ರಾಜಸ್ಥಾನ: ವಸುಂಧರಾ ರಾಜೆ ವಿಚಾರದಲ್ಲಿ ಮತ್ತೆ ಸಚಿನ್ ಪೈಲಟ್, ಗೆಹ್ಲೋಟ್ ನಡುವೆ ಮುಸುಕಿನ ಗುದ್ದಾಟ!
ರಾಜಸ್ಥಾನದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವೆ ಮತ್ತೆ ಮುಸುಕಿನ ಗುದ್ದಾಟ ನಡೆದಿದೆ.
Published: 20th January 2023 04:04 PM | Last Updated: 20th January 2023 07:55 PM | A+A A-

ಸಚಿನ್ ಪೈಲಟ್, ಅಶೋಕ್ ಗೆಹ್ಲೋಟ್, ವಸುಂಧರಾ ರಾಜೇ
ಜೈಪುರ: ರಾಜಸ್ಥಾನದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವೆ ಮತ್ತೆ ಮುಸುಕಿನ ಗುದ್ದಾಟ ನಡೆದಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿನ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವವರ ವಿರುದ್ಧ ಅಶೋಕ್ ಗೆಹ್ಲೋಟ್ ಆಡಳಿತ ಕ್ರಮ ತೆಗೆದುಕೊಳ್ಳುವ ವಿಶ್ವಾಸ ಇರುವುದಾಗಿ ಸಚಿನ್ ಪೈಲಟ್ ಶುಕ್ರವಾರ ಹೇಳಿದ್ದಾರೆ. ರಾಜ್ಯದಲ್ಲಿ ಚುನಾವಣೆ ಬರುವ ಮುನ್ನವೇ ಒಂದು ವರ್ಷದ ಅವಧಿಯಲ್ಲಿ ಸರ್ಕಾರ ಭ್ರಷ್ಟಾಚಾರ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ನಂಬಿರುವುದಾಗಿ ಹೇಳುವ ಮೂಲಕ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿನ್ ಪೈಲಟ್, ವಸುಂಧರಾ ರಾಜೇ ಅವಧಿಯಲ್ಲಿ ವ್ಯಾಪಕ ಭ್ರಷ್ಟಾಚಾರವಾಗಿದ್ದು, ಹಲವಾರು ಅಕ್ರಮಗಳನ್ನು ಸಾಕ್ಷ್ಯಾಧಾರಗಳೊಂದಿಗೆ ಬಹಿರಂಗಪಡಿಸಿದ್ದೇವೆ. ದೆಹಲಿಯವರೆಗೆ ಹೋಗಿದ್ದೇವೆ. ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನಾನು ಭಾವಿಸಿದ್ದೆ. ಚುನಾವಣೆಗೆ ಇನ್ನೂ ಒಂದು ವರ್ಷ ಸಮಯವಿದ್ದು,ಈಗಲಾದರೂ ಸರ್ಕಾರ ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದು ನಿನ್ನೆಯೇ ಹೇಳಿದ್ದಾಗಿ ತಿಳಿಸಿದರು.
ಅದು ಕಂಬಳ ಹಗರಣವಾಗಿರಲಿ, ಅಥವಾ ಲಲಿತ್ ಮೋದಿಗೆ ಸಂಬಂಧಿಸಿದ ವಿವಿಧ ಹಗರಣಗಳ ಅನೇಕ ಆರೋಪಗಳನ್ನು ನಾವು ಸಾಬೀತುಪಡಿಸಿದ್ದೇವೆ. ಕ್ರಮ ತೆಗೆದುಕೊಳ್ಳಲಾಗುವುದು ಎಂದು ನಂಬಿರುವುದಾಗಿ ತಿಳಿಸಿದರು.
ಇದನ್ನೂ ಓದಿ: ಸಚಿನ್ ಪೈಲಟ್ ರನ್ನು ಕೊರೋನಾಗೆ ಹೋಲಿಸಿದ್ರಾ ಗೆಹ್ಲೋಟ್? ವಿಡಿಯೋ ವೈರಲ್
ಕಾಂಗ್ರೆಸ್ ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಕಳೆದರೂ ರಾಜ್ಯದಲ್ಲಿ ಹಿಂದಿನ ವಸುಂಧರಾ ರಾಜೇ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪೈಲಟ್ ಅವರು ತಮ್ಮದೇ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಾರನೇ ದಿನವೇ ಈ ರೀತಿಯ ಹೇಳಿಕೆ ನೀಡಿದ್ದಾರೆ.
ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತೇವೆ ಎಂದು ವಸುಂಧರಾ ರಾಜೇ ಸರ್ಕಾರಕ್ಕೆ ನಾವು ಸವಾಲು ಹಾಕಿದ್ದೆವು, ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಿ ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂಬ ನಿರೀಕ್ಷೆಯಲ್ಲಿ 2018ರಲ್ಲಿ ಜನ ನಮ್ಮನ್ನು ಅಧಿಕಾರಕ್ಕೆ ತಂದಿದ್ದರು. ಭ್ರಷ್ಟಾಚಾರದಲ್ಲಿ ತೊಡಗಿದ್ದ ಅಧಿಕಾರಿಗಳು, ಮುಖಂಡರ ವಿರುದ್ಧ ಕ್ರಮದ ಭರವಸೆ ನೀಡಿದ್ದೇವು ಎಂದು ಪೈಲಟ್ ಪಾಲಿಯಲ್ಲಿ ಕಿಸಾನ್ ರ್ಯಾಲಿಯಲ್ಲಿ ನಿನ್ನೆ ಹೇಳಿಕೆ ನೀಡಿದ್ದರು.
ಈ ವಾರದ ಆರಂಭದಲ್ಲಿ ಪೇಪರ್ ಸೋರಿಕೆ ಪ್ರಕರಣಗಳನ್ನು ವಾಮಾಚಾರ ಎಂದಿದ್ದ ಅಶೋಕ್ ಗೆಹ್ಲೋಟ್ ಅವರನ್ನು ಗೇಲಿ ಮಾಡಿದ್ದರು. ಪೇಪರ್ ಸೋರಿಕೆಯಾದಾಗ ಎಲ್ಲರಿಗೂ ಬೇಸರವಾಗಿದೆ, ಈ ವಿಚಾರದಲ್ಲಿ ಸಿಕ್ಕಿಬಿದ್ದವರ ವಿರುದ್ಧ ಕ್ರಮ ಕೈಗೊಳ್ಳುತ್ತಿರುವುದನ್ನು ಸ್ವಾಗತಿಸುತ್ತೇನೆ.ಆದರೆ ಪದೇಪದೇ ಇಂತಹ ಘಟನೆಗಳು ನಡೆದಾಗ ಜವಾಬ್ದಾರಿಗಳನ್ನು ಸರಿಪಡಿಸಬೇಕಾಗುತ್ತದೆ ಎಂದು ಸಚಿನ್ ಪೈಲಟ್ ಬುಧವಾರ ಹೇಳಿದ್ದರು.