ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರದಲ್ಲಿ 'ಅಂತಾರಾಷ್ಟ್ರೀಯ ಪಿತೂರಿ': ತನಿಖೆಗಾಗಿ ಆಗ್ರಹಿಸಿ ಅಮಿತ್ ಶಾಗೆ ಬಾರ್ ಅಸೋಸಿಯೇಷನ್ ಪತ್ರ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರದಲ್ಲಿ ಅಂತಾರಾಷ್ಟ್ರೀಯ ಪಿತೂರಿ ಆಯಾಮದಲ್ಲಿ ಸಮಗ್ರ ತನಿಖೆಗೆ ಆದೇಶಿಸುವಂತೆ ಅಖಿಲ ಭಾರತ ವಕೀಲರ ಸಂಘದ ಅಧ್ಯಕ್ಷರು ಹಾಗೂ ಹಿರಿಯ ವಕೀಲರಾದ ಡಾ. ಆದೀಶ್ ಸಿ ಅಗರ್ ವಾಲಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಈ ಸಾಕ್ಷ್ಯಚಿತ್ರ ಪ್ರಸಾರ ಮಾಡುವ ಯೂಟ್ಯೂಬ್ ಚಾನೆಲ್‌ಗಳು ಮತ್ತು ಟ್ವಿಟರ್ ಖಾತೆಗಳನ್ನು ನಿರ್ಬಂಧಿಸುವ ಸರ್ಕಾರದ ಕ್ರಮವನ್ನುಸ್ವಾಗತಿಸುತ್ತಿರುವ ಎಐಬಿಎ ಅಧ್ಯಕ್ಷರು, ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಾಧೀಶರು, ನ್ಯಾಯಶಾಸ್ತ್ರಜ್ಞರು ಮತ್ತು ತನಿಖಾಧಿಕಾರಿಗಳನ್ನು ಒಳಗೊಂಡ ತನಿಖಾ ತಂಡವನ್ನು ರಚಿಸುವಂತೆ ಪತ್ರದಲ್ಲಿ ಕೋರಿದ್ದಾರೆ.
ಈ ಸಾಕ್ಷ್ಯಚಿತ್ರದ ಹಿಂದಿರುವ ಕಾಣದ ಕೈಗಳು ಹಾಗೂ ಕಾಲ್ಪನಿಕ ಕಥೆ ಕಟ್ಟಲು ಸೇರಿಕೊಂಡಿರುವ ಮನಸ್ಸುಗಳನ್ನು ಪತ್ತೆ ಹಚ್ಚಿ, ಅವರ ಮೇಲೆ ದೂರು ದಾಖಲಿಸಬೇಕು ಎಂದು ಅವರು ಹೇಳಿದ್ದಾರೆ.
ಸಾಕ್ಷ್ಯಚಿತ್ರ ಎಂದು ಕರೆಯಲ್ಪಡುವ ಇದರಲ್ಲಿ ಯಾವುದೇ ಹೊಸದನ್ನು ತೋರಿಸಿಲ್ಲ ಅಥವಾ ಮಾತನಾಡಿಲ್ಲ. ಅದರ ಹೆಚ್ಚಿನ ವಿಷಯಗಳು ಸಾರ್ವಜನಿಕವಾಗಿ ಸಂಪೂರ್ಣವಾಗಿ ಚರ್ಚೆಯಾಗಿದ್ದು, ಸುಪ್ರೀಂಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳಿಂದ ತಿರಸ್ಕರಿಸಲ್ಪಟ್ಟಿವೆ. 20 ವರ್ಷಗಳ ಹಿಂದಿನ ಗುಜರಾತ್ ಗಲಭೆಯನ್ನು ಬಿಬಿಸಿ ಮತ್ತೆ ಮುಂಚೂಣಿಗೆ ತರಲು ಪ್ರಯತ್ನಿಸುತ್ತಿದೆ ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ ಹಾಗೂ ದೇಶದ ವರ್ಚಸ್ಸನ್ನು ಕಡಿಮೆಗೊಳಿಸಲು ದುರುದ್ದೇಶಪೂರಿತವಾಗಿ ಪ್ರಯತ್ನಿಸಲಾಗುತ್ತಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ತನಿಖೆಯ ಜೊತೆಗೆ, ಇದರ ಹಿಂದಿರುವವರನ್ನು ಗುರುತಿಸಲು ಮತ್ತು ಬಿಬಿಸಿ ಮತ್ತು ಹಿಡಿತದಲ್ಲಿರುವ ದಾಖಲೆಗಳನ್ನು ಪಡೆಯಲು ಭಾರತ ಸರ್ಕಾರದೊಂದಿಗೆ ಇನ್ನಷ್ಟು ಸಹಕರಿಸಲು ಯುಕೆ ಸರ್ಕಾರಕ್ಕೆ ಪತ್ರ ಬರೆಯುವಂತೆಯೂ ಬಾರ್ ಅಸೋಸಿಯೇಷನ್ ಅಧ್ಯಕ್ಷರು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