ಭಾರತೀಯ ಸೇನೆಯ ಅತ್ಯಂತ ಪ್ರಸಿದ್ಧ ಮತ್ತು ಗೌರವಾನ್ವಿತ ಕಮಾಂಡೋ ಪಡೆಗಳೆಡೆಗೆ ಒಂದು ನೋಟ

ಭಾರತೀಯ ಸೇನೆಯಲ್ಲಿ ಹಲವು ಕಮಾಂಡೊ ಪಡೆಗಳು ತಮ್ಮ ಕಾರ್ಯ ದಕ್ಷತೆಯಿಂದ, ಸಾಮರ್ಥ್ಯದಿಂದ ಅಪಾರ ಗೌರವ, ಹೆಸರು ಸಂಪಾದಿಸಿವೆ. ಆ ಕಮಾಂಡೋ ಪಡೆಗಳ ಕುರಿತು ಒಂದಷ್ಟು ಮಾಹಿತಿಗಳು ಇಲ್ಲಿವೆ.
ಫೋರ್ಸ್ ವನ್ ಕಮಾಂಡೋ
ಫೋರ್ಸ್ ವನ್ ಕಮಾಂಡೋ

- ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಭಾರತೀಯ ಸೇನೆಯಲ್ಲಿ ಹಲವು ಕಮಾಂಡೊ ಪಡೆಗಳು ತಮ್ಮ ಕಾರ್ಯ ದಕ್ಷತೆಯಿಂದ, ಸಾಮರ್ಥ್ಯದಿಂದ ಅಪಾರ ಗೌರವ, ಹೆಸರು ಸಂಪಾದಿಸಿವೆ. ಆ ಕಮಾಂಡೋ ಪಡೆಗಳ ಕುರಿತು ಒಂದಷ್ಟು ಮಾಹಿತಿಗಳು ಇಲ್ಲಿವೆ.

1. ಪ್ಯಾರಾ ಕಮಾಂಡೋ ಪಡೆ

ಭಾರತೀಯ ಸೇನಾಪಡೆಯ ಪ್ಯಾರಾ ಕಮಾಂಡೋಗಳು ಅತಿ ಹೆಚ್ಚಿನ ತರಬೇತಿ ಪಡೆದ ವಿಶೇಷ ಪಡೆಗಳಾಗಿವೆ. ಅವರು ಕೈಗೊಳ್ಳುವ ಕಾರ್ಯಾಚರಣೆಗಳು ಅತ್ಯಂತ ಮಾರಣಾಂತಿಕವೂ ಆಗಿರುತ್ತವೆ. ಆದ್ದರಿಂದ ಅವರನ್ನು ಸದಾ ಅತ್ಯಂತ ಹೆಚ್ಚಿನ ಕಾರ್ಯಾಚರಣಾ ಸಿದ್ಧ ಸ್ಥಿತಿಯಲ್ಲಿ ಮತ್ತು ದೈಹಿಕವಾಗಿ ಸದೃಢ ರೀತಿಯಲ್ಲಿ ಇಟ್ಟಿರಲಾಗುತ್ತದೆ. ಅದಲ್ಲದೆ ಕೇವಲ ಅತಿ ಹೆಚ್ಚು ದೈಹಿಕ ಸದೃಢತೆ, ಮಾನಸಿಕ ಸ್ಥಿರತೆ, ಬುದ್ಧಿವಂತಿಕೆ, ಹಾಗೂ ಅಪಾರವಾಗಿ ಸ್ಫೂರ್ತಿ ಹೊಂದಿರುವ ಯೋಧರನ್ನು ಈ ಪಡೆಗೆ ಸೇರ್ಪಡೆಗೊಳಿಸಲಾಗುತ್ತದೆ. ಪ್ಯಾರಾ ಕಮಾಂಡೋಗಳು ಜಗತ್ತಿನಲ್ಲೇ ಅತ್ಯಂತ ಕಠಿಣ ತರಬೇತಿಯನ್ನು ಹೊಂದುತ್ತಾರೆ. ಅವರು ಪ್ರತಿ ದಿನ 20 ಕಿಲೋಮೀಟರ್ ಓಟ ಹಾಗೂ 60ಕೆಜಿ ತೂಕ ಒಯ್ಯುವುದರ ಜೊತೆಗೆ ಮ್ಯಾನ್ ಟು ಮ್ಯಾನ್ ಅಸಾಲ್ಟ್ ತರಬೇತಿ ಪಡೆಯುತ್ತಾರೆ. ಪ್ಯಾರಾ ಕಮಾಂಡೋಗಳು 33,500 ಅಡಿಗಳಷ್ಟು ಎತ್ತರದಿಂದಲೂ ಫ್ರೀ ಫಾಲ್ ಅನ್ನೂ ಅಭ್ಯಾಸ ಮಾಡುತ್ತಾರೆ. ಪ್ಯಾರಾ ಕಮಾಂಡೋಗಳು ಭೂ ಪ್ರದೇಶಗಳಲ್ಲಿ, ಪರಿಸರ ಯುದ್ಧಗಳಲ್ಲಿ, ಡೀಪ್ ಸೀ ಡೈವಿಂಗ್ ನಲ್ಲೂ ತರಬೇತಿ ಹೊಂದಿರುತ್ತಾರೆ. ಅವರ ಪ್ರಮುಖ ಕಾರ್ಯಾಚರಣೆಗಳಲ್ಲಿ 1971ರ ಪಾಕಿಸ್ತಾನದ ವಿರುದ್ಧದ ಯುದ್ಧ, 1999ರ ಕಾರ್ಗಿಲ್ ಯುದ್ಧ, ಹಾಗೂ ಕುಖ್ಯಾತ 1984ರ ಆಪರೇಶನ್ ಬ್ಲೂ ಸ್ಟಾರ್ ಸೇರಿವೆ.

