ಗುಲ್ಮಾರ್ಗ್: ಜಮ್ಮು ಮತ್ತು ಕಾಶ್ಮೀರದ ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕೇಂದ್ರವು ಕಿತ್ತುಕೊಳ್ಳುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಆರೋಪಿಸಿದ್ದಾರೆ ಮತ್ತು ಒತ್ತುವರಿ ತೆರವು ಕಾರ್ಯಾಚರಣೆ ಅಭಿಯಾನ ನೈಜ' ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.
ಶ್ರೀನಗರದಿಂದ 52 ಕಿಮೀ ದೂರದಲ್ಲಿರುವ ಗುಲ್ಮಾರ್ಗ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪಕ್ಷದ ನಾಯಕರ ಸಭೆಯಲ್ಲಿ ಗಾಂಧಿ ಮಾತನಾಡುತ್ತಿದ್ದರು ಎಂದು ಕಾಂಗ್ರೆಸ್ ವಕ್ತಾರರು ತಿಳಿಸಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಅನುಪಸ್ಥಿತಿಯಲ್ಲಿ ಜನರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ರಾಹುಲ್ ಗಾಂಧಿ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಜನರ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಎಂದು ವಕ್ತಾರರು ಗುಲ್ಮಾರ್ಗ್‌ನಲ್ಲಿ ಹೇಳಿಕೆ ನೀಡಿದ್ದಾರೆ.
ಕಾಶ್ಮೀರಕ್ಕೆ ಖಾಸಗಿ ಭೇಟಿ ನೀಡಿರುವ ರಾಹುಲ್ ಗಾಂಧಿ ಕೇಂದ್ರ ಎಲ್ಲಾ ವಿಷಯಗಳಲ್ಲಿ ಜನರನ್ನು ವಿಫಲಗೊಳಿಸಿದೆ ಎಂದು ಆರೋಪಿಸಿದ್ದಾರೆ. ಜನರ ಇಚ್ಛೆಗೆ ವಿರುದ್ಧವಾಗಿ ಜಮ್ಮು-ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿದೆ ಮತ್ತು ಬಿಜೆಪಿಯು ತನ್ನ ತಪ್ಪು ನೀತಿಗಳನ್ನು ಮತ್ತು ಸಂಪೂರ್ಣ ವೈಫಲ್ಯವನ್ನು ಮರೆಮಾಚುವ ಗುರಿಯೊಂದಿಗೆ ಜನರ ಪ್ರಜಾಪ್ರಭುತ್ವ ಹಕ್ಕುಗಳನ್ನು ನಿರಾಕರಿಸುತ್ತಿದೆ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಜನರ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ಹೋರಾಟವನ್ನು ಮುಂದುವರೆಸುತ್ತದೆ ಮತ್ತು ನ್ಯಾಯವನ್ನು ಖಾತರಿಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.
Advertisement