ಉದ್ಯೋಗಕ್ಕಾಗಿ ಭೂಮಿ ಹಗರಣ: ಲಾಲು ವಿರುದ್ಧ ಕಾನೂನು ಕ್ರಮಕ್ಕೆ ಸಿಬಿಐಗೆ ಕೇಂದ್ರದ ಅನುಮತಿ
ಉದ್ಯೋಗಕ್ಕಾಗಿ ಭೂಮಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ವಿರುದ್ಧ ಸಿಬಿಐ ಕಾನೂನು ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
Published: 13th January 2023 09:22 PM | Last Updated: 13th January 2023 09:25 PM | A+A A-

ಲಾಲು ಪ್ರಸಾದ್ ಯಾದವ್
ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ವಿರುದ್ಧ ಸಿಬಿಐ ಕಾನೂನು ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಸರ್ಕಾರದ ಅನುಮತಿಯನ್ನು ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಸಲ್ಲಿಸಿರುವುದಾಗಿ ಅವರು ಹೇಳಿದ್ದಾರೆ. ಏಜೆನ್ಸಿ ಸಲ್ಲಿಸಿದ ಚಾರ್ಜ್ ಶೀಟ್ ಪರಿಗಣಿಸಿ, ಸಕ್ಷಮ ಪ್ರಾಧಿಕಾರದಿಂದ ಕಾನೂನು ಕ್ರಮ ಜರುಗಿಸಲು ಅನುಮತಿಯು ಪೂರ್ವಾಪೇಕ್ಷಿತವಾಗಿದೆ ಎಂದು ಅವರು ಹೇಳಿದರು.
ರೈಲ್ವೆ ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿಆರ್‌ಜೆಡಿ ನಾಯಕ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್, ಅವರ ಪತ್ನಿ ರಾಬ್ರಿ ದೇವಿ, ಮಗಳು ಮಿಸಾ ಭಾರತಿ ಮತ್ತು ಇತರ 13 ಜನರ ವಿರುದ್ಧ ಸಿಬಿಐ ಕಳೆದ ವರ್ಷ 17 ರಂದು ಚಾರ್ಜ್ ಶೀಟ್ ಸಲ್ಲಿಸಿತ್ತು. ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಇತ್ತೀಚೆಗೆ ಸಲ್ಲಿಸಲಾದ ಚಾರ್ಜ್ ಶೀಟ್‌ನಲ್ಲಿ ರೈಲ್ವೆ ಇಲಾಖೆಯ ಮಾಜಿ ಜನರಲ್ ಮ್ಯಾನೇಜರ್ ಸೌಮ್ಯ ರಾಘವನ್, ಮಾಜಿ ಸಿಪಿಒ ಕಮಲ್ ದೀಪ್ ಮೈನ್‌ರಾಯ್ ಮತ್ತಿತರರನ್ನು ಆರೋಪಿ ಎಂದು ಹೆಸರಿಸಲಾಗಿದೆ.
ತನಿಖೆ ವೇಳೆ ಆರೋಪಿಗಳು ಆಗಿನ ಕೇಂದ್ರೀಯ ರೈಲ್ವೆ ಜನರಲ್ ಮ್ಯಾನೇಜರ್ ಮತ್ತು ಸೆಂಟ್ರಲ್ ರೈಲ್ವೆ ಸಿಪಿಒ ಜೊತೆಗೆ ಸಂಚು ರೂಪಿಸಿ, ತಮ್ಮ ಹೆಸರಿನಲ್ಲಿ ಅಥವಾ ಅವರ ಹತ್ತಿರದ ಸಂಬಂಧಿಗಳ ಹೆಸರಿನಲ್ಲಿ ಭೂಮಿಗೆ ಬದಲಾಗಿ ರೈಲ್ವೆ ಉದ್ಯೋಗ ನೀಡುವುದಾಗಿ ಆಮಿಷವೊಡ್ಡಿದ್ದಾರೆ ಎಂದು ಚಾರ್ಜ್ ಶೀಟ್‌ನಲ್ಲಿ ಆರೋಪಿಸಲಾಗಿದೆ ಎಂದು ಸಿಬಿಐ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.