ಹಿಜಾಬ್ ನಿಷೇಧ ವಿವಾದ: ವಿಚಾರಣೆಗೆ ತ್ರಿಸದಸ್ಯ ಪೀಠ ರಚಿಸಲು ಸುಪ್ರೀಂ ಕೋರ್ಟ್ ಪರಿಗಣನೆ

ಕರಾವಳಿಯಲ್ಲಿ ಆರಂಭವಾಗಿ ನಂತರ ರಾಜ್ಯಾದ್ಯಂತ ವ್ಯಾಪಿಸಿ ನ್ಯಾಯಾಲಯ ಮೆಟ್ಟಿಲೇರಿ ವಿಚಾರಣೆ ಹಂತದಲ್ಲಿರುವ ಹಿಜಾಬ್ ವಿವಾದ ಕುರಿತು ವಿಚಾರಣೆ ನಡೆಸಲು ತ್ರಿಸದಸ್ಯ ಪೀಠ ಸ್ಥಾಪಿಸಲು ಪರಿಗಣಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಹಿಜಾಬ್ ಧರಿಸಿರುವ ವಿದ್ಯಾರ್ಥಿನಿಯರು ಮತ್ತು ಸುಪ್ರೀಂ ಕೋರ್ಟ್ ನ ಸಂಗ್ರಹ ಚಿತ್ರ
ಹಿಜಾಬ್ ಧರಿಸಿರುವ ವಿದ್ಯಾರ್ಥಿನಿಯರು ಮತ್ತು ಸುಪ್ರೀಂ ಕೋರ್ಟ್ ನ ಸಂಗ್ರಹ ಚಿತ್ರ

ನವದೆಹಲಿ: ಕರಾವಳಿಯಲ್ಲಿ ಆರಂಭವಾಗಿ ನಂತರ ರಾಜ್ಯಾದ್ಯಂತ ವ್ಯಾಪಿಸಿ ನ್ಯಾಯಾಲಯ ಮೆಟ್ಟಿಲೇರಿ ವಿಚಾರಣೆ ಹಂತದಲ್ಲಿರುವ ಹಿಜಾಬ್ ವಿವಾದ ಕುರಿತು ವಿಚಾರಣೆ ನಡೆಸಲು ತ್ರಿಸದಸ್ಯ ಪೀಠ ಸ್ಥಾಪಿಸಲು ಪರಿಗಣಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. 

ಈ ಹಿಂದೆ ಸುಪ್ರೀಂ ಕೋರ್ಟ್ ನಲ್ಲಿ ಹಿಜಾಬ್ ವಿವಾದ ಕುರಿತು ವಿಭಜಿತ ತೀರ್ಪು ಬಂದಿತ್ತು. ಅದರ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿದ್ದು ವಿಚಾರಣೆಗೆ ತ್ರಿಸದಸ್ಯ ಪೀಠವನ್ನು ಸ್ಥಾಪಿಸಲು ಪರಿಗಣಿಸುವುದಾಗಿ ಸುಪ್ರೀಂ ಕೋರ್ಟ್ ಇಂದು ಹೇಳಿದೆ.

ಫೆಬ್ರವರಿ 6 ರಿಂದ ರಾಜ್ಯದಲ್ಲಿ ಕೆಲವು ತರಗತಿಗಳಿಗೆ ನಿಗದಿಯಾಗಿರುವ ಪ್ರಾಯೋಗಿಕ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಮಧ್ಯಂತರ ಆದೇಶದ ಅಗತ್ಯವಿದೆ ಎಂದು ಹಿರಿಯ ವಕೀಲರಾದ ಮೀನಾಕ್ಷಿ ಅರೋರಾ ಅವರ ಸಲ್ಲಿಕೆಗಳನ್ನು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ವಿ ರಾಮಸುಬ್ರಮಣಿಯನ್ ಮತ್ತು ಜೆಬಿ ಪಾರ್ದಿವಾಲಾ ಅವರನ್ನೊಳಗೊಂಡ ಪೀಠವು ಗಮನಿಸಿದೆ. 

"ಇದು ಮುಸ್ಲಿಂ ವಿದ್ಯಾರ್ಥಿನಿಯರು ತಲೆಗೆ ಧರಿಸುವ ಸ್ಕಾರ್ಫ್ ಬಟ್ಟೆಯ ವಿಚಾರವಾಗಿದೆ. ವಿದ್ಯಾರ್ಥಿಗಳಿಗೆ ಫೆಬ್ರವರಿ 6ರಿಂದ ಪ್ರಾಯೋಗಿಕ ಪರೀಕ್ಷೆಗಳಿವೆ. ಅಷ್ಟರೊಳಗೆ ಮಧ್ಯಂತರ ಆದೇಶ ನೀಡಿದರೆ ಅವರು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುತ್ತದೆ ಎಂದು ಹಿರಿಯ ವಕೀಲರು ಹೇಳಿದರು. 