2. ಘಾತಕ್ ಪಡೆ

ಘಾತಕ್ ಪಡೆ ಎನ್ನುವುದು ಒಂದು ವಿಶೇಷ ಭೂಸೇನಾ ಕಾಲಾಳುಪಡೆ ಪ್ಲಟೂನ್ ಆಗಿದ್ದು, ಇದು ಶಾಕ್ ಟ್ರೂಪ್ ಆಗಿ, ಬೆಟಾಲಿಯನ್‌ಗೂ ಮುಂದಿನ ಮ್ಯಾನ್ ಟು ಮ್ಯಾನ್ ಅಸಾಲ್ಟ್ ಆಗಿ ಕಾರ್ಯ ನಿರ್ವಹಿಸುತ್ತದೆ. ಅವರು ವಿಶೇಷವಾಗಿ ಶತ್ರುಗಳ ಆರ್ಟಿಲರಿ ಸ್ಥಾನಗಳ ಮೇಲೆ, ವಾಯುನೆಲೆಗಳ ಮೇಲೆ, ಪೂರೈಕೆಗಳ ಮೇಲೆ, ಹಾಗೂ ಕಾರ್ಯತಂತ್ರದ ಪ್ರಧಾನ ಕಚೇರಿಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ಘಾತಕ್ ಕಮಾಂಡೋಗಳು ಶತ್ರು ಪ್ರದೇಶದಲ್ಲಿ ಸಾಕಷ್ಟು ಒಳಗಿರುವ ಗುರಿಗಳ ಮೇಲೆ ಆರ್ಟಿಲರಿ ದಾಳಿ ಮತ್ತು ವಾಯು ದಾಳಿ ನಡೆಸುವುದರಲ್ಲೂ ವಿಶೇಷ ಸಾಮರ್ಥ್ಯ ಗಳಿಸಿದ್ದಾರೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಅತ್ಯಂತ ದೃಢವಾಗಿರುವ ಸೈನಿಕರನ್ನು ಮಾತ್ರವೇ ಘಾತಕ್ ಪಡೆಗೆ ಸೇರಿಸಲಾಗುತ್ತದೆ. ಇದರಲ್ಲಿ ಸಾಮಾನ್ಯವಾಗಿ 20 ಸೈನಿಕರಿರುತ್ತಾರೆ. ಅವರು ಶತ್ರುಗಳನ್ನು ನೇರಾ ನೇರ ಎದುರಿಸುವುದರಿಂದ, ಅವರು ಹೆಲಿಬಾರ್ನ್ ದಾಳಿ, ಬಂಡೆ ಏರುವುದು, ಪರ್ವತ ಪ್ರದೇಶಗಳ ಯುದ್ಧ, ಧ್ವಂಸಗೊಳಿಸುವಿಕೆ, ಆಧುನಿಕ ಆಯುಧ ತರಬೇತಿ, ಅತಿ ನಿಕಟ ಯುದ್ಧ, ಹಾಗೂ ಇನ್‌ಫ್ಯಾಂಟ್ರಿ ಕಾರ್ಯತಂತ್ರಗಳ ತರಬೇತಿ ಹೊಂದಿರುತ್ತಾರೆ.

3. ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ಸ್ (ಎನ್ಎಸ್‌ಜಿ) ಅಥವಾ ಬ್ಲ್ಯಾಕ್ ಕ್ಯಾಟ್ಸ್

ಎನ್ಎಸ್‌ಜಿ ಅಥವಾ ಬ್ಲ್ಯಾಕ್ ಕ್ಯಾಟ್ಸ್ ಪಡೆಯನ್ನು 1986ರಲ್ಲಿ ಸೃಷ್ಟಿಸಲಾಯಿತು. ಈ ಪಡೆಗಳು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಅಡಿಯಲ್ಲಾಗಲಿ, ಪಾರ್ಲಿಮೆಂಟರಿ ಫೋರ್ಸಸ್ ಆಫ್ ಇಂಡಿಯಾ ಅಡಿಯಲ್ಲಾಗಲಿ ಬರುವುದಿಲ್ಲ. ಅದರ ಬದಲಿಗೆ, ಎನ್ಎಸ್‌ಜಿ ಪಡೆಗಳು ಭಾರತೀಯ ಸೇನೆ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಎರಡರಿಂದಲೂ ನೇಮಕಗೊಂಡ ಕಮಾಂಡೋಗಳನ್ನು ಹೊಂದಿರುತ್ತವೆ. ಇದನ್ನು ಭಾರತೀಯ ಪೊಲೀಸ್ ಸೇವೆಯಿಂದ ಓರ್ವ ಡೈರೆಕ್ಟರ್ ಜನರಲ್ ನಿರ್ವಹಿಸುತ್ತಾರೆ. ಎನ್ಎಸ್‌ಜಿ ಸಾಮಾನ್ಯವಾಗಿ ಎರಡು ತಂಡಗಳನ್ನು ಹೊಂದಿದ್ದು, ಸ್ಪೆಷಲ್ ಆ್ಯಕ್ಷನ್ ಗ್ರೂಪ್ (ವಿಶೇಷ ಕಾರ್ಯಾಚರಣಾ ಪಡೆ - ಎಸ್ಎಜಿ) ನಲ್ಲಿ ಸಂಪೂರ್ಣವಾಗಿ ಭಾರತೀಯ ಸೇನೆಯ ಸದಸ್ಯರನ್ನು ಹೊಂದಿರುತ್ತದೆ. ಇನ್ನೊಂದು ತಂಡ ಸ್ಪೆಷಲ್ ರೇಂಜರ್ ಗ್ರೂಪ್ (ಎಸ್ಆರ್‌ಜಿ) ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳಲ್ಲಿ ಬಳಕೆಯಾಗುತ್ತದೆ. ಎನ್ಎಸ್‌ಜಿ ಪಡೆಗಳ ಬಳಿ ಜಗತ್ತಿನ ಅತ್ಯಾಧುನಿಕ ಆಯುಧಗಳಿವೆ. ಇದರ ಆಯ್ಕೆ ಪ್ರಕ್ರಿಯೆ ಎಷ್ಟು ಕಠಿಣವಾಗಿರುತ್ತದೆ ಎಂದರೆ ಆಯ್ಕೆ ಬಯಸಿ ಬರುವ ಸೈನಿಕರಲ್ಲಿ 70-80% ತಮ್ಮಿಂದ ಸಾಧ್ಯವಿಲ್ಲ ಎಂದು ಬಿಟ್ಟು ಹೊರಬರುತ್ತಾರೆ. ಇನ್ನು ಎನ್ಎಸ್‌ಜಿ ಕಮಾಂಡೋಗಳಾಗಿ ಆಯ್ಕೆಗೊಳ್ಳುವ ಕೆಲವೇ ಸೈನಿಕರನ್ನು ಒಂಬತ್ತು ತಿಂಗಳ ವಿಶೇಷ ತರಬೇತಿಗೆ ಕಳುಹಿಸಲಾಗುತ್ತದೆ. ಬಳಿಕವೇ ಅವರು ಫ್ಯಾಂಟಮ್ ಎನ್ಎಸ್‌ಜಿ ಕಮಾಂಡೋಗಳಾಗುತ್ತಾರೆ.

4. ಸ್ಪೆಷಲ್ ಫ್ರಂಟಿಯರ್ ಫೋರ್ಸ್ (ಎಸ್ಎಫ್ಎಫ್)

