ಲೋಕಸಭೆ ಚುನಾವಣೆ: ಬಿಜೆಪಿ ಸೋಲಿಸಲು ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿಗಾಗಿ ಕಾಂಗ್ರೆಸ್ ಎದುರು ನೋಡುತ್ತಿದೆ- ಮಲ್ಲಿಕಾರ್ಜುನ ಖರ್ಗೆ
2024ರ ಲೋಕಸಭೆ ಚುನಾವಣೆಯಲ್ಲಿ 'ಜನ ವಿರೋಧಿ' ಬಿಜೆಪಿ ಸರ್ಕಾರವನ್ನು ಸೋಲಿಸಲು ಸಮಾನ ಮನಸ್ಕ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಕಾರ್ಯಸಾಧ್ಯವಾದ ಪರ್ಯಾಯವನ್ನು ರೂಪಿಸಲು ಕಾಂಗ್ರೆಸ್ ಎದುರು ನೋಡುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಹೇಳಿದ್ದಾರೆ.
Published: 25th February 2023 01:09 PM | Last Updated: 27th February 2023 05:19 PM | A+A A-

ಮಲ್ಲಿಕಾರ್ಜುನ್ ಖರ್ಗೆ
ರಾಯಪುರ: 2024ರ ಲೋಕಸಭೆ ಚುನಾವಣೆಯಲ್ಲಿ 'ಜನ ವಿರೋಧಿ' ಬಿಜೆಪಿ ಸರ್ಕಾರವನ್ನು ಸೋಲಿಸಲು ಸಮಾನ ಮನಸ್ಕ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಕಾರ್ಯಸಾಧ್ಯವಾದ ಪರ್ಯಾಯವನ್ನು ರೂಪಿಸಲು ಕಾಂಗ್ರೆಸ್ ಎದುರು ನೋಡುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಹೇಳಿದ್ದಾರೆ.
ಕಾಂಗ್ರೆಸ್‌ನ 85ನೇ ಸರ್ವಸದಸ್ಯರ ಮಹಾಧಿವೇಶನದಲ್ಲಿ ಮಾತನಾಡಿದ ಖರ್ಗೆ, ದೇಶವು ಸಾಂವಿಧಾನಿಕ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಮೇಲಿನ ನಿರಂತರ ದಾಳಿ, ಚೀನಾ ಗಡಿಯಲ್ಲಿ ರಾಷ್ಟ್ರೀಯ ಭದ್ರತೆಯ ಸಮಸ್ಯೆಗಳು, ಸಾರ್ವಕಾಲಿಕ ಅಧಿಕ ಹಣದುಬ್ಬರ ಮತ್ತು ದಾಖಲೆಯ ನಿರುದ್ಯೋಗದಂತಹ ಸವಾಲುಗಳನ್ನು ಎದುರಿಸುತ್ತಿದೆ ಎಂದು ಹೇಳಿದರು.
'ಸದ್ಯ ಚಾಲ್ತಿಯಲ್ಲಿರುವ ಕಠಿಣ ಪರಿಸ್ಥಿತಿಯಲ್ಲಿ, ಸಮರ್ಥ ಮತ್ತು ನಿರ್ಣಾಯಕ ನಾಯಕತ್ವವನ್ನು ನೀಡಬಲ್ಲ ಏಕೈಕ ಪಕ್ಷ ಕಾಂಗ್ರೆಸ್ ಎಂದು ಪ್ರತಿಪಾದಿಸಿದ ಅವರು, 2004 ರಿಂದ 2014 ರವರೆಗೆ ಸಮಾನ ಮನಸ್ಕ ಪಕ್ಷಗಳೊಂದಿಗೆ ಕಾಂಗ್ರೆಸ್ ನೇತೃತ್ವದ ಮೈತ್ರಿ ದೇಶದ ಜನತೆಗೆ ಸೇವೆ ಸಲ್ಲಿಸಿದೆ ಎಂದು ಖರ್ಗೆ ಹೇಳಿದರು.
ಜನವಿರೋಧಿ ಮತ್ತು ಪ್ರಜಾಸತ್ತಾತ್ಮಕವಲ್ಲದ ಬಿಜೆಪಿ ಸರ್ಕಾರವನ್ನು ಸೋಲಿಸಲು ಸಮಾನ ಮನಸ್ಕ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ನಾವು ಮತ್ತೊಮ್ಮೆ ಸಮರ್ಥ ಪರ್ಯಾಯವನ್ನು ರೂಪಿಸಲು ಎದುರು ನೋಡುತ್ತಿದ್ದೇವೆ ಎಂದರು.
ಇದನ್ನೂ ಓದಿ: ನಾವಿಲ್ಲದೇ ಪ್ರತಿಪಕ್ಷಗಳ ಒಗ್ಗಟ್ಟು ನಿಷ್ಪರಿಣಾಮಕಾರಿ: ರಾಯ್ ಪುರ ಅಧಿವೇಶನದಲ್ಲಿ ಕಾಂಗ್ರೆಸ್ ಪ್ರತಿಪಾದನೆ
ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ದೆಹಲಿಯಲ್ಲಿ ಕುಳಿತಿರುವವರ ಡಿಎನ್‌ಎ 'ಬಡವರ ವಿರೋಧಿ'ಯಾಗಿದೆ. ಏಕೆಂದರೆ, ಅವರು ಪ್ರಜಾಪ್ರಭುತ್ವವನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ, ದೇಶದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಯ ವಿರುದ್ಧ ಜನಾಂದೋಲನಕ್ಕೆ ಕರೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ತಮ್ಮನ್ನು 'ಪ್ರಧಾನ ಸೇವಕ' ಎಂದು ಕರೆದುಕೊಳ್ಳುವವರು ತಮ್ಮ 'ಸ್ನೇಹಿತರ' ಹಿತಾಸಕ್ತಿಗಳನ್ನು ಪೂರೈಸುತ್ತಿದ್ದಾರೆ ಎಂದು ಆರೋಪಿಸಿದರು.
ಪಕ್ಷದ ಸರ್ವಸದಸ್ಯರ ಮಹಾಧಿವೇಶನವನ್ನುದ್ದೇಶಿಸಿ ಮಾತನಾಡಿದ ಖರ್ಗೆ, 'ಭಾರತದಲ್ಲಿ ಪ್ರಜಾಪ್ರಭುತ್ವವನ್ನು ನಾಶಮಾಡುವ ಷಡ್ಯಂತ್ರವಿದೆ. ಆದರೆ, ಕಾಂಗ್ರೆಸ್ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡುತ್ತಿದೆ. ನೋಟು ಅಮಾನ್ಯೀಕರಣ, ಜಿಎಸ್‌ಟಿ ಜಾರಿ ಮತ್ತು ಸಾಂವಿಧಾನಿಕ ಮೌಲ್ಯಗಳ ಮೇಲಿನ ನಿರಂತರ ದಾಳಿಯಂತಹ ಕ್ರಮಗಳಿಗಾಗಿ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ದೂಷಿಸಿದರು.