ಜೋಶಿಮಠದಲ್ಲಿ ಸಂತ್ರಸ್ತರಾದವರಿಗೆ 1.5 ಲಕ್ಷ ಮಧ್ಯಂತರ ಪರಿಹಾರ ಘೋಷಿಸಿದ ಉತ್ತರಾಖಂಡ ಸರ್ಕಾರ
ಜೋಶಿಮಠದಲ್ಲಿ ಭೂಮಿ ಕುಸಿದು ಮನೆಗಳು ಮತ್ತು ಇತರೆ ಕಟ್ಟಡಗಳು ಬಿರುಕು ಬಿಟ್ಟ ನಂತರ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡ ಸಂತ್ರಸ್ತ ಕುಟುಂಬಗಳಿಗೆ ಉತ್ತರಾಖಂಡ ಸರ್ಕಾರ ಬುಧವಾರ 1.5 ಲಕ್ಷ ರೂಪಾಯಿ ಮಧ್ಯಂತರ ಪರಿಹಾರವನ್ನು ಘೋಷಿಸಿದೆ.
Published: 11th January 2023 04:49 PM | Last Updated: 11th January 2023 04:49 PM | A+A A-

ಉತ್ತರಾಖಂಡದ ಜೋಶಿಮಠದಲ್ಲಿ ಬಿರುಕು ಬಿಟ್ಟ ಭೂಮಿ
ಜೋಶಿಮಠ: ಜೋಶಿಮಠದಲ್ಲಿ ಭೂಮಿ ಕುಸಿದು ಮನೆಗಳು ಮತ್ತು ಇತರೆ ಕಟ್ಟಡಗಳು ಬಿರುಕು ಬಿಟ್ಟ ನಂತರ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡ ಸಂತ್ರಸ್ತ ಕುಟುಂಬಗಳಿಗೆ ಉತ್ತರಾಖಂಡ ಸರ್ಕಾರ ಬುಧವಾರ 1.5 ಲಕ್ಷ ರೂಪಾಯಿ ಮಧ್ಯಂತರ ಪರಿಹಾರವನ್ನು ಘೋಷಿಸಿದೆ.
'ಪ್ರತಿ ಕುಟುಂಬಕ್ಕೆ ತಕ್ಷಣವೇ 1.50 ಲಕ್ಷ ರೂಪಾಯಿ ಮಧ್ಯಂತರ ನೆರವು ನೀಡಲಾಗುವುದು. ‘ಅಸುರಕ್ಷಿತ’ ಎಂದು ಗುರುತಿಸಲಾಗಿರುವ ಎರಡು ಹೋಟೆಲ್ ಕಟ್ಟಡಗಳನ್ನು ಹೊರತುಪಡಿಸಿ, ಬೇರೆ ಯಾವುದೇ ಕಟ್ಟಡವನ್ನು ಕೆಡವುತ್ತಿಲ್ಲ. ಇಲ್ಲಿಯವರೆಗೆ 723 ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದೆ' ಎಂದು ಉತ್ತರಾಖಂಡ ಮುಖ್ಯಮಂತ್ರಿ ಕಾರ್ಯದರ್ಶಿ ಆರ್ ಮೀನಾಕ್ಷಿ ಸುಂದರಂ ತಿಳಿಸಿದ್ದಾರೆ.
