ಟರ್ಕಿಯಲ್ಲಿ ಭೀಕರ ಭೂಕಂಪ: ಮೃತಪಟ್ಟವರ ಸಂಖ್ಯೆ 40 ಸಾವಿರಕ್ಕೆ ಏರಿಕೆ, ಮುಂದುವರಿದ ರಕ್ಷಣಾ ಕಾರ್ಯ
ಫೆಬ್ರುವರಿ 6 ರಂದು ಆಗ್ನೇಯ ಟರ್ಕಿಯಲ್ಲಿ ಸಂಭವಿಸಿದ ಎರಡು ಪ್ರಮುಖ ಭೂಕಂಪಗಳಿಂದ ಮೃತಪಟ್ಟವರ ಸಂಖ್ಯೆ 40,642ಕ್ಕೆ ಏರಿಕೆಯಾಗಿದೆ ಎಂದು ದೇಶದ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.
Published: 19th February 2023 08:05 AM | Last Updated: 19th February 2023 08:05 AM | A+A A-
![ಟರ್ಕಿಯ ಕಹ್ರಮನ್ಮರಸ್‌ನಲ್ಲಿ ಕುಸಿದ ಕಟ್ಟಡಗಳ ಅವಶೇಷಗಳಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿರುವ ವಿಪತ್ತು ನಿರ್ವಹಣಾ ಪಡೆ (ಚಿತ್ರ-ಎಎಫ್‌ಪಿ) Search and rescue teams search the rubble of collapsed buildings in Kahramanmaras, Turkey [Ozan Kose/AFP]](https://media.kannadaprabha.com/uploads/user/imagelibrary/2023/2/19/w900X450/Turkey_Earthquake.jpg)
ಟರ್ಕಿಯ ಕಹ್ರಮನ್ಮರಸ್‌ನಲ್ಲಿ ಕುಸಿದ ಕಟ್ಟಡಗಳ ಅವಶೇಷಗಳಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿರುವ ವಿಪತ್ತು ನಿರ್ವಹಣಾ ಪಡೆ (ಚಿತ್ರ-ಎಎಫ್‌ಪಿ)
ಅಂಕಾರಾ: ಫೆಬ್ರುವರಿ 6 ರಂದು ಆಗ್ನೇಯ ಟರ್ಕಿಯಲ್ಲಿ ಸಂಭವಿಸಿದ ಎರಡು ಪ್ರಮುಖ ಭೂಕಂಪಗಳಿಂದ ಮೃತಪಟ್ಟವರ ಸಂಖ್ಯೆ 40,642ಕ್ಕೆ ಏರಿಕೆಯಾಗಿದೆ ಎಂದು ದೇಶದ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.
ಭಾನುವಾರ ಸಂಜೆಯ ವೇಳೆಗೆ ಹುಡುಕಾಟ ಮತ್ತು ರಕ್ಷಣಾ ಪ್ರಯತ್ನಗಳು ಹೆಚ್ಚಾಗಿ ಪೂರ್ಣಗೊಳ್ಳಲಿವೆ ಎಂದು ವಿಪತ್ತು ಮತ್ತು ತುರ್ತು ನಿರ್ವಹಣಾ ಪ್ರಾಧಿಕಾರದ (ಎಎಫ್‌ಎಡಿ) ಮುಖ್ಯಸ್ಥ ಯೂನಸ್ ಸೆಜರ್ ಹೇಳಿರುವುದಾಗಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ತುರ್ತು ಕಾರ್ಯವು ದಕ್ಷಿಣ ಹಟಾಯ್ ಪ್ರಾಂತ್ಯದಲ್ಲಿ ನಡೆಯುತ್ತಿದ್ದು, ಇದು ಕಳೆದ ವಾರ ಸಂಭವಿಸಿದ ಭೂಕಂಪಗಳಿಂದಾಗಿ ಹೆಚ್ಚಿನ ಹಾನಿಗೊಳಗಾಗಿದೆ. ವಿಪತ್ತು ನಿರ್ವಹಣಾ ಏಜೆನ್ಸಿಯು ಈ ಪ್ರದೇಶದಲ್ಲಿ ಸುಮಾರು 13,000 ಸಿಬ್ಬಂದಿಯನ್ನು ರಕ್ಷಣಾ ಕಾರ್ಯಾಚರಣೆಗೆ ಬಳಸಿಕೊಂಡಿದೆ ಎಂದು ಹೇಳಿದರು.
ಇದನ್ನೂ ಓದಿ: ಟರ್ಕಿ-ಸಿರಿಯಾ ಭೂಕಂಪ: ಸಾವಿನ ಸಂಖ್ಯೆ 50 ಸಾವಿರ ಗಡಿ ದಾಟಲಿದೆ - ವಿಶ್ವಸಂಸ್ಥೆ
ಭೂಕಂಪದ ಪ್ರದೇಶದಿಂದ ಒಟ್ಟು 430,000 ಜನರನ್ನು ಈವರೆಗೆ ಸ್ಥಳಾಂತರಿಸಲಾಗಿದೆ ಎಂದು ಸೆಜರ್ ಹೇಳಿದರು.
ಸ್ಥಳೀಯ ಕಾಲಮಾನ ಮುಂಜಾನೆ 4.17 ಗಂಟೆಗೆ (0117 GMT) ಟರ್ಕಿಯ ದಕ್ಷಿಣ ಪ್ರಾಂತ್ಯದ ಕಹ್ರಮನ್‌ಮರಸ್‌ನಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದೆ. ಕೆಲವು ನಿಮಿಷಗಳ ನಂತರ ದೇಶದ ದಕ್ಷಿಣ ಪ್ರಾಂತ್ಯದ ಗಾಜಿಯಾಂಟೆಪ್‌ನಲ್ಲಿ 6.4 ತೀವ್ರತೆಯ ಭೂಕಂಪ ಮತ್ತು ಕಹ್ರಮನ್ಮರಸ್ ಪ್ರಾಂತ್ಯದಲ್ಲಿ ಸ್ಥಳೀಯ ಸಮಯ 1.24 ಗಂಟೆಗೆ (1024 GMT) 7.6 ತೀವ್ರತೆಯ ಭೂಕಂಪ ಸಂಭವಿಸಿದೆ.