ಮಹಾರಾಷ್ಟ್ರ ಬಸ್ ದುರಂತ: ಅಪಘಾತ ತಡೆಗಟ್ಟಲು ಕ್ರಮ- ಸಿಎಂ ಏಕನಾಥ್ ಶಿಂಧೆ
25 ಮಂದಿಯ ಸಾವಿಗೆ ಕಾರಣವಾದ ಸಮೃದ್ಧಿ ಎಕ್ಸ್‌ಪ್ರೆಸ್‌ವೇ ಬಸ್ ದುರಂತದ ಬೆನ್ನಲ್ಲೇ ಇಂತಹ ಅಪಘಾತಗಳನ್ನು ತಪ್ಪಿಸಲು ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಹೇಳಿದ್ದಾರೆ.
Published: 01st July 2023 11:11 PM | Last Updated: 03rd July 2023 01:32 PM | A+A A-

ಅಪಘಾತ ಸ್ಥಳ ಪರಿಶೀಲಿಸಿದ ಸಿಎಂ ಶಿಂಧೆ
ಮುಂಬೈ: 25 ಮಂದಿಯ ಸಾವಿಗೆ ಕಾರಣವಾದ ಸಮೃದ್ಧಿ ಎಕ್ಸ್‌ಪ್ರೆಸ್‌ವೇ ಬಸ್ ದುರಂತದ ಬೆನ್ನಲ್ಲೇ ಇಂತಹ ಅಪಘಾತಗಳನ್ನು ತಪ್ಪಿಸಲು ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಹೇಳಿದ್ದಾರೆ.
ಅಪಘಾತ ಸಂಭವಿಸಿದ ಸಮೃದ್ಧಿ ಎಕ್ಸ್‌ಪ್ರೆಸ್‌ವೇ ಬುಲ್ಧಾನಾ ಜಿಲ್ಲೆಯ ಪಿಂಪಲ್ಖುಟಾ ಗ್ರಾಮಕ್ಕೆ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಜೊತೆ ಆಗಮಿಸಿ ಪರಿಶೀಲನೆ ನಡೆಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು, ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ನಾಗ್ಪುರ-ಮುಂಬೈನಲ್ಲಿ ಅಪಘಾತಗಳನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಇದೇ ವೇಳೆ ಪೊಲೀಸ್ ಸಿಬ್ಬಂದಿ, ಜಿಲ್ಲಾಡಳಿತ ಅಧಿಕಾರಿಗಳು ಮತ್ತು ಸ್ಥಳೀಯ ನಿವಾಸಿಗಳೊಂದಿಗೆ ಸಂವಾದ ನಡೆಸಿದ ಅವರು ದುರಂತದ ಅನುಕ್ರಮದ ಬಗ್ಗೆ ತಿಳಿಸಿದರು. ಇದೇ ವೇಳೆ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿಂಧೆ, ಎಲ್ಲಾ ವಾಹನಗಳ ಚಾಲಕರು ವೇಗದ ಮಿತಿಗೆ ಸಂಬಂಧಿಸಿದ ನಿಯಮಗಳನ್ನು ಪಾಲಿಸಬೇಕು. ಸಮೃದ್ಧಿ ಎಕ್ಸ್ ಪ್ರೆಸ್ ವೇಯಲ್ಲಿ ಇಲ್ಲಿಯವರೆಗೆ ಮಾನವನ ತಪ್ಪುಗಳಿಂದಲೇ ಹೆಚ್ಚಿನ ಅಪಘಾತಗಳು ಸಂಭವಿಸಿವೆ. ಆದರೆ ಸರ್ಕಾರ ಈ ಅಪಘಾತವನ್ನು ಗಂಭೀರವಾಗಿ ಪರಿಗಣಿಸಿದ್ದು, ಅಪಘಾತಗಳು ಮತ್ತು ದೋಷಗಳು ಸಂಭವಿಸದಂತೆ ಕ್ರಮಕೈಗೊಳ್ಳಲಾಗುವುದು’ ಎಂದರು.
ಅಪಘಾತಗಳನ್ನು ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳುವ ಮೊದಲು ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುವುದು. ಇಂದಿನ ಅಪಘಾತದಲ್ಲಿ 25 ಜನರ ಸಾವು ದುರದೃಷ್ಟಕರವಾಗಿದೆ. ಬಸ್‌ನ ಬಾಗಿಲು ಲಾಕ್ ಆಗಿದ್ದರಿಂದ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ಎಂಟು ಜನರು ಹೊರಗೆ ಬಂದು ಜೀವ ಉಳಿಸಿಕೊಂಡಿದ್ದಾರೆ. ಕ್ಷಿಪ್ರ ಕಾರ್ಯಾಚರಣೆ ವಾಹನಗಳು, ಅಗ್ನಿಶಾಮಕ ದಳ ಮತ್ತು ಎಕ್ಸ್‌ಪ್ರೆಸ್‌ವೇಯಲ್ಲಿದ್ದ ಪೊಲೀಸರು ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ತಲುಪಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಮಹಾರಾಷ್ಟ್ರ: ಚಲಿಸುತ್ತಿದ್ದ ಬಸ್'ಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು 25 ಮಂದಿ ದುರ್ಮರಣ, 8 ಪ್ರಯಾಣಿಕರಿಗೆ ಗಾಯ
5 ಲಕ್ಷ ರೂ ಪರಿಹಾರ
ಇದೇ ವೇಳೆ ಸಿಎಂ ಶಿಂಧೆ ಬಸ್ ದುರಂತದ ಸಂತ್ರಸ್ಥರಿಗೆ ಪರಿಹಾರ ಘೋಷಣೆ ಮಾಡಿದ್ದು, ತಲಾ 5 ಲಕ್ಷ ರೂ ನೀಡುವ ಭರವಸೆ ನೀಡಿದ್ದಾರೆ.
ಸಹಾಯವಾಣಿ
ಇನ್ನು ಬುಲ್ಧಾನ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯು ಪ್ರಯಾಣಿಕರ ಬಗ್ಗೆ ಮಾಹಿತಿಗಾಗಿ ಎರಡು ಸಹಾಯವಾಣಿ ಸಂಖ್ಯೆಗಳ ತೆರೆದಿದ್ದು, 7020435954 ಮತ್ತು 07262242683 ಸಂಖ್ಯೆಗಳಿಗೆ ಕರೆ ಮಾಡಿ ಸಂತ್ರಸ್ಥರ ಕುರಿತು ಮಾಹಿತಿ ಪಡೆಯಬಹುದಾಗಿದೆ.