ಉತ್ತರಾಖಂಡದ ಜೋಶಿಮಠ ಪಟ್ಟಣದಲ್ಲಿ ಭೂಮಿ ಕುಸಿತದಿಂದ 723 ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಇದುವರೆಗೆ 131 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸಂಪರ್ಕದಲ್ಲಿದ್ದು, ಹೊಸ ಬಿರುಕು ಕಾಣಿಸಿಕೊಂಡರೆ ಗಮನಕ್ಕೆ ತರುವಂತೆ ಕೇಳಲಾಗಿದೆ. 131 ಕುಟುಂಬಗಳನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಚಮೋಲಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಿಮಾಂಶು ಖುರಾನಾ ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಉತ್ತರಾಖಂಡದ ಜೋಶಿಮಠದ ಬಳಿಕ ಉತ್ತರ ಪ್ರದೇಶದ ಅಲಿಗಢದ ಮನೆಗಳಲ್ಲಿ ಬಿರುಕು, ನಿವಾಸಿಗಳಲ್ಲಿ ಆತಂಕ
ಭೂ ಕುಸಿತದಿಂದ ಆಸ್ತಿ ಹಾನಿಯ ಕುರಿತು ಕೇಂದ್ರ ತಂಡವು ಸಮೀಕ್ಷೆ ನಡೆಸಲಿದೆ ಮತ್ತು ಪರಿಹಾರ ಮತ್ತು ರಕ್ಷಣಾ ಕಾರ್ಯಗಳಲ್ಲಿ ಸ್ಥಳೀಯ ಆಡಳಿತದೊಂದಿಗೆ ಸಮನ್ವಯ ಸಾಧಿಸುವ ಮೂಲಕ ಮುಂದಿನ ಕ್ರಮವನ್ನು ಸೂಚಿಸಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಕರ್ಣಪ್ರಯಾಗ್‌ನ ಬಾದಿತ ಬಹುಗುಣ ನಗರದ ಕಟ್ಟಡಗಳಲ್ಲಿ ಬಿರುಕುಗಳು ವರದಿಯಾಗಿದ್ದು, ಅವುಗಳನ್ನು ಪರಿಶೀಲಿಸಲು ಐಐಟಿ ರೂರ್ಕಿಯ ವಿಜ್ಞಾನಿಗಳ ತಂಡವನ್ನು ಕೇಳಲಾಗಿದೆ ಎಂದು ಖುರಾನಾ ಹೇಳಿದ್ದಾರೆ.
ಇಂದು ಉತ್ತರಾಖಂಡ ಮುಖ್ಯಮಂತ್ರಿಗಳ ಕಾರ್ಯದರ್ಶಿ ಆರ್‌ಎಂ ಸುಂದರಂ ಅವರು ಜಿಲ್ಲಾಡಳಿತ ಮತ್ತು ಮನೆ ಹಾನಿಗೊಳಗಾದ ಜನರೊಂದಿಗೆ ಸಭೆ ನಡೆಸಿದರು.
ಇದನ್ನೂ ಓದಿ: ಉತ್ತರಾಖಂಡದ ಜೋಶಿಮಠವನ್ನು ಭೂಕುಸಿತ ವಲಯ ಎಂದು ಘೋಷಣೆ: 60ಕ್ಕೂ ಹೆಚ್ಚು ಕುಟುಂಬಗಳ ಸ್ಥಳಾಂತರ
ಜೇಪೀ ಕಂಪನಿ ಬಳಿ ನೀರಿನ ಸೋರಿಕೆ ಕಡಿಮೆಯಾಗುತ್ತಿದ್ದು, ನಿನ್ನೆ ಸಂಜೆ 250 ಎಲ್‌ಪಿಎಂ ತಲುಪಿದೆ. ಜನವರಿ 7 ರ ನಂತರ ಯಾವುದೇ ಹೊಸ ಬಿರುಕುಗಳು ಪತ್ತೆಯಾಗಿಲ್ಲ ಮತ್ತು ಹಳೆಯ ಬಿರುಕುಗಳು ಹೆಚ್ಚಾಗಿಲ್ಲ. ಅಸುರಕ್ಷಿತವಾಗಿರುವ ಎರಡು ಕಟ್ಟಡಗಳನ್ನು ನೆಲಸಮಗೊಳಿಸಬೇಕಾಗಿದೆ ಮತ್ತು ನಮಗೆ ಬೆಂಬಲ ನೀಡುವಂತೆ ನಾವು ಜನರಲ್ಲಿ ಮನವಿ ಮಾಡುತ್ತೇವೆ ಎಂದು ಉತ್ತರಾಖಂಡ ಮುಖ್ಯಮಂತ್ರಿಗಳ ಕಾರ್ಯದರ್ಶಿ ಹೇಳಿದರು.
ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮ (ಎನ್‌ಟಿಪಿಸಿ)ಯನ್ನು ರಾಜ್ಯದಿಂದ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಜೋಶಿಮಠದಲ್ಲಿ ಸ್ಥಳೀಯರು ಮಂಗಳವಾರ ಪ್ರತಿಭಟನೆ ನಡೆಸಿದರು.