ದಾವೂದ್ ಇಬ್ರಾಹಿಂ
ದಾವೂದ್ ಇಬ್ರಾಹಿಂ

ವಿಚ್ಛೇದನದ ಬಗ್ಗೆ ದಾವೂದ್ ಸುಳ್ಳು ಹೇಳಿದ್ದು, ಪಾಕ್ ಮಹಿಳೆಯೊಂದಿಗೆ 2ನೇ ಮದುವೆಯಾಗಿದ್ದಾರೆ: ಎನ್ಐಎಗೆ ಸೋದರಳಿಯ ಮಾಹಿತಿ

ಪರಾರಿಯಾಗಿರುವ ಭೂಗತ ಪಾತಕಿ ಪಾಕಿಸ್ತಾನದ ಪಠಾಣ್ ಮಹಿಳೆಯೊಂದಿಗೆ 2ನೇ ವಿವಾಹವಾಗಿದ್ದಾನೆಂದು ದಾವೂದ್​ನ ಸಹೋದರಿ ಹಸೀನಾ ಪಾರ್ಕರ್ ಪುತ್ರ ಹಾಗೂ ದಾವೂದ್ ಸೋದರಳಿಯ ಅಲಿಶಾ ಪಾರ್ಕರ್ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳ ಬಳಿ ಹೇಳಿಕೊಂಡಿದ್ದಾನೆಂದು  ತಿಳಿದುಬಂದಿದೆ.
Published on

ಮುಂಬೈ (ಮಹಾರಾಷ್ಟ್ರ): ಪರಾರಿಯಾಗಿರುವ ಭೂಗತ ಪಾತಕಿ ಪಾಕಿಸ್ತಾನದ ಪಠಾಣ್ ಮಹಿಳೆಯೊಂದಿಗೆ 2ನೇ ವಿವಾಹವಾಗಿದ್ದಾನೆಂದು ದಾವೂದ್​ನ ಸಹೋದರಿ ಹಸೀನಾ ಪಾರ್ಕರ್ ಪುತ್ರ ಹಾಗೂ ದಾವೂದ್ ಸೋದರಳಿಯ ಅಲಿಶಾ ಪಾರ್ಕರ್ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳ ಬಳಿ ಹೇಳಿಕೊಂಡಿದ್ದಾನೆಂದು  ತಿಳಿದುಬಂದಿದೆ.

ಎನ್ಐಎ ಅಧಿಕಾರಿಗಳು ಇತ್ತೀಚೆಗಷ್ಟೇ ಮುಂಬೈ ಸೇರಿದಂತೆ ಹಲವೆಡೆ ದಾಳಿ ನಡೆಸಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಭಯೋತ್ಪಾದಕ ಜಾಲವನ್ನು ಬಹಿರಂಗಪಡಿಸುವ ಮೂಲಕ ಹಲವರನ್ನು ಬಂಧಿಸಿತ್ತು. ಎನ್​ಐಎ ಈಗಾಗಲೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಿದೆ.

ಈ ನಡುವೆ ಎನ್ಐಎ ಅಧಿಕಾರಿಗಳಿಗೆ ಮಾಹಿತಿ ನೀಡಿರುವ ದಾವೂದ್​ನ ಸಹೋದರಿ ಹಸೀನಾ ಪಾರ್ಕರ್ ಪುತ್ರ ಅಲಿಶಾ ಪಾರ್ಕರ್, ವಿಚ್ಛೇದನದ ಬಗ್ಗೆ ದಾವೂದ್ ಸುಳ್ಳು ಹೇಳಿದ್ದು, 2ನೇ ಮದುವೆಯಾಗಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ದಾವೂದ್ ಕರಾಚಿಯಲ್ಲಿ ವಾಸವಿರುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಆದರೆ, ಎರಡನೇ ಪತ್ನಿ ಎಲ್ಲಿ ವಾಸಿಸುತ್ತಿದ್ದಾರೆ. ದಾವೂದ್ ಜೊತೆಗೆ ಯಾವಾಗ ವಿವಾಹವಾಗಿದ್ದರು ಎಂಬ ಮಾಹಿತಿಯನ್ನು ನೀಡಿಲ್ಲ.

