ಒಡಿಶಾದಲ್ಲಿ ಮಕರ ಮೇಳದ ವೇಳೆ ಕಾಲ್ತುಳಿತ; ಓರ್ವ ಸಾವು, 20 ಮಂದಿಗೆ ಗಾಯ
ಕಟಕ್: ಒಡಿಶಾದ ಕಟಕ್ ಜಿಲ್ಲೆಯಲ್ಲಿ ಶನಿವಾರ ನಡೆದ ಮಕರ ಮೇಳದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು 20 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಕರ ಮೇಳದ ನಿಮಿತ್ತ ಬದಂಬಾ-ಗೋಪಿನಾಥಪುರ ಟಿ-ಬ್ರಿಡ್ಜ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರಿಂದ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಘಟನೆಯಲ್ಲಿ 45 ವರ್ಷದ ಅಂಜನಾ ಸ್ವೈನ್ ಎಂದು ಗುರುತಿಸಲಾದ ಮಹಿಳೆಯೊಬ್ಬರು ಸಾವನ್ನಪ್ಪಿದ್ದರೆ. ಗಂಭೀರವಾಗಿ ಗಾಯಗೊಂಡ ನಾಲ್ವರನ್ನು ಕಟಕ್ ನಗರದ ಎಸ್‌ಸಿಬಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬದಂಬಾ-ನರಸಿಂಗ್‌ಪುರ ಶಾಸಕ ಮತ್ತು ಮಾಜಿ ಸಚಿವ ದೇಬಿ ಪ್ರಸಾದ್ ಮಿಶ್ರಾ ಅವರು ತಿಳಿಸಿದ್ದಾರೆ.
ಇತರ ಗಾಯಗೊಂಡ ವ್ಯಕ್ತಿಗಳನ್ನು ಬದಂಬಾದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ(ಸಿಎಚ್‌ಸಿ) ದಾಖಲಿಸಲಾಗಿದೆ ಎಂದು ಮಿಶ್ರಾ ಹೇಳಿದ್ದಾರೆ.
ಮಕರ ಮೇಳದ ವೇಳೆ ಆಯೋಜಿಸಲಾಗಿದ್ದ ಜಾತ್ರೆಗೆ ಮತ್ತು ಸಿಂಹನಾಥನ ದರ್ಶನಕ್ಕೆಂದು ಆಗಮಿಸಿದ್ದ ಮಹಿಳೆಯರು, ಮಕ್ಕಳು ಸೇರಿದಂತೆ ಭಕ್ತರ ಸಂಖ್ಯೆ ಏಕಾಏಕಿ ಹೆಚ್ಚಾದ ಕಾರಣ ಈ ಘಟನೆ ನಡೆದಿದೆ ಎಂದು ಅಥಗಢ ಸಬ್ ಕಲೆಕ್ಟರ್ ಹೇಮಂತ ಕುಮಾರ್ ಸ್ವೈನ್ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