ನನ್ನ 44-ದಿನದ ವೇತನ ಪಡೆಯಲು ಸಹಾಯ ಮಾಡಿ: ಗಣರಾಜ್ಯೋತ್ಸವ ಪರೇಡ್‌ನಲ್ಲಿ ವಿಶೇಷ ಆಹ್ವಾನಿತ ಕಾರ್ಮಿಕನ ಮನವಿ
ಪರಿಷ್ಕೃತ ಕರ್ತವ್ಯ ಪಥದಲ್ಲಿ ಈ ವರ್ಷದ ಗಣರಾಜ್ಯೋತ್ಸವ ಪರೇಡ್ ವೀಕ್ಷಿಸಲು ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ ತೋಟಗಾರಿಕೆ ಕೆಲಸ ಮಾಡುವ ಸುಖ್ ನಂದನ್ ಅವರು, ತಮ್ಮ ಬಾಕಿ ವೇತನ ಪಡೆಯಲು ಸಹಾಯ ಮಾಡುವಂತೆ...
Published: 27th January 2023 03:29 PM | Last Updated: 27th January 2023 10:13 PM | A+A A-

ಸುಖ್ ನಂದನ್
ನವದೆಹಲಿ: ಪರಿಷ್ಕೃತ ಕರ್ತವ್ಯ ಪಥದಲ್ಲಿ ಈ ವರ್ಷದ ಗಣರಾಜ್ಯೋತ್ಸವ ಪರೇಡ್ ವೀಕ್ಷಿಸಲು ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ ತೋಟಗಾರಿಕೆ ಕೆಲಸ ಮಾಡುವ ಸುಖ್ ನಂದನ್ ಅವರು, ತಮ್ಮ ಬಾಕಿ ವೇತನ ಪಡೆಯಲು ಸಹಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
ಸೆಂಟ್ರಲ್ ವಿಸ್ತಾ ಯೋಜನೆಯ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದವರನ್ನು ಮತ್ತು ಇಂಡಿಯಾ ಗೇಟ್ ಸುತ್ತಲೂ ಹಾಗೂ ಕರ್ತವ್ಯ ಪಥದ ಉದ್ದಕ್ಕೂ ನಿರ್ವಹಣಾ ಚಟುವಟಿಕೆಗಳಲ್ಲಿ ನಿರತರಾಗಿರುವ ಹಲವು ಕೆಲಸಗಾರರು ಮತ್ತು ಕಾರ್ಮಿಕರಿಗೆ ಈ ಬಾರಿ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ವಿಶೇಷ ಪಾಸ್‌ಗಳನ್ನು ನೀಡಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಇತರ ಗಣ್ಯರು ಕುಳಿತಿದ್ದ ಪ್ರಮುಖ ವೇದಿಕೆಯ ಎದುರಿನ(ಕಾರ್ತವ್ಯ ಪಥದ ಇನ್ನೊಂದು ಬದಿಯಲ್ಲಿ) ಆವರಣ ಸಂಖ್ಯೆ 17 ಅನ್ನು ಅವರಿಗೆ ನಿಗದಿಪಡಿಸಲಾಗಿತ್ತು.
ಮಧ್ಯಪ್ರದೇಶದ ನಿವಾರಿ ಜಿಲ್ಲೆಯವರಾದ ನಂದನ್ ಅವರು ಪ್ರಧಾನಿಯನ್ನು ಇಷ್ಟು ಹತ್ತಿರದಿಂದ ನೋಡಿದ್ದಕ್ಕೆ ತನಗೆ ತುಂಬಾ ಸಂತೋಷವಾಯಿತು. ಪ್ರಧಾನಿಯವರು ತಮ್ಮ ಆವರಣದ ಹತ್ತಿರ ಬಂದು ಕೈ ಬೀಸಿದಾಗ ರೋಮಾಂಚನವಾಯಿತು ಎಂದಿದ್ದಾರೆ.
ಇದನ್ನು ಓದಿ: ಅಗ್ನಿವೀರರು, ಮಹಿಳಾ ತಂಡ: ಹಲವು ಪ್ರಥಮಗಳಿಗೆ ಸಾಕ್ಷಿಯಾದ 74ನೇ ಗಣರಾಜ್ಯೋತ್ಸವ
"ಈ ಕಾರ್ಯಕ್ರಮದ ಭಾಗವಾಗಲು ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ನಾನು ವಿಶೇಷ ಅತಿಥಿಗಳೊಂದಿಗೆ ನಾನು ಆಯ್ಕೆಯಾಗುತ್ತೇನೆ ಎಂದು ಯೋಚಿಸಿರಲಿಲ್ಲ" ಎಂದು 44 ವರ್ಷದ ನಂದನ್ ಹೇಳಿದ್ದಾರೆ.
ಆದರೆ, ನಿಮಗೆ ಒಂದು ಅವಕಾಶ ನೀಡಿದರೆ ಪ್ರಧಾನಿ ಮೋದಿ ಅವರಿಗೆ ಏನನನ್ನು ಕೇಳಲು ಬಯಸುತ್ತಿರಿ ಎಂದು ಕೇಳಿದಾಗ, "ಕಳೆದ ಬಾರಿಯ ನನ್ನ ಗುತ್ತಿಗೆದಾರರು 44 ದಿನಗಳ ಕೂಲಿ ನೀಡಲು ನಿರಾಕರಿಸಿದ್ದಾರೆ. ನನ್ನ ಬಾಕಿ ವೇತನ ಪಡೆಯಲು ನನಗೆ ಸಹಾಯ ಮಾಡುವಂತೆ ನಾನು ಪ್ರಧಾನಿ ಮೋದಿಯವರನ್ನು ವಿನಂತಿಸುತ್ತೇನೆ" ಎಂದು ಹೇಳಿದ್ದಾರೆ.
ನಂದನ್ ಕಳೆದ ಎರಡು ತಿಂಗಳಿಂದ ಇಂಡಿಯಾ ಗೇಟ್‌ನಲ್ಲಿರುವ ತೋಟಗಾರಿಕೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಕ್ಕು ಮುನ್ನ ಆಂಧ್ರ ಭವನದಲ್ಲಿ ಗುತ್ತಿಗೆದಾರರೊಬ್ಬರ ಅಡಿಯಲ್ಲಿ ಕೆಲಸ ಮಾಡುತ್ತಿದ್ದರು.
"44 ದಿನ ಕೆಲಸ ಮಾಡಿದ್ದಕ್ಕೆ ಸಂಬಳ ನೀಡಲು ಅವರು ನಿರಾಕರಿಸಿದ್ದಾರೆ. ನಾನು 44 ದಿನ ಕೆಲಸ ಮಾಡಿದ್ದೇನೆ ಎಂದು ಸಾಬೀತುಪಡಿಸುವ ಹಾಜರಾತಿ ರಿಜಿಸ್ಟರ್‌ನ ಪ್ರತಿ ನನ್ನ ಬಳಿ ಇದೆ" ಎಂದು ನಂದನ್ ಹೇಳಿದ್ದಾರೆ. ಸುಖ್ ನಂದನ್ ತಮ್ಮ ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ಇಂಡಿಯಾ ಗೇಟ್ ಬಳಿಯ ತಾತ್ಕಾಲಿಕ ಟೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ.