ಟಿಎಂಸಿ ಅಡಿಯಲ್ಲಿ ಪಶ್ಚಿಮ ಬಂಗಾಳ ಅಪರಾಧ, ದೇಶ ವಿರೋಧಿ ಚಟುವಟಿಕೆಗಳಿಗೆ ಹೆಸರುವಾಸಿ: ಬಿಜೆಪಿ ಆರೋಪ

ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ ಸರ್ಕಾರದ ವಿರುದ್ಧ ಬಿಜೆಪಿ ಶನಿವಾರ ವಾಗ್ದಾಳಿ ನಡೆಸಿದ್ದು, ಟಿಎಂಸಿ ಅಡಿಯಲ್ಲಿ ರಾಜ್ಯವು ಅಪರಾಧ, ದೇಶ ವಿರೋಧಿ ಚಟುವಟಿಕೆಗಳಿಗೆ ಹೆಸರುವಾಸಿಯಾಗುತ್ತಿದೆ ಎಂದು ಆರೋಪಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ ಸರ್ಕಾರದ ವಿರುದ್ಧ ಬಿಜೆಪಿ ಶನಿವಾರ ವಾಗ್ದಾಳಿ ನಡೆಸಿದ್ದು, ಟಿಎಂಸಿ ಅಡಿಯಲ್ಲಿ ರಾಜ್ಯವು ಅಪರಾಧ, ದೇಶ ವಿರೋಧಿ ಚಟುವಟಿಕೆಗಳಿಗೆ ಹೆಸರುವಾಸಿಯಾಗುತ್ತಿದೆ ಎಂದು ಆರೋಪಿಸಿದೆ.

ಪಂಚಾಯತ್ ಚುನಾವಣೆ ವೇಳೆ ಹಿಂಸಾಚಾರ ಸೃಷ್ಟಿಯಾಗಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಮತ್ತು ರಾಜ್ಯಸಭಾ ಸದಸ್ಯ ಸುಧಾಂಶು ತ್ರಿವೇದಿ ಅವರು, ರಾಜ್ಯವು ಕಲೆ, ಸಂಸ್ಕೃತಿ ಮತ್ತು ವಿಜ್ಞಾನದ ಕೇಂದ್ರವಾಗಿತ್ತು. ಆದರೀಗ ಅಪರಾಧಗಳು, ದೇಶವಿರೋಧಿ ಚಟುವಟಿಕೆಗಳಿಗೆ ಹೆಸರುವಾಸಿಯಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಚುನಾವಣಾ ಸಮಯದಲ್ಲಿ ಅಪರಾಧಿಗಳಿಗೆ ರಕ್ಷಣೆ ನೀಡುವ ಮೂಲಕ ಹಿಂಸಾಚಾರಕ್ಕೆ ಅವರನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ. ಟಿಎಂಸಿಯ ವಿವಿಧ ಬಣಗಳು ದಾಳಿ ಮಾಡುತ್ತಿವೆ. "ಬಂಗಾಳದಲ್ಲಿ ಹಲವು ವರ್ಷಗಳಿಂದ ಹಿಂಸಾಚಾರ ನಡೆಯುತ್ತಲೇ ಇದ್ದು, ಇದೀಗ ಕ್ರಮೇಣ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಪರಿಸ್ಥಿತಿಯು 1990 ರ ಬಿಹಾರದಂತೆಯೇ ಇದೆ, ಟಿಎಂಸಿ ರಕ್ತದಿಂದ ಚುನಾವಣೆಯನ್ನು ಕಳಂಕಗೊಳಿಸಿದೆ ಎಂದರು.

ಇದೇ ವೇಳೆ ಚುನಾವಣೆಯಲ್ಲಿ ನ್ಯಾಯಾಂಗ ಹಸ್ತಕ್ಷೇಪವನ್ನು ಶ್ಲಾಘಿಸಿದ ಅವರು, ಕೇಂದ್ರ ಪಡೆಗಳನ್ನು ನಿಯೋಜನೆಗೊಳಿಸದೇ ಹೋಗಿದ್ದರೆ, ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆಗಳಿತ್ತು ಎಂದು ಹೇಳಿದರು.

ಬಳಿಕ ಚುನಾವಣಾ ಆಯೋಗದ ವಿರುದ್ಧವೂ ಕಿಡಿಕಾರಿದ ಅವರು, ಚುನಾವಣೆ ನಡೆಸಲು ಭದ್ರತಾ ಪಡೆಗಳಿಗೆ ಆಯೋಗ ಒತ್ತಾಯಿಸಿತ್ತು. ಆದರೆ, ಯಾವ ರೀತಿಯ ಪಡೆಗಳು ಇರಬೇಕೆಂದು ನಿರ್ಧರಿಸಲು ಅವರಿಗೆ ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com