ಅದಕ್ಕೆ ಮುಖ್ಯ ನ್ಯಾಯಮೂರ್ತಿಗಳು, "ನಾನು ಈ ಬಗ್ಗೆ ಪರಿಶೀಲಿಸುತ್ತೇನೆ. ಇದು ತ್ರಿಸದಸ್ಯ ಪೀಠದ ವಿಷಯವಾಗಿದೆ. ವಿಚಾರಣೆಗೆ ದಿನಾಂಕವನ್ನು ನಿಗದಿಪಡಿಸುತ್ತೇವೆ" ಎಂದು ಹೇಳಿದರು. 

ಹಿಜಾಬ್ ತೀರ್ಪು: ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಾಧೀಶರ ಪೀಠವು ಕಳೆದ ವರ್ಷ ಅಕ್ಟೋಬರ್ 13 ರಂದು ಹಿಜಾಬ್ ವಿವಾದದಲ್ಲಿ ವಿರುದ್ಧ ತೀರ್ಪುಗಳನ್ನು ನೀಡಿತ್ತು. ಕರ್ನಾಟಕದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ನಿಷೇಧಿಸಿದ ಪ್ರಕರಣದ ತೀರ್ಪು ನೀಡಲು ಸೂಕ್ತ ಪೀಠವನ್ನು ರಚಿಸುವಂತೆ ಮುಖ್ಯ ನ್ಯಾಯಾಧೀಶರನ್ನು ನ್ಯಾಯಪೀಠ ಒತ್ತಾಯಿಸಿತು. 

ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು ನಿವೃತ್ತರಾದ ನಂತರ ಮಾರ್ಚ್ 15 ರಂದು ಕರ್ನಾಟಕ ಹೈಕೋರ್ಟ್ ನಿಷೇಧವನ್ನು ತೆಗೆದುಹಾಕಲು ನಿರಾಕರಿಸಿದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿಗಳನ್ನು ವಜಾಗೊಳಿಸಿದ್ದರೆ, ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರು ಶಾಲೆ ಮತ್ತು ಕಾಲೇಜುಗಳಲ್ಲಿ ಎಲ್ಲಿಯೂ ಹಿಜಾಬ್ ಧರಿಸುವುದಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಹೇಳಿದ್ದರು. 

ಸುಪ್ರೀಂ ಕೋರ್ಟ್ ವಿಭಜನೆಯ ತೀರ್ಪಿನಿಂದಾಗಿ ಅಂತಿಮ ತೀರ್ಪು ಬರುವವರೆಗೆ ಕರ್ನಾಟಕ ಹೈಕೋರ್ಟ್ ನ ತೀರ್ಪು ರಾಜ್ಯದ ಶಾಲೆಗಳಲ್ಲಿ ಚಾಲ್ತಿಯಲ್ಲಿರುತ್ತದೆ. 

ಕಳೆದ ವರ್ಷ ಮಾರ್ಚ್ 15 ರಂದು, ಉಡುಪಿಯ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರ ಒಂದು ತಂಡವು ತರಗತಿಯೊಳಗೆ ಹಿಜಾಬ್ ಧರಿಸಲು ಅನುಮತಿ ನೀಡುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತು, ಇದು ಇಸ್ಲಾಂ ಧರ್ಮದ ಅಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ ಎಂದು ತೀರ್ಪು ನೀಡಿತು. 

ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿದ ಕರ್ನಾಟಕ ಸರ್ಕಾರ ಕಳೆದ ವರ್ಷ ಫೆಬ್ರವರಿ 5ರಂದು ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಎತ್ತಿಹಿಡಿದಿತ್ತು. 10 ದಿನಗಳ ವಿಚಾರಣೆ ಬಳಿಕ ಅದು, ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಗುರುತುಗಳನ್ನು ಧರಿಸುವುದು ಸರಿಯಲ್ಲ ಎಂದು ಹೇಳಿತ್ತು. ಅದರ ವಿರುದ್ಧ ಸುಪ್ರೀಂಕೋರ್ಟ್‌ಗೆ ಅನೇಕ ಅರ್ಜಿಗಳು ಸಲ್ಲಿಕೆಯಾಗಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com