ಮೂತ್ರ ವಿಸರ್ಜನೆ ಪ್ರಕರಣ: ಸಂತ್ರಸ್ಥನಿಗೆ 6.5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ ಸರ್ಕಾರ, ಆರೋಪಿ ಮನೆ ಧ್ವಂಸಕ್ಕೆ ಬ್ರಾಹ್ಮಣ ಸಮುದಾಯ ವಿರೋಧ

ಮಧ್ಯ ಪ್ರದೇಶದ ಮೂತ್ರ ವಿಸರ್ಜನೆ ಮಾಡಿದ ಪ್ರಕರಣದ ಸಂತ್ರಸ್ಥ ಬಡಕಟ್ಟು ಜನಾಂಗದ ವ್ಯಕ್ತಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಿದ್ದು, ಪ್ರಕರಣದ ಆರೋಪಿ ಮನೆ ಧ್ವಂಸಗೊಳಿಸಿದ ಸರ್ಕಾರದ ಕ್ರಮವನ್ನು ಮಧ್ಯ ಪ್ರದೇಶದ ಬ್ರಾಹ್ಮಣ ಸಮುದಾಯ ವಿರೋಧಿಸಿದೆ.
ಸಿಎಂ ಶಿವರಾಜ್ ಸಿಂಗ್ ಚೌಹ್ವಾಣ್
ಸಿಎಂ ಶಿವರಾಜ್ ಸಿಂಗ್ ಚೌಹ್ವಾಣ್
Updated on

ಭೋಪಾಲ್: ಮಧ್ಯ ಪ್ರದೇಶದ ಮೂತ್ರ ವಿಸರ್ಜನೆ ಮಾಡಿದ ಪ್ರಕರಣದ ಸಂತ್ರಸ್ಥ ಬಡಕಟ್ಟು ಜನಾಂಗದ ವ್ಯಕ್ತಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಿದ್ದು, ಪ್ರಕರಣದ ಆರೋಪಿ ಮನೆ ಧ್ವಂಸಗೊಳಿಸಿದ ಸರ್ಕಾರದ ಕ್ರಮವನ್ನು ಮಧ್ಯ ಪ್ರದೇಶದ ಬ್ರಾಹ್ಮಣ ಸಮುದಾಯ ವಿರೋಧಿಸಿದೆ.

ಹೌದು.. ಇಡೀ ದೇಶವೇ ತಲೆತಗ್ಗಿಸುವಂತೆ ಮಾಡಿದ್ದ ಮೂತ್ರ ವಿಸರ್ಜನೆ ಪ್ರಕರಣದ ಸಂತ್ರಸ್ಥ 36 ವರ್ಷದ ಬುಡಕಟ್ಟು ಕಾರ್ಮಿಕ ದಶ್ಮತ್ ರಾವತ್ ಗೆ ಮಧ್ಯಪ್ರದೇಶ ಸರ್ಕಾರ 6.5 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದು, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ನಿರ್ದೇಶನದ ಮೇರೆಗೆ ಸಿಧಿ ಜಿಲ್ಲಾಡಳಿತದಿಂದ 6.5 ಲಕ್ಷ ರೂಪಾಯಿಗಳನ್ನು (ಅವರ ಅಪೂರ್ಣ ಮನೆಯನ್ನು ನಿರ್ಮಿಸಲು 1.5 ಲಕ್ಷ ರೂಪಾಯಿ ಸೇರಿದಂತೆ) ಪರಿಹಾರವಾಗಿ ಒದಗಿಸಲಾಗಿದೆ ಎಂದು ಸಿಎಂ ಸಚಿವಾಲಯ ಹೇಳಿದೆ.

ಗುರುವಾರ ಬೆಳಗ್ಗೆ ಭೋಪಾಲ್‌ನಲ್ಲಿರುವ ತಮ್ಮ ಅವರ ಅಧಿಕೃತ ನಿವಾಸದಲ್ಲಿ ದೈನಂದಿನ ಕೂಲಿ ಕಾರ್ಮಿಕ ದಶ್ಮತ್ ಅವರನ್ನು ಭೇಟಿ ಮಾಡಿದ್ದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸಂತ್ರಸ್ಥನ ಕಾಲು ತೊಳೆದು ಅವರೊಂದಿಗೆ ಉಪಾಹಾರ ಸೇವಿಸಿ ಘಟನೆ ಸಂಬಂಧ ಖುದ್ಧು ಕ್ಷಮೆಯಾಚಿಸಿದರು. ಇದೇ ವೇಳೆ ದಶಮತ್ ಅವರನ್ನು ಸ್ನೇಹಿತ 'ಸುದಾಮ' ಎಂದು ಕರೆದ ಸಿಎಂ, ಅವರ ಪತ್ನಿಯಿಂದ ದೂರವಾಣಿ ಮೂಲಕ ಕುಟುಂಬದ ಯೋಗಕ್ಷೇಮ ವಿಚಾರಿಸಿದರು ಮತ್ತು ಅವರ ನಿರ್ಮಾಣ ಹಂತದಲ್ಲಿರುವ ಮನೆಯನ್ನು ಪೂರ್ಣಗೊಳಿಸಲು ಸಹಾಯ ಮಾಡುವುದು ಸೇರಿದಂತೆ ಕುಟುಂಬಕ್ಕೆ ಎಲ್ಲಾ ಸಹಾಯ ಮಾಡುವ ಭರವಸೆ ನೀಡಿದರು.

ಆರೋಪಿ ಮನೆ ಧ್ವಂಸಕ್ಕೆ ಬ್ರಾಹ್ಮಣ ಸಮುದಾಯ ವಿರೋಧ
ಇನ್ನು ಮೂತ್ರ ವಿಸರ್ಜನೆ ಪ್ರಕರಣದ ಆರೋಪಿ ಪ್ರವೇಶ್ ಶುಕ್ಲಾ ಮನೆಯನ್ನು ಧ್ವಂಸ ಮಾಡಿದ ಸರ್ಕಾರದ ಕ್ರಮವನ್ನು ಮಧ್ಯ ಪ್ರದೇಶದ ಬ್ರಾಹ್ಮಣ ಸಮುದಾಯ ವಿರೋಧಿಸಿದ್ದು, ಶುಕ್ಲಾ ಮಾಡಿದ್ದು ಅಕ್ಷ್ಯಮ್ಯ.. ಆದರೆ ಆತನ ದುರ್ವರ್ತನೆಗೆ ಕುಟುಂಬದ ಸದಸ್ಯರನ್ನು ಶಿಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಅಲ್ಲದೆ ಅಖಿಲ ಭಾರತೀಯ ಬ್ರಾಹ್ಮಣ ಸಮಾಜದ ಮಧ್ಯಪ್ರದೇಶ ಘಟಕವು ಅವರ ತಂದೆಗೆ ಸೇರಿದ ಮನೆಯನ್ನು ಕೆಡವಿರುವುದನ್ನು ವಿರೋಧಿಸಿ ಹೈಕೋರ್ಟ್‌ಗೆ ಹೋಗುವುದಾಗಿ ಹೇಳಿದೆ.

ಈ ಬಗ್ಗೆ ಮಾತನಾಡಿದ ಸಂಘಟನೆಯ ರಾಜ್ಯ ಮುಖ್ಯಸ್ಥ ಪಂಡಿತ್ ಪುಷ್ಪೇಂದ್ರ ಮಿಶ್ರಾ, 'ಪ್ರವೇಶ್ ಶುಕ್ಲಾ ಅವರಂತಹ ವ್ಯಕ್ತಿ ಯಾವುದೇ ಜಾತಿ ಮತ್ತು ಸಮಾಜದಲ್ಲಿ ಸ್ವೀಕಾರಾರ್ಹವಲ್ಲ. ಅವರ ಕೃತ್ಯ ಅತ್ಯಂತ ಶೋಚನೀಯವಾಗಿದೆ. ಆದರೆ ಬೇರೆಯವರ ಕೃತ್ಯಕ್ಕೆ ಇತರರನ್ನು ಶಿಕ್ಷಿಸುವುದು ಕಾನೂನುಬದ್ಧವಾಗಿದೆಯೇ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಆರೋಪಿಯ ಕುಟುಂಬಕ್ಕೆ ಸಂಪೂರ್ಣ ನೆರವು ನೀಡುವುದಾಗಿ ನಾನು ಭರವಸೆ ನೀಡುತ್ತೇನೆ ಮತ್ತು ಶುಕ್ಲಾ ಕುಟುಂಬಕ್ಕೆ ಸಹಾಯ ಮಾಡುವಂತೆ ಸಮಾಜದ ಎಲ್ಲಾ ಜಿಲ್ಲಾಧ್ಯಕ್ಷರನ್ನು ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.

ಪ್ರಕರಣದ ಹಿನ್ನೆಲೆ
ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಬುಡಕಟ್ಟು ಜನಾಂಗದ ವ್ಯಕ್ತಿಯ ಮುಖ ಮೇಲೆ ಮೂತ್ರ ಮಾಡಿರುವ ವಿಡಿಯೋ ವೈರಲ್​ ಇತ್ತೀಚೆಗೆ ಆಗಿತ್ತು. ಇದರ ನಂತರ ಘಟನೆ ಸಂಬಂಧಿಸಿದ ಆರೋಪಿಯ ಪ್ರವೇಶ್ ಶುಕ್ಲಾ ರಾವತ್ ಎಂಬಾತನನ್ನು ಬಂಧಿಸಲಾಗಿದೆ. ದಶಮತ್‌ನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಕ್ಕಾಗಿ 'ಬಿಜೆಪಿ ವ್ಯಕ್ತಿ' ಪ್ರವೇಶ್ ಶುಕ್ಲಾ ಅವರನ್ನು ಬುಧವಾರ ಬೆಳಗ್ಗೆ ಬಂಧಿಸಲಾಗಿದೆ. ಇದೀಗ ರೇವಾ ಸೆಂಟ್ರಲ್ ಜೈಲಿನಲ್ಲಿರುವ ಪ್ರವೇಶ್ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಸಹ ಅನ್ವಯಿಸಲಾಗಿದೆ. ಹಲವು ತಿಂಗಳ ಹಿಂದೆ ನಡೆದ ಘಟನೆಯನ್ನು ಶುಕ್ಲಾ ಕುಟುಂಬಕ್ಕೆ ತಿಳಿದವರು ಚಿತ್ರೀಕರಿಸಿ ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com