ ಪೀಡಿತ ಟರ್ಕಿಗೆ ತೆರಳಿದ್ದವು.
ಎನ್ ಡಿಆರ್ ಎಫ್ ತಂಡಗಳು ಟರ್ಕಿಯ ನೂರ್ಡಗಿ ಮತ್ತು ಅಂತಕ್ಯದಲ್ಲಿ 35 ಜನರನ್ನು ರಕ್ಷಿಸಿದ್ದು, ಶೋಧ, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಟ್ವೀಟ್ ಮಾಡಿದ್ದಾರೆ.
ಏತನ್ಮಧ್ಯೆ, ಟರ್ಕಿ ಮತ್ತು ಸಿರಿಯಾದಲ್ಲಿ ಭೀಕರ ಭೂಕಂಪ ಸಂಭವಿಸಿದ ಸುಮಾರು ಎರಡು ವಾರಗಳ ನಂತರ ಹೆಚ್ಚಿನ ಪ್ರಾಂತ್ಯಗಳಲ್ಲಿ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆ ಅಂತ್ಯಗೊಂಡಿವೆ ಎಂದು ಟರ್ಕಿಶ್ ವಿಪತ್ತು ಮತ್ತು ತುರ್ತು ನಿರ್ವಹಣಾ ಪ್ರೆಸಿಡೆನ್ಸಿ (ಎಎಫ್‌ಎಡಿ) ಶನಿವಾರ ಹೇಳಿರುವುದಾಗಿ ಅಲ್ ಜಜೀರಾ ವರದಿ ಮಾಡಿದೆ.