ಶಿವಸೇನೆ ಚಿಹ್ನೆ ವಿವಾದ: ಇಸಿ ನಿರ್ಧಾರದ ವಿರುದ್ಧ ಉದ್ಧವ್ ಠಾಕ್ರೆ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಅಸ್ತು
ಏಕನಾಥ್ ಶಿಂಧೆ ನೇತೃತ್ವದ ಬಣಕ್ಕೆ ಶಿವಸೇನೆಯ ಮೂಲ ಚಿಹ್ನೆಯಾದ 'ಬಿಲ್ಲು ಬಾಣ'ವನ್ನು ನೀಡಿದ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಉದ್ಧವ್ ಠಾಕ್ರೆ ಬಣ ಸಲ್ಲಿಸಿದ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.
Published: 21st February 2023 12:18 PM | Last Updated: 21st February 2023 02:59 PM | A+A A-

ಉದ್ಧವ್ ಠಾಕ್ರೆ
ನವದೆಹಲಿ: ಏಕನಾಥ್ ಶಿಂಧೆ ನೇತೃತ್ವದ ಬಣಕ್ಕೆ ಶಿವಸೇನೆಯ ಮೂಲ ಚಿಹ್ನೆಯಾದ 'ಬಿಲ್ಲು ಬಾಣ'ವನ್ನು ನೀಡಿದ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಉದ್ಧವ್ ಠಾಕ್ರೆ ಬಣ ಸಲ್ಲಿಸಿದ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.
ಠಾಕ್ರೆ ಬಣದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ಮಂಗಳವಾರ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಪಿ ಎಸ್ ನರಸಿಂಹ ಅವರ ಪೀಠದ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿದರು.
ಚುನಾವಣಾ ಆಯೋಗದ ಆದೇಶವನ್ನು ತಡೆಹಿಡಿಯದಿದ್ದರೆ, ಅವರು ಚಿಹ್ನೆ ಮತ್ತು ಬ್ಯಾಂಕ್ ಖಾತೆಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಾರೆ. ದಯವಿಟ್ಟು ಅದನ್ನು ಸಂವಿಧಾನ ಪೀಠದ ಮುಂದೆ ನಾಳೆ ಪಟ್ಟಿ ಮಾಡಿ ಎಂದು ಸಿಬಲ್ ಮನವಿ ಮಾಡಿದರು. ಮನವಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದೆ.
ಇದನ್ನು ಓದಿ: 'ಮೊಗಾಂಬೋ ಖುಷ್ ಹುವಾ': ಶಿವಸೇನೆಯ ಬಿಲ್ಲು ಬಾಣ ಕಳೆದು ಕೊಂಡ ನಂತರ ಅಮಿತ್ ಶಾಗೆ ಉದ್ಧವ್ ಠಾಕ್ರೆ ಟಾಂಗ್!
ಕಳೆದ ಶುಕ್ರವಾರ ಚುನಾವಣಾ ಆಯೋಗವು ಏಕನಾಥ್ ಶಿಂಧೆ ನೇತೃತ್ವದ ಬಣ ನಿಜವಾದ ಶಿವಸೇನೆ ಎಂದು ಘೋಷಿಸಿ, ಅದಕ್ಕೆ "ಬಿಲ್ಲು ಮತ್ತು ಬಾಣ" ಚಿಹ್ನೆಯನ್ನು ನೀಡಿ ಆದೇಶಿಸಿತ್ತು.
ಚುನಾವಣಾ ಆಯೋಗದ ಈ ಆದೇಶ 'ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ' ಎಂದಿದ್ದ ಉದ್ಧವ್ ಠಾಕ್ರೆ ಅವರು, ಇಸಿ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದರು.