3 ಡೆಕ್, 18 ಸೂಟ್: ಐಷಾರಾಮಿ ಕ್ರೂಸರ್ 'MV Ganga Vilas' ಕುರಿತು ತಿಳಿಯಬೇಕಾದ ಅಚ್ಚರಿಯ ಅಂಶಗಳು!

ಐಷಾರಾಮಿ ಕ್ರೂಸರ್ 'MV Ganga Vilas' ತನ್ನ ಮೊದಲ ಪಯಣಕ್ಕೆ ಸಕಲ ರೀತಿಯಲ್ಲೂ ಸಜ್ಜಾಗಿದ್ದು, ಜನವರಿ 13 ರಂದು ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಐಷಾರಾಮಿ ಕ್ರೂಸರ್ ಅನ್ನು ಉದ್ಘಾಟಿಸಲಿದ್ದಾರೆ.
ಎಂವಿ ಗಂಗಾ ವಿಲಾಸ್ ಕ್ರೂಸರ್ ಹಡಗು
ಎಂವಿ ಗಂಗಾ ವಿಲಾಸ್ ಕ್ರೂಸರ್ ಹಡಗು
Updated on

ನವದೆಹಲಿ: ಐಷಾರಾಮಿ ಕ್ರೂಸರ್ 'MV Ganga Vilas' ತನ್ನ ಮೊದಲ ಪಯಣಕ್ಕೆ ಸಕಲ ರೀತಿಯಲ್ಲೂ ಸಜ್ಜಾಗಿದ್ದು, ಜನವರಿ 13 ರಂದು ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಐಷಾರಾಮಿ ಕ್ರೂಸರ್ ಅನ್ನು ಉದ್ಘಾಟಿಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 13 ರಂದು ವಾರಣಾಸಿಯಿಂದ ಬಾಂಗ್ಲಾದೇಶದ ಮೂಲಕ ದಿಬ್ರುಗಢ್‌ಗೆ 51 ದಿನಗಳ ಪ್ರಯಾಣ ಮಾಡಲಿರುವ ಐಷಾರಾಮಿ ಗಂಗಾ ಕ್ರೂಸ್‌ಗೆ ಚಾಲನೆ ನೀಡಲಿದ್ದಾರೆ, ಇದು ವಿಶ್ವದ ಅತಿ ಉದ್ದದ 3,200 ಕಿಮೀ ನದಿ ಯಾನವಾಗಿದೆ. MV ಗಂಗಾ ವಿಲಾಸ್ ಎಂಬ ಹಡಗು ಭಾರತ ಮತ್ತು ಬಾಂಗ್ಲಾದೇಶದ 27 ನದಿ ವ್ಯವಸ್ಥೆಗಳ ಮೂಲಕ ಸಾಗಲಿದ್ದು, ವಿಶ್ವ ಪರಂಪರೆಯ ತಾಣಗಳು, ರಾಷ್ಟ್ರೀಯ ಉದ್ಯಾನವನಗಳು ಸೇರಿದಂತೆ 50 ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದರೊಂದಿಗೆ ಪ್ರಯಾಣವನ್ನು ತುಂಬಲಿದೆ.

ಈ ಕುರಿತಂತೆ ಕೇಂದ್ರ ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದ್ದು, ಕ್ರೂಸ್ ಹಡಗು ಮಾರ್ಚ್‌ 1ರಂದು ದಿಬ್ರೂಘಡ್ ತಲುಪುವುದಕ್ಕೂ ಮೊದಲು ಬಿಹಾರದ ಪಾಟ್ನಾ, ಜಾರ್ಖಂಡ್‌ನ ಸಾಹಿಬ್‌ಗಂಜ್, ಪಶ್ಚಿಮ ಬಂಗಾಳದ ಕೋಲ್ಕತ್ತಾ, ಬಾಂಗ್ಲಾದೇಶದ ಢಾಕಾ ಮತ್ತು ಅಸ್ಸಾಂನ ಗುವಾಹಟಿಯಂತಹ ಪ್ರಮುಖ ನಗರಗಳ ಮೂಲಕ ಹಾದು ಹೋಗಿ ದಿಬ್ರುಗಢವನ್ನು ತಲುಪಲಿದೆ. 

"ಇದು ಭಾರತಕ್ಕೆ ನದಿ ಕ್ರೂಸ್ ಪ್ರವಾಸೋದ್ಯಮದ ಹೊಸ ಯುಗಕ್ಕೆ ನಾಂದಿ ಹಾಡುತ್ತದೆ" ಎಂದು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಮತ್ತು ಆಯುಷ್ ಸಚಿವ ಸರ್ಬಾನಂದ ಸೋನೊವಾಲ್ ಹೇಳಿದ್ದಾರೆ. ದೇಶದ ಶ್ರೀಮಂತ ನದಿ ವ್ಯವಸ್ಥೆಯು ನೀಡುವ ಅಪಾರ ಸಂಪತ್ತನ್ನು ಅನ್ವೇಷಿಸುವುದು ಇದರ ಕಲ್ಪನೆಯಾಗಿದೆ ಎಂದು ಅವರು ಹೇಳಿದರು.

