ಕುಸಿಯುತ್ತಿದೆ ಜೋಶಿಮಠ: ಎಚ್ಚರಿಕೆ ನಿರ್ಲಕ್ಷಿಸಿದ ಉತ್ತರಾಖಂಡ ಸರ್ಕಾರದ ವಿರುದ್ಧ ತೀವ್ರ ಜನಾಕ್ರೋಶ

ಉತ್ತರಾಖಂಡದ ಹಿಂದೂಗಳ ಪ್ರಸಿದ್ಧ ಯಾತ್ರಾ ಸ್ಥಳ ಜೋಶಿಮಠ ಕುಸಿಯುತ್ತಿದೆ. ಹಿಮಾಲಯ ಪಟ್ಟಣದಲ್ಲಿ ಭಾರೀ ಕಟ್ಟಡ ನಿರ್ಮಾಣ ಚಟುವಟಿಕೆಗಳು ನಡೆಯುತ್ತಿದ್ದು, ಅಪಾಯಕಾರಿ ಪರಿಸ್ಥಿತಿ ಬಗ್ಗೆ ಎಚ್ಚರಿಕೆ ನೀಡಿದರೂ ನಿರ್ಲಕ್ಷ್ಯ ವಹಿಸಿರುವ...
ಜನರಿಂದ ಪ್ರತಿಭಟನೆ
ಜನರಿಂದ ಪ್ರತಿಭಟನೆ

ಜೋಶಿಮಠ: ಉತ್ತರಾಖಂಡದ ಹಿಂದೂಗಳ ಪ್ರಸಿದ್ಧ ಯಾತ್ರಾ ಸ್ಥಳ ಜೋಶಿಮಠ ಕುಸಿಯುತ್ತಿದೆ. ಹಿಮಾಲಯ ಪಟ್ಟಣದಲ್ಲಿ ಭಾರೀ ಕಟ್ಟಡ ನಿರ್ಮಾಣ ಚಟುವಟಿಕೆಗಳು ನಡೆಯುತ್ತಿದ್ದು, ಅಪಾಯಕಾರಿ ಪರಿಸ್ಥಿತಿ ಬಗ್ಗೆ ಎಚ್ಚರಿಕೆ ನೀಡಿದರೂ ನಿರ್ಲಕ್ಷ್ಯ ವಹಿಸಿರುವ ಸರ್ಕಾರದ ವಿರುದ್ಧ ಜನ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮುಖ್ಯವಾಗಿ ಈ ಪರಿಸ್ಥಿತಿಗೆ ಎನ್‌ಟಿಪಿಸಿಯ ತಪೋವನ-ವಿಷ್ಣುಗಡ ಹೈಡಲ್ ಯೋಜನೆಯೇ ಕಾರಣ ಎಂದು ಜನ ಆರೋಪಿಸುತ್ತಿದ್ದಾರೆ.

"ಕಳೆದ 14 ತಿಂಗಳಿಂದ ನಾವು ಅಧಿಕಾರಿಗಳ ಗಮನ ಸೆಳೆಯುತ್ತಿದ್ದೇವೆ. ಆದರೆ ಅವರು ಗಮನ ಹರಿಸಲಿಲ್ಲ. ಈಗ ಪರಿಸ್ಥಿತಿ ಕೈ ಮೀರಿದಾಗ, ಅವರು ಭೂಮಿ ಕುಸಿಯುವ ಘಟನೆಗಳ ತ್ವರಿತ ಅಧ್ಯಯನಕ್ಕಾಗಿ ತಜ್ಞರ ತಂಡಗಳನ್ನು ಕಳುಹಿಸುತ್ತಿದ್ದಾರೆ" ಎಂದು ಜೋಶಿಮಠ ಬಚಾವೋ ಸಂಘರ್ಷ ಸಮಿತಿ ಸಂಚಾಲಕ ಅತುಲ್ ಸತಿ ಆರೋಪಿಸಿದ್ದಾರೆ.

ನವೆಂಬರ್ 2021 ರಲ್ಲಿಯೇ 14 ಮನೆಗಳು ಕುಸಿದಿದ್ದವು. ಆ ಕುಟುಂಬಗಳ ಪುನರ್ವಸತಿಗೆ ಒತ್ತಾಯಿಸಿ 2021 ರ ನವೆಂಬರ್ 16 ರಂದು ತಹಸಿಲ್ ಕಚೇರಿಯಲ್ಲಿ ಜನ ಪ್ರತಿಭಟನೆ ನಡೆಸಿದರು ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಆದರೆ ಅವರು ತಹಸಿಲ್ ಕಚೇರಿಯ ಆವರಣವೂ ಬಿರುಕು ಬಿಟ್ಟಿದೆ ಎಂದು ಒಪ್ಪಿಕೊಂಡಿದ್ದರು ಎಂದು ಅತುಲ್ ಸತಿ ನೆನೆಪಿಸಿಕೊಂಡಿದ್ದಾರೆ.

"ರಾಜ್ಯ ಸರ್ಕಾರಕ್ಕೆ ಈ ಸಮಸ್ಯೆಯ ಅರಿವಿದ್ದರೆ ಅದನ್ನು ಪರಿಹರಿಸಲು ಒಂದು ವರ್ಷಕ್ಕೂ ಹೆಚ್ಚು ಕಾಲ ಯಾವುದೇ ಕ್ರಮಕೈಗೊಳ್ಳಲಿಲ್ಲ ಏಕೆ? ಇದು ಏನನ್ನು ಸೂಚಿಸುತ್ತದೆ?" ಎಂದು ಸತಿ ಪ್ರಶ್ನಿಸಿದ್ದಾರೆ.

ಸುಮಾರು 6 ಸಾವಿರ ಅಡಿ ಎತ್ತರದಲ್ಲಿರುವ ಗುಡ್ಡಗಾಡು ಪಟ್ಟಣದಲ್ಲಿ ಕಳೆದ ಕೆಲವು ದಿನಗಳಿಂದ ಕುಸಿತದ ಲಕ್ಷಣಗಳು ಗೋಚರಿಸಿದ್ದವು. ಸುಮಾರು 3 ಸಾವಿರ ಜನಸಂಖ್ಯೆಯುಳ್ಳ ಜೋಶಿಮಠದಲ್ಲಿ ಇದ್ದಕ್ಕಿದ್ದಂತೆ ಭೂಮಿ ಬಾಯಿಬಿಡುತ್ತಿದೆ. ರಸ್ತೆಗಳು 8- 10 ಅಡಿಯಷ್ಟು ಅಗಲ ಬಿರುಕು ಬಿಟ್ಟಿವೆ. ನೂರಾರು ಮನೆಗಳ ಗೋಡೆಗಳಲ್ಲೂ ಬಿರುಕು ಕಂಡು ಬಂದಿದ್ದು, ಬೀಳುವ ಸ್ಥಿತಿಗೆ ಬಂದು ನಿಂತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com