ಎರಡನೇ ಮದುವೆಯಾಗುವ ಸಲುವಾಗಿ ದಾವೂದ್ ಎಲ್ಲರ ಬಳಿಯೂ ಪತ್ನಿ ಮೈಜಾಬಿನ್ಗೆ ವಿಚ್ಛೇದನ ನೀಡಿರುವುದಾಗಿ ಹೇಳಿಕೊಳ್ಳುತ್ತಿದ್ದ. ಆದರೆ, ಅದು ಸದ್ಯವಲ್ಲ. ಆತ ಮೊದಲ ಪತ್ನಿಗೆ ವಿಚ್ಛೇದನವನ್ನೇ ನೀಡಿಲ್ಲ. ಇದಲ್ಲದೆ, ಆತ ತನ್ನ ವಿಳಾಸವನ್ನು ಬದಲಿಸಿಕೊಂಡಿದ್ದಾನೆ. ಈಗ ಅವರು ಕರಾಚಿಯ ಅಬ್ದುಲ್ಲಾ ಗಾಜಿ ಬಾಬಾ ದರ್ಗಾದ ಹಿಂದೆ ರಹೀಮ್ ಫಕಿ ಬಳಿಯ ರಕ್ಷಣಾ ಪ್ರದೇಶದಲ್ಲಿ ವಾಸವಿದ್ದಾರೆಂದು ಹೇಳಿಕೊಂಡಿದ್ದಾನೆ.

2022ರ ಜುಲೈ ತಿಂಗಳಿನಲ್ಲಿ ದುಬೈನಲ್ಲಿ ದಾವೂದ್ ಅವರ ಮೊದಲ ಪತ್ನಿಯನ್ನು ಮೈಜಾಬಿನ್ ಅವರನ್ನು ಭೇಟಿಯಾಗಿದ್ದೆ. ಹಬ್ಬದ ಸಂದರ್ಭದಲ್ಲಿ ಮೈಜಾಬಿನ್ ಅವರು ನನ್ನ ಪತ್ನಿಯನ್ನು ಅವರ ಮನೆಗೆ ಕರೆಯುತ್ತಾರೆ. ವಾಟ್ಸಾಪ್ ಕಾಲ್ ಮೂಲಕವೂ ನನ್ನ ಪತ್ನಿ ಜೊತೆಗೆ ಮಾತನಾಡುತ್ತಾರೆಂದು ಹೇಳಿಕೊಂಡಿದ್ದಾರೆ.

ದಾವೂದ್ ಇಬ್ರಾಹಿಂ ಭಾರತದಲ್ಲಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ದು, 1993 ರಲ್ಲಿ ಮುಂಬೈನಲ್ಲಿ ನಡೆದ ಬಾಂಬ್ ಸ್ಫೋಟದ ನಂತರ ಅವನು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾನೆ ಎನ್ನುವ ಮಾಹಿತಿ ಇತ್ತು. ಆದರೆ, ದಾವೂದ್ ಇಲ್ಲಿದ್ದಾನೆ ಎಂಬುದನ್ನು ಪಾಕಿಸ್ತಾನ ಸದಾ ನಿರಾಕರಿಸುತ್ತಲೇ ಬಂದಿದೆ.

ದಾವೂದ್‌ ಪುತ್ರಿ ಜಾವೇದ್ ಮಿಯಾಂದಾದ್‌ನ ಮಗನನ್ನು ಮದುವೆಯಾಗಿದ್ದಾಳೆ. ದಾವೂದ್ ಇಬ್ರಾಹಿಂ ಮತ್ತು ಅವರ ಮೊದಲ ಪತ್ನಿ ಮೆಹಜಾಬಿನ್ ಅವರ ಪುತ್ರಿ ಮಹ್ರುಖ್ ಅವರು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಅವರ ಪುತ್ರ ಜುನೈದ್ ಅವರನ್ನು ವಿವಾಹವಾಗಿದ್ದಾರೆ. ಜುನೈದ್ ಮತ್ತು ಮಹ್ರುಖ್ ಕೆಲವು ವರ್ಷಗಳ ಹಿಂದೆ ಪಾಕಿಸ್ತಾನದಲ್ಲಿ ಮದುವೆಯಾಗಿದ್ದರು ಮತ್ತು ಆರತಕ್ಷತೆ ದುಬೈನಲ್ಲಿ ನಡೆದಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com