ಎಸ್ಎಫ್ಎಫ್ ಅನ್ನು 1962ರ ನವೆಂಬರ್ 14ರಂದು ಸ್ಥಾಪಿಸಲಾಯಿತು. ಇದೊಂದು ಪ್ಯಾರಾ ಮಿಲಿಟರಿ ಪಡೆಯಾಗಿದ್ದು, ಕಮಾಂಡೋಗಳು ವಿಶೇಷ ವಿಚಕ್ಷಣೆ, ನೇರ ಕಾರ್ಯಾಚರಣೆ, ಒತ್ತೆಯಾಳುಗಳ ರಕ್ಷಣೆ, ಭಯೋತ್ಪಾದನೆ ವಿರುದ್ಧ ಕಾರ್ಯಾಚರಣೆ, ಅಸಾಂಪ್ರದಾಯಿಕ ಯುದ್ಧ ಹಾಗೂ ರಹಸ್ಯ ಕಾರ್ಯಾಚರಣೆಗಳಲ್ಲಿ ಪರಿಣತಿ ಹೊಂದಿರುತ್ತಾರೆ. ಎಸ್ಎಫ್ಎಫ್ ಅನ್ನು ಇನ್ನೊಂದು ಚೀನಾ - ಭಾರತ ಯುದ್ಧವಾದರೆ ಎಂಬ ಕಾರಣಕ್ಕೆ ಸ್ಥಾಪಿಸಲಾಗಿದ್ದು, ಇದು ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್ (ರಾ) ಸಂಸ್ಥೆಯಡಿ ಕಾರ್ಯಾಚರಿಸುತ್ತದೆ. ಎಸ್ಎಫ್ಎಫ್ ಕಮಾಂಡೋಗಳು ಗೆರಿಲ್ಲಾ ಕಾರ್ಯತಂತ್ರಗಳಲ್ಲಿ, ಪರ್ವತ ಮತ್ತು ಕಾಡಿನ ಯುದ್ಧ ತಂತ್ರಗಳಲ್ಲಿ, ಪ್ಯಾರಾಶೂಟ್ ಜಿಗಿತದಲ್ಲಿ ಅಪಾರ ತರಬೇತಿ ಹೊಂದಿರುತ್ತಾರೆ.

5. ಫೋರ್ಸ್ ವನ್

ಮುಂಬೈ ಭಯೋತ್ಪಾದಕ ದಾಳಿಯ ಬಳಿಕ, ಮಹಾರಾಷ್ಟ್ರ ಸರ್ಕಾರ ಅತ್ಯುತ್ತಮ ಕಮಾಂಡೋಗಳನ್ನು ಕರಿಸಿಕೊಂಡು, ಭಾರತದ ಅತ್ಯಂತ ನೂತನ ವಿಶೇಷ ಪಡೆಯಾದ ಫೋರ್ಸ್ ವನ್ ಅನ್ನು ಸ್ಥಾಪಿಸಿತು. ಈ ಪಡೆಯ ಏಕೈಕ ಗುರಿ ಹಾಗೂ ಉದ್ದೇಶವೆಂದರೆ ಒಂದು ವೇಳೆ ಮುಂಬೈ ಮಹಾನಗರಕ್ಕೆ ಏನಾದರೂ ಅಪಾಯ ಎದುರಾದರೆ ಆಗ ಮುಂಬೈಯನ್ನು ರಕ್ಷಿಸುವುದು. ಫೋರ್ಸ್ ವನ್ ಜಗತ್ತಿನ ಅತ್ಯಂತ ವೇಗದ ಕಾರ್ಯ ಪಡೆಯಾಗಿದ್ದು, 15 ನಿಮಿಷಕ್ಕೂ ಕಡಿಮೆ ಸಮಯದಲ್ಲಿ ಕಾರ್ಯಾಚರಣೆಗೆ ಸಿದ್ಧವಾಗುತ್ತದೆ. 3,000ಕ್ಕೂ ಹೆಚ್ಚಿನ ಅರ್ಜಿಗಳಿಂದ ಕೇವಲ 216 ಅತ್ಯುತ್ತಮ ಸೈನಿಕರು ಫೋರ್ಸ್ ವನ್‌ಗೆ ಆಯ್ಕೆಯಾಗಿದ್ದು, ಅವರಿಗೆ ಇಸ್ರೇಲಿ ಸ್ಪೆಷಲ್ ಫೋರ್ಸಸ್ ಮಾರ್ಗದರ್ಶನದಲ್ಲಿ ತರಬೇತಿ ನೀಡಲಾಗಿದೆ.

<strong>ಗಿರೀಶ್ ಲಿಂಗಣ್ಣ</strong>
ಗಿರೀಶ್ ಲಿಂಗಣ್ಣ

ಈ ಬರಹದ ಲೇಖಕರು ರಕ್ಷಣಾ ವಿಶ್ಲೇಷಕ ಮತ್ತು ಜರ್ಮನಿಯ ADD Engineering GmbH ನ ಅಂಗಸಂಸ್ಥೆಯಾದ ಆಡ್ ಎಂಜಿನಿಯರಿಂಗ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com