ಅಂತೆಯೇ ದೇಶದಲ್ಲಿ ರಿವರ್ ಕ್ರೂಸ್ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಎತ್ತಿ ಹಿಡಿದ ಸೋನೊವಾಲ್ ಅವರು, ಈ ಕ್ಷೇತ್ರವು ಒಳನಾಡಿನಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಹೇಳಿದರು. ದೇಶದಲ್ಲಿ ಈ ವಲಯದ ಗರಿಷ್ಠ ಮಾನ್ಯತೆ ಮತ್ತು ತ್ವರಿತ ಅಭಿವೃದ್ಧಿಗಾಗಿ ನದಿ ಪ್ರವಾಸೋದ್ಯಮ ಸರ್ಕ್ಯೂಟ್‌ಗಳನ್ನು ಪ್ರಸ್ತುತ ಇರುವ ಪ್ರವಾಸೋದ್ಯಮ ಸರ್ಕ್ಯೂಟ್‌ಗಳೊಂದಿಗೆ ಅಭಿವೃದ್ಧಿಪಡಿಸಲಾಗುವುದು ಮತ್ತು ಸಂಯೋಜಿಸಲಾಗುವುದು ಎಂದು ಅವರು ಹೇಳಿದರು.

ಇಷ್ಟಕ್ಕೂ ಈ ಐಷಾರಾಮಿ ಕ್ರೂಸರ್ ವಿಶೇಷತೆಗಳೇನು?
MV ಗಂಗಾ ವಿಲಾಸ್ ಮೂರು ಡೆಕ್‌ಗಳನ್ನು ಹೊಂದಿದ್ದು, 36 ಪ್ರವಾಸಿಗರ ಸಾಮರ್ಥ್ಯದ 18 ಸೂಟ್‌ಗಳನ್ನು ಹೊಂದಿದೆ. ಎಲ್ಲಾ ಐಷಾರಾಮಿ ಸೌಕರ್ಯಗಳನ್ನು ಈ ಕ್ರೂಸ್ ಹೊಂದಿದೆ. ಮೊದಲ ಪ್ರಯಾಣದಲ್ಲಿ ಸ್ವಿಟ್ಜರ್ಲೆಂಡ್‌ನಿಂದ 32 ಪ್ರವಾಸಿಗರು ಪ್ರಯಾಣದ ಸಂಪೂರ್ಣ ಅನುಭವ ಪಡೆಯಲಿದ್ದಾರೆ. ಪ್ರವಾಸಿಗರು ಜನವರಿ 10 ರಂದು ಕ್ರೂಸ್ ಅನ್ನು ಹತ್ತಲಿದ್ದು, ಜನವರಿ 13 ರಂದು ವಾರಣಾಸಿಯಿಂದ ಹಡಗು ಹೊರಡುವ ಮೊದಲು ಸ್ಥಳೀಯ ದೃಶ್ಯವೀಕ್ಷಣೆಯನ್ನು ಪೂರ್ಣಗೊಳಿಸುತ್ತಾರೆ. ಪ್ರಯಾಣಕ್ಕೆ ಪ್ರತಿ ವ್ಯಕ್ತಿಗೆ ದಿನಕ್ಕೆ ಸುಮಾರು 25,000 ರೂ ವೆಚ್ಚವಾಗಲಿದೆ ಎಂದು ನಿರ್ವಾಹಕರು ತಿಳಿಸಿದ್ದಾರೆ.

ಕ್ರೂಸ್ ಅನ್ನು ಖಾಸಗಿ ನಿರ್ವಾಹಕರು ನಿರ್ವಹಿಸುತ್ತಿದ್ದರೆ, ಹಡಗು, ಬಂದರುಗಳು ಮತ್ತು ಜಲಮಾರ್ಗಗಳ ಸಚಿವಾಲಯದ ಅಡಿಯಲ್ಲಿ ಭಾರತದ ಒಳನಾಡಿನ ಜಲಮಾರ್ಗಗಳ ಪ್ರಾಧಿಕಾರವು ಯೋಜನೆಯನ್ನು ಬೆಂಬಲಿಸಿದೆ. ಗಂಗಾ ಕ್ರೂಸ್ ವಿವಿಧ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಸ್ಥಳಗಳನ್ನು ಒಳಗೊಳ್ಳಲು ಪಿಟ್-ಸ್ಟಾಪ್‌ಗಳನ್ನು ಮಾಡುತ್ತದೆ, ವಾರಣಾಸಿಯಲ್ಲಿನ ಪ್ರಸಿದ್ಧ ಗಂಗಾ ಆರತಿ, ಸಾರನಾಥದ ಬೌದ್ಧ ಕ್ಷೇತ್ರ; ಮತ್ತು ಅಸ್ಸಾಂನ ಅತಿದೊಡ್ಡ ನದಿ ದ್ವೀಪವಾದ ಮಜುಲಿ ಕೂಡ ಈ ಸ್ಟಾಪ್ ಗಳಲ್ಲಿ ಒಂದಾಗಿವೆ. ಅಂತೆಯೇ ಪ್ರವಾಸಿಗರು ಬಿಹಾರ ಸ್ಕೂಲ್ ಆಫ್ ಯೋಗ ಮತ್ತು ವಿಕ್ರಮಶಿಲಾ ವಿಶ್ವವಿದ್ಯಾಲಯಕ್ಕೂ ಭೇಟಿ ನೀಡುತ್ತಾರೆ. ಈ ಕ್ರೂಸ್ ಬಂಗಾಳ ಕೊಲ್ಲಿ ಡೆಲ್ಟಾದಲ್ಲಿರುವ ಸುಂದರ್‌ಬನ್ಸ್ ಮತ್ತು ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಮೂಲಕವೂ ಸಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com