ಲೆಫ್ಟಿನೆಂಟ್ ಗವರ್ನರ್ ನನ್ನ ಹೆಡ್ ಮಾಸ್ಟರ್ ಅಲ್ಲ; ಜನರು ನನ್ನನ್ನು ಸಿಎಂ ಹುದ್ದೆಗೆ ಆಯ್ಕೆ ಮಾಡಿದ್ದಾರೆ: ಕೇಜ್ರಿವಾಲ್
ದೆಹಲಿ ಲೆಫ್ಟಿನೆಂಟ್ ಗೌರ್ನರ್ ಹಾಗೂ ಸರ್ಕಾರದ ನಡುವಿನ ತಿಕ್ಕಾಟ ಮತ್ತೊಮ್ಮೆ ಸುದ್ದಿಯಾಗುತ್ತಿದ್ದು ಲೆಫ್ಟಿನೆಂಟ್ ಗೌರ್ನರ್ ವಿಕೆ ಸಕ್ಸೇನಾ ನನ್ನ ಹೆಡ್ ಮಾಸ್ಟರ್ ಅಲ್ಲ ಎಂದು ಸಿಎಂ ಕೇಜ್ರಿವಾಲ್ ಹೇಳಿದ್ದಾರೆ.
Published: 17th January 2023 04:07 PM | Last Updated: 27th February 2023 06:00 PM | A+A A-

ಲೆಫ್ಟಿನೆಂಟ್ ಗೌರ್ನರ್ ವಿರುದ್ಧ ಕೇಜ್ರಿವಾಲ್ ಪ್ರತಿಭಟನೆ
ನವದೆಹಲಿ: ಶಿಕ್ಷಕರ ತರಬೇತಿ ವಿಚಾರವಾಗಿ ದೆಹಲಿ ಲೆಫ್ಟಿನೆಂಟ್ ಗೌರ್ನರ್ ಹಾಗೂ ಸರ್ಕಾರದ ನಡುವಿನ ತಿಕ್ಕಾಟ ಮತ್ತೊಮ್ಮೆ ಸುದ್ದಿಯಾಗುತ್ತಿದ್ದು ಲೆಫ್ಟಿನೆಂಟ್ ಗೌರ್ನರ್ ವಿಕೆ ಸಕ್ಸೇನಾ ನನ್ನ ಹೆಡ್ ಮಾಸ್ಟರ್ ಅಲ್ಲ ಎಂದು ಸಿಎಂ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿ ಲೆಫ್ಟಿನೆಂಟ್ ಗೌರ್ನರ್ ವಿಕೆಸಕ್ಸೇನಾ, ಊಳಿಗಮಾನ್ಯ ಮನಸ್ಥಿತಿ ಹೊಂದಿದ್ದು, ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಲಭ್ಯವಾಗುವುದನ್ನು ಅವರು ಬಯಸುವುದಿಲ್ಲ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
ನನ್ನ ಶಿಕ್ಷಕರೂ ಸಹ ನನ್ನ ಹೋಮ್ ವರ್ಕ್ ನ್ನು ಅಷ್ಟು ಕೂಲಂಕುಷವಾಗಿ ಪರಿಶೀಲಿಸಿರಲಿಲ್ಲ, ಆ ಪ್ರಮಾಣದಲ್ಲಿ ಲೆಫ್ಟಿನೆಂಟ್ ಗೌರ್ನರ್ ನನ್ನ ಕಡತಗಳನ್ನು ಪರಿಶೀಲಿಸುತ್ತಾರೆ. ಲೆಫ್ಟಿನೆಂಟ್ ಗೌರ್ನರ್ ನನ್ನ ಹೆಡ್ ಮಾಸ್ಟರ್ ಅಲ್ಲ. ನಾನು ಜನರಿಂದ ಆಯ್ಕೆಯಾಗಿರುವ ಮುಖ್ಯಮಂತ್ರಿ ಕೇಜ್ರಿವಾಲ್ ಹೇಳಿದ್ದಾರೆ.
ನನ್ನಿಂದಲೇ ಬಿಜೆಪಿ ಎಂಸಿಡಿ ಚುನಾವಣೆಯಲ್ಲಿ 104 ಸ್ಥಾನಗಳನ್ನು ಗೆದ್ದಿದೆ ಹಾಗೂ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ದೆಹಲಿಯ ಎಲ್ಲಾ 7 ಲೋಕಸಭಾ ಸ್ಥಾನಗಳನ್ನೂ ಗೆಲ್ಲಲಿದೆ ಎಂದು ಸಭೆಯೊಂದರಲ್ಲಿ ಲೆಫ್ಟಿನೆಂಟ್ ಗೌರ್ನರ್ ಹೇಳಿದ್ದಾಗಿ ಕೇಜ್ರಿವಾಲ್ ಆರೋಪಿಸಿದ್ದಾರೆ.
ಲೆಫ್ಟಿನೆಂಟ್ ಗೌರ್ನರ್ ಯಾರು? ಎಲ್ಲಿಂದ ಬಂದಿದ್ದಾರೆ? ಅವರು ನಮ್ಮ ತಲೆ ಮೇಲೆ ಕೂತಿದ್ದಾರೆ. ನಾವು ನಮ್ಮ ಮಕ್ಕಳನ್ನು ಯಾವ ಶಾಲೆಗೆ ಓದಲು ಕಳಿಸಬೇಕು ಎಂಬುದನ್ನು ಲೆಫ್ಟಿನೆಂಟ್ ಗೌರ್ನರ್ ನಿರ್ಧರಿಸಲಿದ್ದಾರೆಯೇ? ಇಂತಹ ಊಳಿಗಮಾನ್ಯ ಮನಸ್ಥಿತಿಯಿಂದಲೇ ನಮ್ಮ ದೇಶ ಹಿಂದುಳಿದಿದೆ ಎಂದು ಕೇಜ್ರಿವಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ನಾಳೆ ನಾವೇ ಕೇಂದ್ರದಲ್ಲಿ ಅಧಿಕಾರಕ್ಕೇರಬಹುದು ನಮ್ಮ ಲೆಫ್ಟಿನೆಂಟ್ ಗೌರ್ನರ್ ಮೂಲಕ ನಮ್ಮ ಸರ್ಕಾರ ಜನತೆಗೆ ಕಿರುಕುಳ ನೀಡುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಲೆಫ್ಟಿನೆಂಟ್ ಗೌರ್ನರ್ ತಮ್ಮದೇ ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರವನ್ನು ಹೊಂದಿಲ್ಲ, ಪೊಲೀಸ್, ಸಾರ್ವಜನಿಕ ಸುವ್ಯವಸ್ಥೆ ಹೊರತುಪಡಿಸಿ ಬೇರೆ ವಿಷಯಗಳಲ್ಲಿ ಸ್ವಂತ ನಿರ್ಧಾರ ಕೈಗೊಳ್ಳುವುದಕ್ಕೆ ಅಧಿಕಾರ ಹೊಂದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.