ಜೆಎನ್‌ಯುಎಸ್‌ಯು ಕಚೇರಿಯಲ್ಲಿ ಇಂದು ರಾತ್ರಿ 9 ಗಂಟೆಗೆ ಪ್ರಧಾನಿ ಮೋದಿ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಕುರಿತಾದ ಬಿಬಿಸಿ ನಿರ್ಮಿಸಿರುವ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ ಹೆಸರಿನ ವಿವಾದಾತ್ಮಕ ಸಾಕ್ಷ್ಯಚಿತ್ರವನ್ನು ಮಂಗಳವಾರ ರಾತ್ರಿ ತನ್ನ ಕಚೇರಿ ಆವರಣದಲ್ಲಿ ಪ್ರದರ್ಶಿಸುವುದಾಗಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ (ಜೆಎನ್‌ಯುಎಸ್‌ಯು) ಸದಸ್ಯರೊಬ್ಬರು ಸೋಮವಾರ ತಿಳಿಸಿದ್ದಾರೆ.
Published: 24th January 2023 10:34 AM | Last Updated: 24th January 2023 03:49 PM | A+A A-

ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಕುರಿತಾದ ಬಿಬಿಸಿ ನಿರ್ಮಿಸಿರುವ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ ಹೆಸರಿನ ವಿವಾದಾತ್ಮಕ ಸಾಕ್ಷ್ಯಚಿತ್ರವನ್ನು ಮಂಗಳವಾರ ರಾತ್ರಿ ತನ್ನ ಕಚೇರಿ ಆವರಣದಲ್ಲಿ ಪ್ರದರ್ಶಿಸುವುದಾಗಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ (ಜೆಎನ್‌ಯುಎಸ್‌ಯು) ಸದಸ್ಯರೊಬ್ಬರು ಸೋಮವಾರ ತಿಳಿಸಿದ್ದಾರೆ.
ಸದಸ್ಯರ ಪ್ರಕಾರ, ಸಾಕ್ಷ್ಯಚಿತ್ರವನ್ನು ಮಂಗಳವಾರ ರಾತ್ರಿ 9 ಗಂಟೆಗೆ ಜೆಎನ್‌ಯುಎಸ್‌ಯು ಕಚೇರಿಯಲ್ಲಿ ಪ್ರದರ್ಶಿಸಲು ನಿರ್ಧರಿಸಲಾಗಿದೆ ಮತ್ತು ನಂತರ ಚರ್ಚೆ ನಡೆಯಲಿದೆ.
ಸ್ಕ್ರೀನಿಂಗ್ ಕುರಿತು ಮಾಹಿತಿಯನ್ನು ಹಂಚಿಕೊಂಡ ಜೆಎನ್‌ಯುಎಸ್‌ಯು ಅಧ್ಯಕ್ಷೆ ಐಶೆ ಘೋಷ್, ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿ ಕರಪತ್ರವನ್ನು ಹಂಚಿಕೊಂಡಿದ್ದಾರೆ ಮತ್ತು 'ಸಾಕ್ಷ್ಯಚಿತ್ರ ಪ್ರದರ್ಶನಕ್ಕಾಗಿ ನಮ್ಮೊಂದಿಗೆ ಸೇರಿ, ಇದನ್ನು ಅತಿದೊಡ್ಡ 'ಪ್ರಜಾಪ್ರಭುತ್ವ'ದ 'ಚುನಾಯಿತ ಸರ್ಕಾರ' ನಿಷೇಧಿಸಿದೆ ಎಂದು ಬರೆದಿದ್ದಾರೆ.
'ಜೆಎನ್‌ಯುಎಸ್‌ಯು ಹೆಸರಿನಲ್ಲಿ ವಿದ್ಯಾರ್ಥಿಗಳ ಗುಂಪೊಂದು ಜನವರಿ 24 ರಂದು (ಮಂಗಳವಾರ) ರಾತ್ರಿ 9 ಗಂಟೆಗೆ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲು ಕರಪತ್ರವನ್ನು ಬಿಡುಗಡೆ ಮಾಡಿರುವುದು ಆಡಳಿತದ ಗಮನಕ್ಕೆ ಬಂದಿದೆ. ಸಾಕ್ಷ್ಯಚಿತ್ರ ಪ್ರದರ್ಶಿಸಲು ವಿದ್ಯಾರ್ಥಿ ಸಂಘಟನೆಯು ತನ್ನ ಅನುಮತಿ ಪಡೆದಿಲ್ಲ. ಇಂತಹ ಅನಧಿಕೃತ ಚಟುವಟಿಕೆಯು ವಿಶ್ವವಿದ್ಯಾಲಯದ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ಉಂಟು ಮಾಡುತ್ತದೆ. ಹೀಗಾಗಿ ಪ್ರದರ್ಶನವನ್ನು ತಕ್ಷಣವೇ ರದ್ದುಪಡಿಸಬೇಕು ಎಂದು ವಿಶ್ವವಿದ್ಯಾಲಯದ ಆಡಳಿತವು ವಿದ್ಯಾರ್ಥಿ ಸಂಘಟನೆಗೆ ಸೂಚಿಸಿದೆ.
ಇದನ್ನೂ ಓದಿ: ಹೈದರಾಬಾದ್ ವಿವಿ ಕ್ಯಾಂಪಸ್‌ನಲ್ಲಿ 'ಪ್ರಧಾನಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ' ಪ್ರದರ್ಶನ
ಉದ್ದೇಶಿತ ಕಾರ್ಯಕ್ರಮವನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ. ವಿಫಲವಾದರೆ, ವಿಶ್ವವಿದ್ಯಾಲಯದ ನಿಯಮಗಳ ಅನುಸಾರ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ’ ಎಂದೂ ಎಚ್ಚರಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಐಶೆ, ಜೆಎನ್‌ಯುಎಸ್‌ಯು ಕಚೇರಿಯಲ್ಲಿ ಯಾವುದೇ ಕಾರ್ಯಕ್ರಮ ನಡೆಸಲು ಯೂನಿಯನ್‌ಗೆ ವಾರ್ಸಿಟಿಯಿಂದ ಅನುಮತಿ ಅಗತ್ಯವಿಲ್ಲದ ಕಾರಣ ನಾವು ಸ್ಕ್ರೀನಿಂಗ್ ಅನ್ನು ರದ್ದುಗೊಳಿಸುವುದಿಲ್ಲ ಎಂದು ಹೇಳಿದರು.
ಈಮಧ್ಯೆ, ಸರ್ಕಾರವು ಸಾಕ್ಷ್ಯಚಿತ್ರವನ್ನು 'ಪ್ರಚಾರದ ತುಣುಕು' ಎಂದು ಉಲ್ಲೇಖಿಸಿದೆ ಮತ್ತು ಅದರ ಲಿಂಕ್‌ಗಳನ್ನು ಹೊಂದಿರುವ ಹಲವಾರು ಯೂಟ್ಯೂಬ್ ವಿಡಿಯೋಗಳು ಮತ್ತು ಟ್ವಿಟರ್ ಸಂದೇಶಗಳನ್ನು ನಿರ್ಬಂಧಿಸಲು ಸೂಚನೆಗಳನ್ನು ನೀಡಿದೆ ಎಂದು ವರದಿಯಾಗಿದೆ.